ಉಪವಿಭಾಗಾಧಿಕಾರಿ ಭರವಸೆ: ಪ್ರತಿಭಟನೆ ಅಂತ್ಯ
ಕುಣಿಗಲ್: ಹುಲಿಯೂರುದುರ್ಗ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿ ದರ್ಜೆಗೇರಿಸುವಂತೆ ಹಾಗೂ ರುದ್ರಭೂಮಿ ವ್ಯವಸ್ಥೆಗೆ ಕ್ರಮಕ್ಕೆ ಆಗ್ರಹಿಸಿ ಹು.ದುರ್ಗ ಹೋಬಳಿ ಕರವೇ ನೀಡಿದ್ದ ಪ್ರತಿಭಟನಾ ಸಭೆ ಮುಂದುವರೆದಿದ್ದು, ಉಪವಿಭಾಗಾಧಿಕಾರಿ ಆಗಮಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಮೇರೆಗೆ ಗುರುವಾರ ಮಧ್ಯಾಹ್ನ ಪ್ರತಿಭಟನೆ ಅಂತ್ಯಗೊಂಡಿತು.
ಬುಧವಾರ ಪಟ್ಟಣ ಪಂಚಾಯಿತಿ ಮತ್ತು ರುದ್ರಭೂಮಿಗೆ ಹುಲಿಯೂರುದುರ್ಗ ಕರವೇ ಮತ್ತು ಇತರೆ ಸಂಘ ಸಂಸ್ಖೆಗಳು ಬಂದ್ ನಡೆಸಿ, ಪ್ರತಿಭಟನೆ ಮುಂದುವರೆಸಿದ್ದು ಬುಧವಾರ ರಾತ್ರಿಯಾದರೂ ಕಂದಾಯ ಇಲಾಕಾಧಿಕಾರಿಗಳು ಯಾವುದೇ ನಿರ್ಧಾರ ಕೈಗೊಳ್ಳುವಲ್ಲಿ ವಿಫಲರಾದ ಕಾರಣ ಗುರುವಾರ ಬೆಳಗ್ಗೆ ಪ್ರತಿಭಟನೆ ಮುಂದುವರೆಸಿದರು. ಕರವೇ ಹೋಬಳಿ ಅಧ್ಯಕ್ಷ ಎಂ.ಸಿ. ಬಾಬು, ಪದಾಧಿಕಾರಿಗಳಾದ ವಿವೇಕಾನಂದ, ಗ್ರಾಪಂ ಅಧ್ಯಕ್ಷ ವೆಂಕಟೇಶ್, ಸದಸ್ಯ ನಟರಾಜ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಇವರ ಪ್ರತಿಭಟನೆಗೆ ಬಿಜೆಪಿ ಮುಖಂಡ ಡಿ. ಕೃಷ್ಣಕುಮಾರ್, ಜೆಡಿಎಸ್ ಮುಖಂಡ ಎಚ್. ಎ. ಜಯರಾಮಯ್ಯ ಗುರುವಾರ ಬೆಂಬಲಿಸಿ ಪಾಲ್ಗೊಂಡಿದ್ದು ಪ್ರತಿಭಟನೆ ತೀವ್ರಗೊಂಡಿತು. ಮಧ್ಯಾಹ್ನ ಉಪವಿಭಾಗಾಧಿಕಾರಿ ಅನಂದ್, ತಹಸೀಲ್ದಾರ್ ಪುಟ್ಟನರಸಯ್ಯ ಅಗಮಿಸಿ, ಪ್ರತಿಭಟನಾಕಾರರೊಂದಿಗೆ ಚರ್ಚಿಸಿ, ಮನೆ ನಿರ್ಮಿಸಲು ಸೌಲಭ್ಯ ಕಲ್ಪಿಸಿಕೊಡುವ ಭರವಸೆ ನೀಡಿದ ಮೇರೆಗೆ ಹಾಗೂ ಪಟ್ಟಣ ಪಂಚಾಯಿತಿ ಮೇಲ್ದರ್ಜೆಗೆ ಏರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ನೀಡಿದ ಭರವಸೆ ಮೇರೆಗೆ ಪ್ರತಿಭಟನೆ ಹಿಂಪಡೆದರು.