ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಹಂದಿ ಹಿಡಿಯುತ್ತಿರುವವರ ವಿರುದ್ಧ ಆಕ್ರೋಶ: ಪ್ರತಿಭಟನೆ

Vishwanath S
Updated On : 7 Feb 2014, 12:56 pm

ತುಮಕೂರು: ಅಲೆಮಾರಿ ಬುಡಕಟ್ಟು ಮಹಾಸಭಾ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ  ಸಮಿತಿಯಿಂದ ತುಮಕೂರು ಮಹಾನಗರ ಪಾಲಿಕೆ ಮುಂದೆ ಹಂದಿ ಹಿಡಿಯುತ್ತಿರುವವರ ವಿರುದ್ಧ ಪ್ರತಿಭಟನಾ ಧರಣಿ ಮಾಡಲಾಯಿತು.
ಹಂದಿ ಸಾಕಾಣಿಕೆಯನ್ನೇ ತಮ್ಮ ಕುಲ ಕಸುಬನ್ನಾಗಿ ಮಾಡಿಕೊಂಡು ಜೀವನ ನಿರ್ವಹಣೆಯನ್ನು ಅಲೆಮಾರಿ ಜನಾಂಗದವರು ಮಾಡುತ್ತಿದ್ದಾರೆ. ಆದರೆ ನಗರ ಪಾಲಿಕೆಯು ಯಾವುದೇ ಮುನ್ಸೂಚನೆಯನ್ನು ನೀಡದೇ  ತಮಿಳುನಾಡಿನ ಖಾಸಗಿ ಸಂಸ್ಥೆಯೊಂದಕ್ಕೆ ಗುತ್ತಿಗೆ ನೀಡಿ ಹಂದಿಗಳನ್ನು ಹಿಡಿದು ಸಾಗಿಸಲಾಗುತ್ತಿದೆ. ಆದರೆ ಸ್ಥಳೀಯ ಆಡಳಿತ ಸ್ಥಳೀಯ ಸಂಸ್ಥೆಗಳ ಕಾನೂನಿನಂತೆ ಹಿಡಿದ ಹಂದಿಗಳನ್ನು ನಗರ ಪಾಲಿಕೆಯ ಆವರಣಕ್ಕೆ ತಂದು ಹರಾಜು ಮಾಡಬೇಕು ಹಾಗೂ ಸಾಕಿದವರಿಗೆ ದಂಡ ವಿಧಿಸಿ ಹಿಡಿದ ಹಂದಿಗಳನ್ನು ಮಾಲೀಕರಿಗೆ ಹಿಂತಿರಗಿಸಬೇಕು ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
ಆದರೆ ಇದ್ಯಾವುದನ್ನು ಪಾಲಿಸದ ಪಾಲಿಕೆಯು ಕಳೆದ 2 ದಿನಗಳಿಂದ ಹಂದಿಗಳನ್ನು ಹಿಡಿದು ಹೊರ ರಾಜ್ಯಕ್ಕೆ ಸಾಗಿಸುತ್ತಿದ್ದಾರೆ. ಇದರಿಂದ ತಳ ಸಮುದಾಯವಾದ ಅಲೆಮಾರಿಗಳ ಜೀವನ ನಿರ್ವಹಣೆ ಕಷ್ಟವಾಗಿದೆ, ಇದನ್ನು ಪ್ರಶ್ನಿಸಲು ಹೋದವರಿಗೆ ಮಹಿಳೆಯರು ಮಕ್ಕಳೆನ್ನದೇ ನಗರ ಪಾಲಿಕೆಯ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಗಳು ಅವರ ಮೇಲೆ ಹಲ್ಲೆ ಮಾಡಿ ಅವ್ಯಾಚ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
ಜೀವನ ನಿರ್ವಹಣೆ: ಅಲೆಮಾರಿ ಬುಡಕಟ್ಟು ಮಹಾಸಭಾದ ರಾಮಕ್ಕರ ಅವರು ಮಾತನಾಡಿ ನಮಗೆ ಜೀವನ ನಿರ್ವಹಣೆಗೆ ತಿಳಿದಿರುವುದು ಹಂದಿ ಸಾಕಾಣಿಕೆಯೊಂದೇ ಕಸುಬು ಸರ್ಕಾರವು ನಮಗೆ ಯಾವುದೇ ಪರ್ಯಾಯ ಉದ್ಯೋಗ ಕಲ್ಪಿಸದೇ ಯಾವುದೇ ಮುನ್ಸೂಚನೆಯಿಲ್ಲದೇ ದಿಢೀರನೆ ಈ ರೀತಿ ಮಾಡುತ್ತಿರುವುದು ಸ್ಥಳೀಯ ಸಂಸ್ಥೆಯ ಸರ್ವಾಧಿಕಾರಿ ಧೋರಣೆಯಾಗಿದೆ. ಹಿಡಿದಿರುವ ಸುಮಾರು 300 ಹಂದಿಗಳನ್ನು ನಮಗೆ ಹಿಂದುರಿಗಿಸಿ, ಹಂದಿ ಸಾಕಾಣಿಕೆ ಮಾಡಲು ನಗರದ ಹೊರಗೆ ಸ್ಥಳಾವಕಾಶ ನೀಡಿ ಜೀವನ ನಿರ್ವಹಣೆ ಮಾಡಲು ಸರ್ಕಾರ ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಪರ್ಯಾಯ ವ್ಯವಸ್ಥೆ: ಸ್ಥಳಕ್ಕೆ ಆಗಮಿಸಿದ ಮಹಾನಗರ ಪಾಲಿಕೆಯ ಮಹಾಪೌರರಾದ ಗೀತಾ ರುದ್ರೇಶ್, ಆಯುಕ್ತರಾದ ಆಶಾದ್ ಆಲಿ ಷರೀಫ್ ಮತ್ತು ನಗರ ಪಾಲಿಕೆಯ ಸದಸ್ಯರು ಆಗಮಿಸಿ ಅಲೆಮಾರಿಗಳ ಸಮಸ್ಯೆ ಆಲಿಸಿ ಅಲೆಮಾರಿಗಳಿಗೆ ವಿಶೇಷ ಒತ್ತು ನೀಡಿ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement