ರಕ್ತದಾನ ಪವಿತ್ರ ಕಾರ್ಯ: ಕೆ.ಷಡಕ್ಷರಿ
ತಿಪಟೂರು: ರಕ್ತದಾನ ಕಾರ್ಯಕ್ರಮವು ಒಂದು ಪವಿತ್ರವಾದ ಕಾರ್ಯವಾಗಿದೆ. ಮನುಷ್ಯನಿಗೆ ಎಲ್ಲ ಸಂಪತ್ತಿಗಿಂತಲೂ ಆರೋಗ್ಯ ಸಂಪತ್ತು ಮುಖ್ಯವಾದುದು. ಪ್ರತಿಯೊಬ್ಬರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಬೇಕೆಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ರಕ್ತದಾನ ಶಿಬಿರ ಹಾಗೂ ಆರೋಗ್ಯ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ದುಶ್ಚಟಗಳಿಗೆ ಬಲಿಯಾದ ವ್ಯಕ್ತಿಯ ರಕ್ತವು ಯೋಗ್ಯವಾದುದಾಗಿರುವುದಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ಜೀವನ ನಡೆಸಬೇಕೆಂದು ಕರೆ ನೀಡಿದರು. ಸರ್ಕಾರಿ ಆಸ್ಪತ್ರೆಯನ್ನು ಎನ್.ಆರ್.ಎಚ್.ಎಂ.ಯೋಜನೆ ಅಡಿಯಲ್ಲಿ ಅತ್ಯುತ್ತವಾದ ರೀತಿಯಲ್ಲಿ ಮೇಲ್ದರ್ಜೆಗೆ ಏರಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಪ್ರಹ್ಲಾದ್ ಮಾತನಾಡಿ ರಕ್ತದಾನ ಎಲ್ಲ ದಾನಗಳಿಗಿಂತ ಶ್ರೇಷ್ಠವಾದುದಾಗಿದ್ದು, ವಿದ್ಯಾರ್ಥಿಗಳು ರಕ್ತದಾನ ಮಾಡುವ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದೆಂದರು.
ಹೃದಯ ರೋಗ ತಜ್ಞ ಡಾ. ಡಾ. ಚನ್ನಬಸವಯ್ಯ ರಕ್ತದಾನ ಇತಿಹಾಸದ ಬಗ್ಗೆ ಸವಿವರವಾಗಿ ತಿಳಿಸಿದಲ್ಲದೆ ರಕ್ತದಾನ ವರ್ಣ, ವರ್ಗ, ಜಾತಿ ಭೇದವಿಲ್ಲದೆ ರಕ್ತದಾನ ಮಾಡುವ ಮನೋಭಾವನೆ ಹೊಂದಬೇಕೆಂದು ಕರೆ ನೀಡಿದರು.
ರಕ್ತದಾನ ಮಾಡಲು ಮುಂದಾಗಿ: ರಕ್ತದಾನ ಶಿಬಿರದ ವೀಣಾ ರಕ್ತದಾನ ಮಾಡುವ ವ್ಯಕ್ತಿಗೆ ಇರಬೇಕಾದ ಲಕ್ಷಣಗಳನ್ನು ತಿಳಿಸುತ್ತಾ ಯಾವುದೇ ಪೂರ್ವ ಗ್ರಹಿಕೆ ಇಲ್ಲದೆ ರಕ್ತದಾನ ಮಾಡಲು ಮುಂದಾಗಬೇಕೆಂದರು.
ಸ್ತ್ರೀರೋಗ ತಜ್ಞ ಡಾ.ರವಿ ನಮ್ಮಲ್ಲಿ ರಕ್ತ ಬ್ಯಾಂಕ್ಗಳ ಅವಶ್ಯಕತೆಯಿದೆ. ಇಲ್ಲಿ ಸಂಗ್ರಹಿಸಿದ ರಕ್ತವನ್ನು ನಾವು ತುಮಕೂರಿನ ಮದರ್ ಬ್ಲಡ್ ಬ್ಯಾಂಕಿನಲ್ಲಿ ಶೇಖರಿಸುತ್ತೇವೆ. ಅವಶ್ಯಕತೆ ಇದ್ದಾಗ ಅಲ್ಲಿಂದಲ್ಲೇ ತರಿಸಬೇಕಾಗುತ್ತದೆ. ತಾಲೂಕಿನ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ತಿಪಟೂರಿಗೆ ಆ ಸೌಲಭ್ಯವನ್ನು ಕೊಡಬೇಕೆಂದು ಶಾಸಕರಿಗೆ ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ. ಜಯದೇವಪ್ಪ ಜಗತ್ತಿನ ಪ್ರತಿಯೊಂದು ಜೀವಿಗಳಿಗೂ ಪರೋಪಕಾರದ ಗುಣವನ್ನು ಮೈಗೂಡಿಸಿಕೊಳ್ಳಬೇಕು. ಹೀಗಾದಾಗ ಮಾತ್ರ ಪ್ರತಿಯೊಬ್ಬ ಜೀವಿಯು ಸುಖಮಯ ಜೀವನ ನಡೆಸಲು ಸಾಧ್ಯವಾಗುತ್ತದೆ. ನಮ್ಮ ಕಾಲೇಜಿನಲ್ಲಿ ನೂರಾರು ವಿದ್ಯಾರ್ಥಿಗಳು ರಕ್ತದಾನ ಮಾಡಿದ್ದಾರೆ. ರಕ್ತದಾನ ಮಾಡುವುದರಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯವು ಸದೃಢವಾಗುತ್ತದೆ ಎಂದು ತಿಳಿಸಿದರು.
ನೇತ್ರ ತಜ್ಞ ಡಾ.ಯುವರಾಜ್ ಯಾದವ್, ಪ್ರೊ.ರಾಮಚಂದ್ರಪ್ಪ, ಪೋಷಕ ಸಂಘದ ಅಧ್ಯಕ್ಷ ಬಿಲ್ಲೇಮನೆ ಚಂದ್ರಶೇಖರ್ ಉಪಸ್ಥಿತರಿದ್ದರು. ಶಿಬಿರದಲ್ಲಿ 130ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಉಪನ್ಯಾಸಕರು ರಕ್ತದಾನ ಮಾಡಿದರು. ಪ್ರೊ.ಈರಯ್ಯ ಸ್ವಾಗತಿಸಿ, ಪ್ರೊ.ಯಶೋಧ ನಿರೂಪಿಸಿ, ಪ್ರೊ.ಕುಮಾರಸ್ವಾಮಿ ವಂದಿಸಿದರು.