ಮಹಿಳೆಯರು ಧೈರ್ಯದಿಂದ ಮುನ್ನುಗ್ಗಿ ಭವಿಷ್ಯ ರೂಪಿಸಿಕೊಳ್ಳಲಿ
ಶಿರಾ: ಮಹಿಳೆಯರಿಗೆ ಈಗ ವಿಫುಲ ಅವಕಾಶಗಳಿದ್ದು ಧೈರ್ಯದಿಂದ ಮುನ್ನುಗ್ಗಿ ಭವಿಷ್ಯ ರೂಪಿಸಿಕೊಳ್ಳಬೇಕಿದೆ.
ಆರ್ಥಿಕ ಅಭಿವೃದ್ಧಿ ಮುಖೇನ ಮಹಿಳೆಯರು ಶೈಕ್ಷಣಿಕವಾಗಿ ಸಾಮಾಜಿಕವಾಗಿ ಸಮರ್ಥರಾಗಿ ಸಬಲೀಕರಣವಾಗಬೇಕೆಂದು ಭಾರತ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಗೌಸ್ ಬೇಗ್ ತಿಳಿಸಿದರು.
ಅವರು ನಗರದ ಬೇಗಂ ಮೊಹಲ್ಲಾ ಸರ್ಕಾರಿ ಉರ್ದು ಪಾಠಶಾಲೆಯಲ್ಲಿ ಗ್ಲೋಬಲ್ ವೆಲ್ಫೇರ್ ಆರ್ಗನೈಸೇಷನ್ ಏರ್ಪಡಿಸಿದ್ದ ಸ್ವಸಹಾಯ ಸಂಘಗಳಿಗೆ ಕಾನೂನು ಅರಿವು-ನೆರವು ಹಾಗೂ ಚೆಕ್ ವಿತರಣೆ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಗ್ಲೋಬಲ್ ಸಂಸ್ಥೆಯು ನಾಲ್ಕು ವರ್ಷದ ಅವಧಿಯಲ್ಲಿ ಸಮಾಜದ ಸೇವೆಯೇ ಮುಖ್ಯ ಗುರಿ ಎಂದು ತಿಳಿದು. 13 ಕಣ್ಣಿನ ಉಚಿತ ಶಿಬಿರ ಏರ್ಪಡಿಸಿ 1200 ಜನರಿಗೆ ತಪಾಸಣೆ ನಡೆಸಿ 720 ಜನರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ನಡೆಸಿ ಮರುದೃಷ್ಟಿ ನೀಡಲಾಗಿದೆ. 8 ಶಾಲೆಯ 1200 ಮಕ್ಕಳಿಗೆ ಎಸ್ಬಿಎಂ ಶಾಖೆಯ ಬ್ಯಾಂಕ್
ಖಾತೆ, ಕಟ್ಟಡ ಕಾರ್ಮಿಕರಿಗೆ ಇಲಾಖೆಯ ಅನುಕೂಲ ಕಲ್ಪಿಸುವ ಹಾಗೂ 5 ಸ್ವಸಹಾಯ ಸಂಘಗಳನ್ನು ರಚಿಸಿ ಮಹಿಳೆಯರಿಗೆ ಆರ್ಥಿಕ ಸೌಲಭ್ಯ ನೀಡಲಾಗುತ್ತಿದೆ ಎಂದು ಗ್ಲೋಬಲ್ ಸಂಸ್ಥೆಯ ಉಪಾಧ್ಯಕ್ಷ ಅಬ್ದುಲ್ ಖಾದರ್ ತಿಳಿಸಿದರು.
ಸಮಾರಂಭದಲ್ಲಿ ಸೊಸೈಟಿಯ ಮಹಮದ್ರಫಿ, ತನ್ವೀರ್ ಅಹಮದ್, ಕೆ.ನಜೀರ್ ಅಹಮದ್, ನಯಾಜ್ ಸೇರಿದಂತೆ ಹಲವರು ಹಾಜರಿದ್ದರು.
ಪ್ರಾಥಮಿಕ ಆರೋಗ್ಯ ಕೇಂದ್ರದ
ಉದ್ಘಾಟನೆ ಇಂದು
ಶಿರಾ: ತಾಲೂಕಿನ ವಿವಿಧ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡಗಳ ಉದ್ಘಾಟನಾ ಕಾರ್ಯಕ್ರಮವು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಅವರು ಫೆ. 8 ರಂದು ಉದ್ಘಾಟಿಸಲಿದ್ದಾರೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ತಾಲೂಕಿನ ದ್ವಾರನಕುಂಟೆಯ ಪ್ರಾಥಮಿಕ ಆರೋಗ್ಯ ಕೇಂದ್ರ, ಬಂದಕುಂಟೆ ಉಪಕೇಂದ್ರದ ನೂತನ ಕಟ್ಟಡ, ದೊಡ್ಡಬಾಣಗೆರೆ ಉಪಕೇಂದ್ರ, ಬ್ರಹ್ಮಸಂದ್ರದ ಪ್ರಾಥಮಿಕ ಆರೋಗ್ಯ ಕೇಂದ್ರದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವರಾದ ಟಿ.ಬಿ.ಜಯಚಂದ್ರ ಕಟ್ಟಡವನ್ನು ಉದ್ಘಾಟನೆ ಮಾಡುವರು. ವಿವಿಧ ಜನಪ್ರತಿನಿಧಿಗಳು ಆಯಾ ಗ್ರಾ.ಪಂ., ತಾ.ಪಂ. ಜಿ.ಪಂ. ಸದಸ್ಯರುಗಳು ಮತ್ತು ಅಧಿಕಾರಿಗಳು ಪಾಲ್ಗೊಳ್ಳುವರು.
