ಎನ್ಎಸ್ಎಸ್ ಶಿಬಿರಗಳಿಂದ ಸಮಾಜ ಸೇವೆ
ಶಿರಾ: ವಿದ್ಯಾರ್ಥಿಗಳಿಗೆ ತಮ್ಮ ವಿದ್ಯಾರ್ಥಿ ಜೀವನದಲ್ಲೇ ಸಮಾಜ ಸೇವೆಯಲ್ಲಿ ತೊಡಗುವ ಪಾಠವನ್ನು ಎನ್ಎಸ್ಎಸ್ ಶಿಬಿರಗಳು ಕಲಿಸುತ್ತವೆ ಎಂದು ಶ್ರೀ ರಂಗನಾಥ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಆರ್. ನಾಗರಾಜು ಅವರು ತಿಳಿಸಿದರು.
ಅವರು ತಾಲೂಕಿನ ತೊಗರುಗುಂಟೆ ಗ್ರಾಮದ ಶ್ರೀ ಅಮ್ಮಾಜಮ್ಮ ದೇವಸ್ಥಾನದ ಆವರಣದಲ್ಲಿ ಶ್ರೀ ರಂಗನಾಥ ಪ್ರಥಮ ದರ್ಜೆ ಕಾಲೇಜು ವತಿಯಿಂದ ಹಮ್ಮಿಕೊಂಡಿರುವ ಎನ್ಎಸ್ಎಸ್ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ವಿದ್ಯಾರ್ಥಿಗಳು ಗ್ರಾಮದ ಸ್ವಚ್ಛತಾಕಾರ್ಯದಲ್ಲಿ ತೊಡಗಿ ಗ್ರಾಮಸ್ಥರಿಗೆ ನೈರ್ಮಲ್ಯದ ಬಗ್ಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಪ್ರಾಚಾರ್ಯ ವಿ.ಕವಿತ ಅವರು ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಚಂದ್ರಣ್ಣ ಪ್ರಾಸ್ತವಿಕ ನುಡಿಗಳನ್ನಾಡಿದರು. ಉಪನ್ಯಾಸಕ ಎಸ್.ಜೆ. ನಾಗರಾಜು, ಶಿಬಿರಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಕಾಲೇಜಿನ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಆರ್. ರಂಗನಾಥ್ ಅವರು ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯದರ್ಶಿ ಎಚ್.ಜಿ. ಲಿಂಗಯ್ಯ ಅವರು ಧ್ವಜಾರೋಹಣ ನೆರವೇರಿಸಿದರು.
ಅಮ್ಮಾಜಮ್ಮ ದೇವಸ್ಥಾನದ ಯಜಮಾನರಾದ ದೊಡ್ಡೇಗೌಡರು, ದೇವಸ್ಥಾನದ ಕಾರ್ಯದರ್ಶಿ ದೊಡ್ಡಯ್ಯ, ಮೇಲ್ಕುಂಟೆ ಗ್ರಾ.ಪಂ. ಅಧ್ಯಕ್ಷೆ ಪುಷ್ಪಾ ಲೋಕೇಶ್ ಇತರರು ಇದ್ದರು.