'ತೀರ್ಪು ನೀಡಲು ವಕೀಲರ ಸಹಕಾರ ಅಗತ್ಯ'
ಮಧುಗಿರಿ: ನ್ಯಾಯಾಧೀಶರು ತೀರ್ಪು ನೀಡಲು ವಕೀಲರ ಸಹಕಾರ ಅಗತ್ಯ, ಕಕ್ಷಿದಾರರಿಗೆ ನ್ಯಾಯ ದೊರಕಿಸಿ ಕೊಡುವುದು ವಕೀಲ ವೃತ್ತಿ ಸಾಧನ ಮತ್ತು ಪುಣ್ಯದ ಕೆಲಸ ಎಂದು ಶಾಸಕ ಕೆ.ಎನ್. ರಾಜಣ್ಣ ಅಭಿಪ್ರಾಯಪಟ್ಟರು.
ಇಲ್ಲಿನ ವಕೀಲರ ಸಂಘದ ಆಶ್ರಯದಲ್ಲಿ ಶಾಸಕ ಕೆ.ಎನ್.ರಾಜಣ್ಣ ಅವರಿಗೆ ನಡೆದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಕಾನೂನಿನ ತಿಳಿವಳಿಕೆಯಿಂದ ಜನ ಸಾಮಾನ್ಯರ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಲು ವಕೀಲರ ವೃತ್ತಿ ಅತಿ ಮುಖ್ಯ ಎಂದ ರಾಜಣ್ಣ, ಮಧುಗಿರಿಯ ವಕೀಲರ ಸಂಘದಲ್ಲಿ ಗುಣಾತ್ಮಕ ವಕೀಲರು ಕಾರ್ಯ ನಿರ್ವಹಿಸುತ್ತಿದು ಮುಂದಿನ ತಲೆಮಾರು ರೂಪಿಸಲು ಎಲ್ಲರೂ ಪಕ್ಷಾತೀತವಾಗಿ ಮುತುವರ್ಜಿ ವಹಿಸಿ ಕಾರ್ಯ ನಿರ್ವಹಿಸ ಬೇಕೆಂದರು.
ಹಿರಿಯ ವಕೀಲ ಎಸ್. ಶ್ಯಾಮನಾಥ್ ಮಾತನಾಡಿ, ಶಾಸಕ ಕೆ.ಎನ್. ರಾಜಣ್ಣ ಪಕ್ಷಾತೀತ ವ್ಯಕ್ತಿ, ನುಡಿದಂತೆ ನಡೆಯುವ ಪ್ರಗತಿ ಶೀಲ ರಾಜಕಾರಣಿ ಎಂದು ಕೊಂಡಾಡಿದರು. ಖ್ಯಾತ ವಕೀಲರಾದ ಪಿ.ಸಿ.ಕೃಷ್ಣಾರೆಡ್ಡಿ ಪ್ರಾಸ್ತಾವಿಕ ನುಡಿಗಳನ್ನಾಡಿ, ಶಾಸಕ ಕೆ.ಎನ್.ರಾಜಣ್ಣ ಅವರ ಕಾಳಜಿಯಿಂದ ಮಧುಗಿರಿ ಜಿಲ್ಲೆಯಾಗುವ ಎಲ್ಲ ಲಕ್ಷಣಗಳಿದ್ದು, ತಮ್ಮ ಅನುದಾನದಲ್ಲಿ ವಕೀಲರ ಭವನ, ಪುಸ್ತಕ,ಗ್ರಂಥಾಲಯ ಹೀಗೆ ಹತ್ತು ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದರು.
ಉಪವಿಭಾಗಾಧಿಕಾರಿ ತಬಸ್ಸುಮ್ ಜುಹೇರಾ ಜಮೀನು ಭೂಸ್ವಾಧೀನ ಪಡಿಸಿಕೊಂಡ ರೈತರಿಗೆ ಸರ್ಕಾರದಿಂದ ಬರುವ ಬರಬೇಕಿರುವ ಸುಮಾರು 200 ರೈತರ ಪರಿಹಾರವನ್ನು ಹಂತ ಹಂತವಾಗಿ ದೊರಕಿಸಿ ಕೊಡುವುದಾಗಿ ತಿಳಿದರು. ವಕೀಲರ ಸಂಘದ ಅಧ್ಯಕ್ಷ ಕೆ.ಎನ್. ಜಯರಾಮ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಪಾಂಡುರಂಗಪ್ಪ, ಜಿಲ್ಲಾ ಸತ್ರ ನ್ಯಾಯಾಧೀಶ ಪಿ.ಟಿ.ಕಟ್ಟಿಮನೆ, ನ್ಯಾಯಾಧೀಶರಾದ ವೇಲಾ, ಲಕ್ಷ್ಮೀ, ಕಸನಪ್ಪನಾಯಕ್, ಸುರೇಶ್, ತಹಸೀಲ್ದಾರ್ ರಮೇಶ್, ತುಮುಲ್ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್, ಚಂದ್ರಶೇಖರಗೌಡ ಎಲ್ಲ ವಕೀಲರು ಉಪಸ್ಥಿತರಿದ್ದರು.