ಕಾಲುಬಾಯಿ ಜ್ವರ ತಡೆಗೆ ತಪ್ಪದೇ ಜಾನುವಾರುಗಳಿಗೆ ಲಸಿಕೆ ಹಾಕಿಸಿ
ಹೆಬ್ಬೂರು: ಮಾರಣಾಂತಿಕ ರೋಗವಾಗಿ ಪರಿಣಮಿಸಿರುವ ಕಾಲುಬಾಯಿ ಜ್ವರವನ್ನು ತಡೆಗಟ್ಟಲು ರೈತರು ತಪ್ಪದೇ ಲಸಿಕೆ ಹಾಕಿಸುವಂತೆ ಗ್ರಾ.ಪಂ. ಅಧ್ಯಕ್ಷೆ ಚಿಕ್ಕಮ್ಮ ಕರೆ ನೀಡಿದರು.
ಅವರು ಹೆಬ್ಬೂರಿನ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ನಡೆದ ಕಾಲುಬಾಯಿ ಜ್ವರದ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕಳೆದ ವರ್ಷ ಹರಡಿದ ಕಾಲುಬಾಯಿ ಜ್ವರಕ್ಕೆ ತುತ್ತಾಗಿ ಜಾನುವಾರುಗಳು ಮೃತಪಟ್ಟ ಹಿನ್ನೆಲೆಯಲ್ಲಿ ರೈತರು ತಪ್ಪದೇ ಲಸಿಕೆ ಹಾಕಿಸುವಂತೆ ಸಲಹೆ ನೀಡಿದರು.
ಹೆಬ್ಬೂರಿನ ವೈದ್ಯ ಡಾ. ರುದ್ರಪ್ರಸಾದ್ ಮಾತನಾಡಿ ರೈತ ಬಾಂಧವರು ತಪ್ಪದೇ ತಮ್ಮಲ್ಲಿರುವ 3 ತಿಂಗಳ ಮೇಲ್ಪಟ್ಟು ಕರುಗಳಿಂದ ಹಿಡಿದು ಗರ್ಭ ಧರಿಸಿರುವ ಹಾಗೂ ಹಾಲು ಹಿಂಗುತ್ತಿರುವ ಎಲ್ಲಾ ರಾಸುಗಳಿಗೂ ಈ ಹಿಂದೆ ಲಸಿಕೆ ಹಾಕಿಸಿದ್ದರೂ ಸಹ ತಪ್ಪದೇ ಲಸಿಕೆ ಹಾಕಿಸಲು ತಿಳಿಸಿದರು. ಈ ಕಾರ್ಯದಲ್ಲಿ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು, ಹಾಲು ಉತ್ಪಾದಕರ ಸಂಘಗಳು, ಸ್ವಸಹಾಯ ಸಂಘಗಳು ಸಕ್ರಿಯವಾಗಿ ಭಾಗವಹಿಸಿ ರೈತರ ಮನವೊಲಿಸಿ ಲಸಿಕೆ ಹಾಕಿಸಲು ಮನವಿ ಮಾಡಿದರು.