ಮುಂಗಡ ಪತ್ರದಲ್ಲಿ ಅಂತರ್ಜಲ ವೃದ್ಧಿಗೆ ಕ್ರಿಯಾ ಯೋಜನೆ ಸೇರಿಸಿ
ಶಿರಾ: ತಾಲೂಕಿನ ಬುಕ್ಕಾಪಟ್ಟಣ ಹೋಬಳಿಯ ಸುತ್ತಮುತ್ತಲಿನ ಗ್ರಾಮಗಳ ಹಾಗೂ ಗುಬ್ಬಿ ತಾಲೂಕಿನ ಹಾಗಲವಾಡಿ ಹೋಬಳಿಯ ವಾಯುವ್ಯ ಭಾಗದ ಗ್ರಾಮಗಳ ಅಂತರ್ಜಲ ವೃದ್ಧಿಸಿ ಕುಡಿಯುವ ನೀರೊದಗಿಸುವ ಕ್ರಿಯಾ ಯೋಜನೆಯನ್ನು 2014-15ನೇ ಸಾಲಿನ ಮುಂಗಡ ಪತ್ರದಲ್ಲಿ ಸೇರ್ಪಡೆ ಮಾಡುವಂತೆ ಆ ಭಾಗದ ನೀರಾವರಿ ಹೋರಾಟ ಸಮಿತಿ ಒತ್ತಾಯಿಸಿದೆ. ಬುಕ್ಕಾಪಟ್ಟಣ ಹೋಬಳಿಯ ಜಯಪ್ರಕಾಶ್, ರಘುರಾವ್, ಗಂಗಣ್ಣ, ಬಸವರಾಜು, ನಿವೃತ್ತ ಎಂಜಿನಿಯರ್ ಜಯರಾಮಯ್ಯ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಶಿರಾ ಮತ್ತು ಗುಬ್ಬಿ ತಾಲೂಕುಗಳು ಅತ್ಯಂತ ಕಡಿಮೆ ಮಳೆ ಬೀಳುವ ಪ್ರದೇಶಗಳಾಗಿದ್ದು, ಬಹು ಆಳದಿಂದ ದೊರಕುವ ನೀರು ಪ್ಲೋರೈಡ್ನಿಂದ ಕೂಡಿದೆ. ಹೀಗಾಗಿ ಸಾರ್ವಜನಿಕ ಹಿತದಷ್ಟಿಯಿಂದ ನಿವೃತ್ತ ಎಂಜಿಯರೊಂದಿಗೆ ಸ್ಥಳ ಪರ್ಯಟನೆ ಮಾಡಿ ಹಾಗಲವಾಡಿ ಕೆರೆಯಿಂದ ಸಂಪರ್ಕನಾಲೆ ನಿರ್ಮಿಸಿ ಮಳೆಗಾಲದಲ್ಲಿನ ನೀರನ್ನು ಕಾಲುವೆಯ ಮೂಲಕ ಭೌಗೋಳಿಕವಾಗಿ ಹರಿಸಬಹುದು ಎಂದರು.
ಹೃದಯ ಸಂಬಂಧಿ ಕಾಯಿಲೆಗಳ ತಪಾಸಣೆ, ಶಸ್ತ್ರ ಚಿಕಿತ್ಸೆ ಶಿಬಿರ
ಚಿಕ್ಕನಾಯಕನಹಳ್ಳಿ: ಇಂದಿನ ಕಲುಷಿತ ವಾತಾವರಣದಲ್ಲಿ ಪ್ರತಿನಿತ್ಯ ಹಲವಾರು ರೋಗಗಳು ಮನುಷ್ಯನಿಗೆ ಪ್ರಕೃತಿಯಿಂದ ಬರುವ ಕೊಡುಗೆಗಳಾಗಿವೆ ಎಂದು ಜಯಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ವೆಂಕಟೇಶ್ ನುಡಿದರು.
ಅವರು ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಹೃದಯ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ ಶಿಬಿರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ತೀರಾ ಗ್ರಾಮೀಣ ಪ್ರದೇಶಗಳಲ್ಲಿ ಬಡಮಧ್ಯಮ ವರ್ಗದ ಜನರಿಗೆ ಅನಾರೋಗ್ಯಕ್ಕೆ ಚಿಕಿತ್ಸೆ ಬಹಳ ದುಬಾರಿಯಾಗಿದೆ. ಇದರಿಂದ ಸಹಜವಾಗಿ ಜನ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಕಡಿಮೆ. ಆದ್ದರಿಂದ ನಮ್ಮ ಸಂಘಟನೆ ವಿಮ್ಸ್ ಆಸ್ಪತ್ರೆಯ ಸಹಯೋಗದಲ್ಲಿ ಹೃದಯ ಸಂಬಂಧಿ ರೋಗಗಳಿಗೆ ತಪಾಸಣೆ ಮತ್ತು ಚಿಕಿತ್ಸೆ ಶಿಬಿರವನ್ನು ಏರ್ಪಡಿಸಿದ್ದೇವೆ ಎಂದರು.