ಗೂಂಡಾ ಕಾಯ್ದೆ: ಸೊಗಡು ಗುಡುಗು
ಕನ್ನಡಪ್ರಭ ವಾರ್ತೆ , ತುಮಕೂರು , ಫೆ.13
ಹಿಂದೂ ಹುಡುಗರ ಮೇಲೆ ಗೂಂಡಾ ಕಾಯ್ದೆಯಡಿ ಪೊಲೀಸರು ನಿರಂತರವಾಗಿ ಕೇಸು ದಾಖಲಿಸುತ್ತಿದ್ದಾರೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಗಂಭೀರ ಆರೋಪ ಮಾಡಿದರು.
ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಲವ್ ಜಿಹಾದ್ ಹೆಸರಿನಲ್ಲಿ ಬಂಧಿಸಬೇಕಾದವರನ್ನು ಕೈ ಬಿಟ್ಟು ಹಿಂದೂ ಹುಡುಗರ ಮೇಲೆ ಗೂಂಡಾ ಕಾಯ್ದೆ ಕೇಸು ಹಾಕಲಾಗುತ್ತಿದೆ. ಇದು ಹೀಗೆ ಮುಂದುವರಿದರೆ ಕಾನೂನನ್ನು ಕೈಗೆ ತೆಗೆದುಕೊಳ್ಳುವ ಎಚ್ಚರಿಕೆಯನ್ನು ನೀಡಿದ್ದಾರೆ.
ಈಗಾಗಲೇ ತುಮಕೂರು, ಶಿರಾ, ಹುಳಿಯಾರು, ಕುಣಿಗಲ್ ಮುಂತಾದ ಕಡೆ ಗೂಂಡಾ ಕಾಯ್ದೆಯಡಿ ಹಿಂದೂ ಹುಡುಗರ ಮೇಲೆ ಕೇಸು ದಾಖಲು ಮಾಡಲಾಗುತ್ತಿದೆ. ತುಮಕೂರಿನ ಮಂಡಿಪೇಟೆಯಲ್ಲಿ ವಿವಾಹಿತ ಮಹಿಳೆಯೊಬ್ಬಳನ್ನು ಮತ್ತೊಂದು ಕೋಮಿನ ವ್ಯಕ್ತಿಯೊಬ್ಬ ಕೆರೆದುಕೊಂಡು ಹೋಗಿದ್ದ ಎಂದು ಆಪಾದಿಸಿದರು.
ಈ ಕೂಡಲೇ ಲವ್ ಜಿಹಾದ್ ಬಗ್ಗೆ ಪೊಲೀಸರು ಎಚ್ಚರ ವಹಿಸಬೇಕು. ಅನಗತ್ಯವಾಗಿ ಹಿಂದೂ ಹುಡುಗರ ಮೇಲೆ ಕೇಸು ಹಾಕುವುದನ್ನು ನಿಲ್ಲಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮಾಜಿ ಸಚಿವರು ಆಗ್ರಹಿಸಿದ್ದಾರೆ.
ಕಳೆದ 20 ವರ್ಷಗಳಿಂದ ತಾವು ಶಾಸಕರಾಗಿದ್ದ ಅವಧಿಯಲ್ಲಿ ಯಾವೊಂದು ಕೃತ್ಯಗಳು ನಡೆಯುತ್ತಿರಲಿಲ್ಲ. ಈಗ ಲವ್ ಜಿಹಾದ್ ಅವ್ಯಾಹತವಾಗಿ ನಡೆಯುತ್ತಿದೆ. ಪೊಲೀಸರು ಮಾತ್ರ ಸರ್ಕಾರದ ಕೈಗೊಂಬೆಯಾಗಿದ್ದಾರೆ. ಇನ್ನು ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಯಾಸಿನ್ ಭಟ್ಕಳ್: ಯಾಸಿನ್ ಭಟ್ಕಳ್ ತುಮಕೂರಿನ ಯಾವ ಭಾಗದಲ್ಲಿ ಇದ್ದ ಎಂಬುದನ್ನು ಸರ್ಕಾರ ಹೇಳಬೇಕು. ಯಾಸಿನ್ ಭಟ್ಕಳ್ಗೆ ತುಮಕೂರು ನಂಟಿತ್ತು ಎಂಬುದು ಈ ಹಿಂದೆ ಜಗಜ್ಜಾಹೀರವಾಗಿತ್ತು. ಸರ್ಕಾರಕ್ಕೆ ತಾಕತ್ತಿದ್ದರೆ ಈ ಬಗ್ಗೆ ತಿಳಿಸಬೇಕು ಎಂದರು.
