ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಯೋಜನೆ ಸಮರ್ಪಕ ಅನುಷ್ಠಾನ ಜನತೆ ಸಹಭಾಗಿತ್ವ ಅಗತ್ಯ: ಶಾಸಕ

Vishwanath S
Updated On : 7 Feb 2014, 12:57 pm

ಕೊರಟಗೆರೆ: ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾಗಬೇಕಾದರೆ ಪ್ರತಿಯೊಂದು ಹಂತದಲ್ಲೂ  ಜನತೆಯ ಸಹಭಾಗಿತ್ವ ಅತ್ಯಗತ್ಯ ಎಂದು ಶಾಸಕ ಪಿ.ಆರ್. ಸುಧಾಕರಲಾಲ್ ತಿಳಿಸಿದರು.
ಅವರು ತಾಲೂಕಿನ ಗರುಗದೊಡ್ಡಿ ಗ್ರಾಮದಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ವೈಯುಕ್ತಿಕ ಫಲಾನುಭವಿಗಳಿಗೆ ದನ, ಕುರಿ, ಮೇಕೆ ಸಾಗಾಣಿಕೆ ಶೆಡ್‌ಗಳ ನಿರ್ಮಾಣ ಅನುಷ್ಠಾನ ಕಾಮಗಾರಿಗಳ 46 ಫಲಾನುಭವಿಗಳಿಗೆ ಆದೇಶ ಪತ್ರ ವಿತರಿಸಿ ಮಾತನಾಡಿದರು. ಗರುಗದೊಡ್ಡಿ ಗ್ರಾಮದ ಜನತೆ ಸರ್ಕಾರದ ಯೋಜನೆಗಳ ಸದುಪಯೋಗ ಪಡೆದು ಆರ್ಥಿಕವಾಗಿ ಸದೃಢರಾಗುವುದರೊಂದಿಗೆ ಗ್ರಾಮವನ್ನು ರಾಜ್ಯದಲ್ಲಿ ಮಾದರಿ ಗ್ರಾಮವನ್ನಾಗಿ ರೂಪಿಸಬೇಕಾಗಿದ್ದು ಈ ನಿಟ್ಟಿನಲ್ಲಿ ಈಗಾಗಲೆ ಗ್ರಾಮದಲ್ಲಿ ಬಸವ ಯೋಜನೆಯಡಿ ಹೊಸ ಮನೆಗಳ ನಿರ್ಮಾಣ, ಸುಂದರ ರಸ್ತೆ, ಮನೆಗೊಂದು ಶೌಚಾಲಯ ನಿರ್ಮಿಸಿದ್ದು ಈಗ ನರೆಗಾ ಯೋಜನೆಯಲ್ಲಿ ಪ್ರತಿಯೊಬ್ಬ ರೈತನ ಮನೆಗಳಲ್ಲಿ ದನ ಮತ್ತು ಕುರಿ ದೊಡ್ಡಿಗಳ ನಿರ್ಮಾಣಕ್ಕೆ ಆದೇಶ ಪತ್ರ ನೀಡಲಾಗುತ್ತಿದೆ ಎಂದರು.
ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್ ಮಾತನಾಡಿ ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಗ್ರಾಮೀಣ ಪ್ರದೇಶದಲ್ಲಿ ಬಡ ಕುಟುಂಬಗಳನ್ನು ಗುರುತಿಸಲು  ಗ್ರಾಮಗಳಲ್ಲಿರುವ ಎಲ್ಲಾ ಕುಟುಂಬಗಳನ್ನು ಪರಿಶೀಲಿಸಿ ಅದರಲ್ಲಿ ಸ್ಥಿತಿವಂತರನ್ನು, ಮಧ್ಯಮ ವರ್ಗದವರನ್ನು ಹಾಗೂ ಬಡ ಹಾಗೂ ಕಡು ಬಡವ ಕುಟುಂಬಗಳ ಪಟ್ಟಿಯನ್ನು ಜನ ಸಮುದಾಯವೆ ನಿರ್ಧರಿಸುವ ಪಟ್ಟಿಯನ್ನು ಗ್ರಾಮ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯುವ ಮೂಲಕ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಯೋಜನೆ ಅನುಷ್ಠಾನಗೊಳಿಸುವ ಕಾರ್ಯ ಮಾಡಲಾಗುತ್ತಿದ್ದು ಅದರ ಸದುಪಯೋಗ ಪಡೆಯುವಂತೆ ತಿಳಿಸಿದರು. ಸಭೆಯಲ್ಲಿ ವಡ್ಡಗೆರೆ ಗ್ರಾ.ಪಂ.ಅಧ್ಯಕ್ಷ ಸಿದ್ದಲಿಂಗಪ್ಪ, ಪಿಡಿಓ ಅನಂತರಾಜು ಸರ್ಕಾರದ ಯೋಜನೆಗಳ ಬಗ್ಗೆ ಅದರ ಅನುಷ್ಠಾನದ ಬಗ್ಗೆ ವಿವರಿಸಿದರು. ತಾ.ಪಂ.ಸದಸ್ಯ ಪ್ರಕಾಶ್, ಜೆಡಿಎಸ್ ಕಾರ್ಯಾಧ್ಯಕ್ಷ ನರಸಿಂಹರಾಜು, ಎಂಜಿನಿಯರ್ ಮಧುಶ್ರೀ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement