ಶಿಂಷಾ ನದಿ ಪ್ರದೇಶದಲ್ಲಿ ಅವ್ಯಾಹತ ಮರಳು ಅಕ್ರಮ ಸಾಗಾಟ
ತುರುವೇಕೆರೆ: ಶಿಂಷಾ ನದಿ ಪ್ರದೇಶದಲ್ಲಿ ಅವ್ಯಾಹತವಾಗಿ ಮರಳಿನ ಅಕ್ರಮ ಸಾಗಾಟ ನಿರಾಂತಕವಾಗಿ ನಡೆಯುತ್ತಿದೆ. ಅಕ್ರಮ ಮರಳು ಸಾಗಾಟಕ್ಕೆ ನಿಯಂತ್ರಣ ಮಾಡಬೇಕು ಹಾಗೂ ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವೇ ಆದೇಶ ನೀಡಿದೆ. ಆದರೂ ಸಹ ಸ್ಥಳೀಯ ಅಧಿಕಾರಿಗಳು ಶಾಮೀಲಾಗಿರುವುದರಿಂದ ಅಕ್ರಮ ಮರಳುಗಾರಿಕೆ ನಿರಾತಂಕವಾಗಿ ನಡೆಯುತ್ತಿದೆ ಎಂದು ಸ್ವತಃ ಶಾಸಕ ಎಂ.ಟಿ.ಕೃಷ್ಣಪ್ಪನವರೇ ಆಡಳಿತದ ವಿರುದ್ಧ ಕಿಡಿಕಾರಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು ಶಿಂಷಾ ನದಿ ತಟದಿಂದ ಮರಳನ್ನು ತೆಗೆಯುತ್ತಿರುವ ಕಾರಣ ಅಂತರ್ಜಲ ಬತ್ತಿಹೋಗುತ್ತಿದೆ. ಅಕ್ರಮ ಮರಳುಗಾರಿಕೆ ನಡೆಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರೂ ಸಹ ತಾಲೂಕಿನ ತಹಸೀಲ್ದಾರ್ ಸಹಿತ ಸಂಬಂಧಿಸಿದ ಪೊಲೀಸ್ ಇಲಾಖೆ ಕಣ್ಣುಮುಚ್ಚಿಕೊಂಡು ಕುಳಿತಿದೆ ಎಂದು ದೂರಿದರು. ಸರ್ಕಾರದ ಆದೇಶಕ್ಕೆ ಈ ಅಧಿಕಾರಿಗಳು ಕವಡೆ ಕಿಮ್ಮತ್ತನ್ನೂ ನೀಡುತ್ತಿಲ್ಲ. ಇಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಎಂ.ಟಿ.ಕೃಷ್ಣಪ್ಪ ಹೇಳಿದರು. ಪಟ್ಟಣದ ದಬ್ಬೇಘಟ್ಟ ರಸ್ತೆಗೆ ಶಂಕುಸ್ಥಾಪನೆ ಮಾಡಿ 10 ತಿಂಗಳಾದರೂ ಸಹ ಅಧಿಕಾರಿಗಳು ರಸ್ತೆ ಕಾಮಗಾರಿ ಮಾಡಿಲ್ಲ. ರಸ್ತೆ ಸಂಪೂರ್ಣ ಹಾಳಾಗಿದ್ದು ಜನಸಾಮಾನ್ಯರೂ ಓಡಾಡದ ರೀತಿ ಆಗಿದೆ. ಪ್ರತಿದಿನ ಅಪಘಾತಗಳು ನಡೆಯುತ್ತಿದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಕೃಷ್ಣಪ್ಪ ಕಿಡಿಕಾರಿದರು. ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆಯೂ ನಿರಾತಂಕವಾಗಿ ನಡೆಯುತ್ತಿದೆ. ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಮೌನವಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ಕೃಷ್ಣಪ್ಪ ಕಿಡಿಕಾರಿದ್ದಾರೆ.
ಮಲತಾಯಿ ಧೋರಣೆ: ಕಾಂಗ್ರೆಸ್ ಶಾಸಕರು ಇರುವ ಕಡೆ ಮಾತ್ರ ರಸ್ತೆ ಅಭಿವೃಧ್ಧಿ ಹಾಗೂ ಇತರೆ ಕಾಮಗಾರಿ ನೀಡುವ ಈ ಕಾಂಗ್ರೆಸ್ ಸರ್ಕಾರ ಮಲತಾಯಿ ಧೋರಣೆ ಮಾಡುತ್ತಿದೆ. ಲೋಕೋಪಯೋಗಿ ಇಲಾಖಾ ಸಚಿವ ಮಹದೇವಪ್ಪನವರು ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಾರೆ. ಆದರೆ ಅವರು ಮಾಡುತ್ತಿರುವ ಕಾರ್ಯವಾದರೂ ಏನು ಎಂಬುದನ್ನು ಸಚಿವರು ಮನಗಾಣಬೇಕು ಎಂದಿರುವ ಕೃಷ್ಣಪ್ಪ ಕೇಂದ್ರ ಸರ್ಕಾರ ನೀಡುವ ಹಣವನ್ನೂ ತಾರತಮ್ಯ ಮಾಡಲಾಗುತ್ತಿದೆ. ಈ ಕುರಿತು ಸ್ವತಃ ಮುಖ್ಯಮಂತ್ರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇವರ ಧೋರಣೆಯ ವಿರುದ್ಧ ತಾವು ನ್ಯಾಯಾಲಯದ ಮೆಟ್ಟಿಲು ಏರಿರುವುದಾಗಿ ಹೇಳಿದರು. ಶಾಸಕರ ಮೂಲಭೂತ ಅಗತ್ಯಗಳನ್ನು ಪೂರೈಸಲು ರಾಜ್ಯ ಸರ್ಕಾರ ವಿಫಲವಾಗಿರುವುದನ್ನು ವಿರೋಧಿಸಿ ಪ್ರತಿಭಟನೆ ಮಾಡುವ ಇಂಗಿತ ವ್ಯಕ್ತಪಡಿಸಿದರು.