ಬಿಸಿಎಂ ವಿದ್ಯಾರ್ಥಿಗಳು ಶುಲ್ಕ ವಿನಾಯ್ತಿಯಿಂದ ವಂಚಿತ: ಆಕ್ರೋಶ
ತುಮಕೂರು: ಬಿಸಿಎಂ ವಿದ್ಯಾರ್ಥಿಗಳು ಶುಲ್ಕ ವಿನಾಯ್ತಿ ಸೌಲಭ್ಯದಿಂದ ವಂಚಿತವಾಗುವಂತೆ ಮಾಡಿರುವ ಸರ್ಕಾರಿ ಆದೇಶ ಖಂಡಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್ಓ) ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ಎದುರು ನೆರೆದಿದಿದ ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಎಸ್ಯುಸಿಐ) ದ ತುಮಕೂರು ನಗರ ಕಾರ್ಯದರ್ಶಿ ಎಸ್.ಎನ್. ಸ್ವಾಮಿ ಮಾತನಾಡಿ, ಹಿಂದುಳಿದ ವರ್ಗಗಳ ಅಭಿವೃದ್ಧಿಯನ್ನು ಮಾಡುತ್ತೇವೆಂದು ಅಧಿಕಾರಕ್ಕೇರಿದ ಕಾಂಗ್ರೆಸ್ ಸರ್ಕಾರ, ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯಲು ಇರುವ ಕನಿಷ್ಠ ಸೌಲಭ್ಯವನ್ನು ಕಿತ್ತುಕೊಳ್ಳಲು ಮುಂದಾಗಿದೆ. ಹಿಂದುಳಿದ ವಿದ್ಯಾರ್ಥಿಗಳಿಗೆ ಓದಲು ಉತ್ತೇಜನ ನೀಡುವುದನ್ನು ಬಿಟ್ಟು, ಅನಗತ್ಯ ನಿಬಂಧನೆಗಳನ್ನು ವಿದ್ಯಾರ್ಥಿಗಳ ಮೇಲೆ ಹೇರಲಾಗುತ್ತಿದೆ. ಶುಲ್ಕ ವಿನಾಯ್ತಿ ಸರ್ಕಾರ ನೀಡುವ ಭಿಕ್ಷೆಯಲ್ಲ. ಶಿಕ್ಷಣ, ಆರೋಗ್ಯ ಹಾಗೂ ಇತರೆ ಸೌಲಭ್ಯಗಳನ್ನು ನೀಡಲೆಂದೇ ಜನಸಾಮಾನ್ಯರಿಂದ ಕೋಟ್ಯಂತರ ರು. ತೆರಿಗೆಯ ಹಣ ವಸೂಲಿ ಮಾಡಲಾಗುತ್ತಿದೆ. ಆದರೆ ತೆರಿಗೆಯ ಹಣವನ್ನು ಭ್ರಷ್ಟಾಚಾರ ಮಾಡಿ ಲೂಟಿ ಮಾಡುವ ಕಾರ್ಯದಲ್ಲಿ ಎಲ್ಲ ಸರ್ಕಾರಗಳು ಭಾಗಿಯಾಗಿವೆ. ಬಂಡವಾಳಗಾರರಿಗೆ ಕೋಟ್ಯಂತರ ರು. ವಿನಾಯ್ತಿಯನ್ನು ನೀಡುತ್ತಿರುವ ಸರ್ಕಾರದ ಜನವಿರೋಧಿ ನೀತಿಯನ್ನು ಖಂಡಿಸಬೇಕು ಹಾಗೂ ವಿದ್ಯಾರ್ಥಿ ವಿರೋಧಿ ಕ್ರಮವನ್ನು ಸೋಲಿಸಲು ವಿದ್ಯಾರ್ಥಿಗಳು ಹೋರಾಟವನ್ನು ಮುಂದುವರೆಸಬೇಕೆಂದು ಕರೆ ನೀಡಿದರು.
ಪ್ರತಿಭಟನೆಯಲ್ಲಿ ಎಐಎಂಎಸ್ ಎಸ್ನ ಜಿಲ್ಲಾ ಸಂಘಟನಾಕಾರರಾದ ಎಂ.ವಿ. ಕಲ್ಯಾಣಿ, ಎಸ್.ಜಿ. ಮಂಜುಳಾ, ಎಐಡಿಎಸ್ಓ ಜಿಲ್ಲಾಧ್ಯಕ್ಷ ಎಸ್.ಕೆ. ಮಾದಪ್ಪ, ಕಾರ್ಯದರ್ಶಿ ಕೆ. ವೆಂಕಟೇಶ್, ಡಿ. ರಾಜೇಶ್ವರಿ, ಪುಷ್ಪಲತಾ, ನವೀನ್ಕುಮಾರ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.