ಸಿಎಂ ಭೇಟಿ ಮಾಡಲಿಲ್ಲ: ತುಮಕೂರಿನಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಸಂಬಂಧ ತಾವು, ಶಿವಯೋಗಿಸ್ವಾವು, ಸುರೇಶ್ಗೌಡ, ವೈ.ಎ. ನಾರಾಯಣಸ್ವಾಮಿ, ಬಿ.ಸಿ. ನಾಗೇಶ್ ಅವರಿಗೆ ಮುಖ್ಯಮಂತ್ರಿಗಳ ಭೇಟಿಗೆ ಅವಕಾಶ ಕೊಟ್ಟಿದ್ದರು. ಬಜೆಟ್ನಲ್ಲಿ ಮೆಡಿಕಲ್ ಕಾಲೇಜಿಗೆ ಹಣ ನೀಡಬೇಕೆಂಬ ಮನವಿಯನ್ನು ಕೊಡಬೇಕಾಗಿತ್ತು. ಆದರೆ ಮುಖ್ಯಮಂತ್ರಿಗಳು ತಮ್ಮನ್ನು ಭೇಟಿ ಮಾಡಲಿಲ್ಲ ಎಂದರು.
ಅವರು ಭೇಟಿಯಾಗದಿದ್ದರೂ ಪರ್ವಾಗಿಲ್ಲ. ಬಜೆಟ್ನಲ್ಲಿ ತುಮಕೂರು ಮೆಡಿಕಲ್ ಕಾಲೇಜಿಗೆ ಹಣ ನೀಡಲಿ ಎಂದರು. ತುಮಕೂರು ದೊಡ್ಡ ಜಿಲ್ಲೆಯಾಗಿದ್ದು ಮೆಡಿಕಲ್ ಕಾಲೇಜು ಬೇಕಾಗಿದೆ. ಈ ಹಿನ್ನೆಲೆಯಲ್ಲಿ ಸದನದಲ್ಲಿ ಮೆಡಿಕಲ್ ಕಾಲೇಜು ಬಗ್ಗೆ ಚರ್ಚಿಸಲು ಜಿಲ್ಲೆಯ ಎಲ್ಲಾ ಶಾಸಕರಿಗೆ ಅವರು ಮನವಿ ಮಾಡಿದ್ದಾರೆ.
ಮಾ.1 ಕ್ಕೆ ಸತ್ಯಾಗ್ರಹ: ತುಮಕೂರಿಗೆ ಮೆಡಿಕಲ್ ಕಾಲೇಜು ಸ್ಥಾಪನೆ ಸಂಬಂಧ ಮಾರ್ಚ್ 1 ರಂದು ತಾವು ಸತ್ಯಾಗ್ರಹ ನಡೆಸುವುದು ನಿಶ್ಚಿತ ಎಂದರು. ತುಮಕೂರು ಶಾಸಕ ರಫೀಕ್ ಅಹಮದ್ ಅವರು ಸರ್ಕಾರದ ಜತೆ ಚರ್ಚಿಸಿ ತುಮಕೂರಿಗೆ ಈ ಸಾಲಿನಲ್ಲೇ ಮಂಜೂರು ಮಾಡಿಸಲು ಪ್ರಯತ್ನಿಸಬೇಕು ಎಂದು ತಿಳಿಸಿದರು. ಒಂದು ವೇಳೆ ಮುಖ್ಯಮಂತ್ರಿಗಳು ತುಮಕೂರಿಗೆ ಮೆಡಿಕಲ್ ಕಾಲೇಜನ್ನು ಮಂಜೂರು ಮಾಡಿದರೆ ಕೊನೆಯವರೆಗೂ ಅವರಿಗೆ ಆಭಾರಿಯಾಗಿರುತ್ತೇನೆ ಎಂದರು.
ಹುಲಿನಾಯ್ಕರ್ ವಿರುದ್ಧ ಗರಂ: ತುಮಕೂರು ಸರ್ಕಾರಿ ಆಸ್ಪತ್ರೆಯಲ್ಲಿ ಯಾವುದೇ ಸೌಲಭ್ಯವಿಲ್ಲವೆಂಬ ವಿಧಾನ ಪರಿಷತ್ ಸದಸ್ಯ ಡಾ. ಎಂ.ಆರ್. ಹುಲಿನಾಯ್ಕರ್ ಆರೋಪಕ್ಕೆ ಸೊಗಡು ಶಿವಣ್ಣ ತೀಕ್ಷ್ಣಣವಾಗಿ ಪ್ರತಿಕ್ರಿಯಿಸಿದ್ದಾರೆ. ಅವರು ಈ ಮೊದಲು ಸರ್ಕಾರಿ ಆಸ್ಪತ್ರೆಯಲ್ಲೇ ಕೆಲಸ ಮಾಡಿದವರು. ತುಮಕೂರು ಆಸ್ಪತ್ರೆಯಲ್ಲಿದ್ದ ತಜ್ಞರನ್ನು ತಮ್ಮ ಆಸ್ಪತ್ರೆಗೆ ಸೇರಿಸಿಕೊಂಡಿದ್ದು ಎಲ್ಲರಿಗೂ ಗೊತ್ತಿದೆ ಎಂದು ತಿರುಗೇಟು ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ನಗರ ಬಿಜೆಪಿ ಅಧ್ಯಕ್ಷ ಕೆ.ಪಿ. ಮಹೇಶ್, ಉಮಾಶಂಕರ್, ವಿಶ್ವನಾಥ್, ಸನತ್, ಹೆಚ್.ಎನ್. ಉಮೇಶ್, ಗಣೇಶ್, ಪ್ರವೀಣ, ಹರೀಶ್ ಇದ್ದರು.