ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ತುಂಬುತ್ತಿದೆ ಕುಮುದ್ವತಿ ಒಡಲು

Rashmi Kasaragodu
Updated On : 19 Feb 2014, 1:38 am

ಕೆರೆ ಮಂಜುನಾಥ್
ಬೆಂಗಳೂರು: ಇಲ್ಲಿ ಪ್ರಚಾರ ಇಲ್ಲ, ಜನಪ್ರತಿನಿಧಿಗಳ ಆರ್ಭಟ ಇಲ್ಲ. ಇಲಾಖೆಗಳಿಂದ ಅಂದಾಜುಪಟ್ಟಿ ಇಲ್ಲ. ಶಂಕುಸ್ಥಾಪನೆ ಕಲ್ಲು ಹಾಕುವ ಪ್ರಹಸನವಿಲ್ಲ. ಆ ಶಾಸಕನ ತಡೆ, ಈ ಅಧಿಕಾರಿಯ ಅಡ್ಡಗಾಲು ಎಂಬ ಆತಂಕವೂ ಇಲ್ಲ. ಇಲ್ಲಿ ಎಲ್ಲರೂ ಸ್ವಯಂ ಸೇವಕರೇ. ಗ್ರಾಮಸ್ಥರು, ರೈತರು ಸೇರಿಕೊಂಡಿರುವ ಕಾಯಕ ಇದು. ಅದಕ್ಕೇ ಕುಮುದ್ವತಿ ನದಿ ಪುನಶ್ಚೇತನ ಕಾರ್ಯ ಅಬ್ಬರವಿಲ್ಲದೆ, ಸರಾಗವಾಗಿ ನಡೆಯುತ್ತಿದೆ.
ಅರ್ಕಾವತಿ ನದಿ ಪುನಶ್ಚೇತನ ಮಾಡುವುದಾಗಿ ರಾಜಕಾರಣಿಗಳು ನಾಲ್ಕು ವರ್ಷದ ಹಿಂದೆ ಪಾದಯಾತ್ರೆಯನ್ನೂ ಮಾಡಿದ್ದರು. ಶಾಸಕರಾದಿಯಾಗಿ ಸಚಿವ, ಸಂಸದರೆಲ್ಲರೂ ದಂಪತಿ ಸಹಿತ ನೀರ ಕಳಸ ಹೊತ್ತು ತಿಪ್ಪಗೊಂಡನಹಳ್ಳಿಯಲ್ಲಿ ಬಿಟ್ಟು ನದಿ ಹರಿಸುವುದಾಗಿ ಶಪಥ ಮಾಡಿದ್ದರು. ಆದರೆ, ಕೇವಲ ಗಿಡಗಂಟೆಗಳನ್ನು ತೆಗೆಯುವಲ್ಲೇ ನೂರಾರು ಕೋಟಿ ವೆಚ್ಚ ಆಗಿದೆ. ಅರ್ಕಾವತಿ ಹರಿಸಲು ಇವರಿಗೆ ಮನಸ್ಸಿಲ್ಲ. ಒಮ್ಮೆ ಹರಿದರೆ, ಮತ್ತೆ ಯೋಜನೆಗೆ ಹಣ ಹಾಕುವಂತಿಲ್ಲವಲ್ಲ!
ಆದರೆ, ಅರ್ಕಾವತಿಯ ಉಪನದಿ ಕುಮುದ್ವತಿಯ ಪರಿಸ್ಥಿತಿ ಬೇರೆ. ಇಲ್ಲಿ ಸ್ವಯಂಸೇವಕರ ಆಸಕ್ತಿ ಅನಾವರಣಗೊಂಡಿದೆ. ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಪ್ರಮುಖ ಜಲಮೂಲವಾಗಿರುವ ಶಿವಗಂಗೆಯಲ್ಲಿ ಹುಟ್ಟುವ ಕುಮುದ್ವತಿ ಜಲಾನಯನ ಪ್ರದೇಶದಲ್ಲಿ ಅಂತರ್ಜಲ ವೃದ್ಧಿಸುವ ಕಾಯಕ ಇಲ್ಲಾಗುತ್ತಿದೆ. ಜತೆಗೆ ಅದರ ವ್ಯಾಪ್ತಿಯ ಕೆರೆಗಳನ್ನೂ ತುಂಬಿಸಿ, ಅಲ್ಲಿಯೂ ನೀರು ಹೆಚ್ಚು ಆವಿಯಾಗದಂತೆ ಮಾಡುವ ಕೆಲಸ ಒಂದು ವರ್ಷದಿಂದ ಸ್ವಯಂ ಸೇವಕರು ಮಾಡುತ್ತಿದ್ದಾರೆ. ಇದಕ್ಕೆ ಗ್ರಾಮಸ್ಥರು ನೆರವಾಗಿದ್ದಾರೆ. ಅದಕ್ಕೇ ಅಲ್ಲಿನ ಬೋರ್ವೆಲ್ಗಳಲ್ಲಿ ನೀರು ಹೆಚ್ಚಾಗಿದೆ.
ಇವರಿಗೆ ನ್ಯಾ.ಎಂ.ವಿ. ವೆಂಕಟಾಚಲಯ್ಯ, ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್, ಪರಿಸರ ತಜ್ಞ ಯಲ್ಲಪ್ಪರೆಡ್ಡಿ ಹಾಗೂ ಪರಿಸರ ತಜ್ಞರು, ಭೂವಿಜ್ಞಾನಿಗಳು ಸಹಕಾರ ನೀಡುತ್ತಿದ್ದಾರೆ. ಅದಕ್ಕೇ ಕುಮುದ್ವತಿ ನದಿಯ ಒಡಲಲ್ಲಿ ಇಂಗುಗುಂಡಿಗಳಾಗುತ್ತಿವೆ. ಅಂತರ್ಜಲ ವೃದ್ಧಿಯಾಗುತ್ತಿದೆ. ಈ ಮಳೆಗಾಲದ ವೇಳೆಗೆ ಯೋಜನೆಯ ಶೇ.50ರಷ್ಟು ಭಾಗ ಮುಗಿದರೂ ತಿಪ್ಪಗೊಂಡನಹಳ್ಳಿ ಜಲಾಶಯ ತಲುಪುವ ಮುನ್ನ ಕುಮುದ್ವತಿ ತನ್ನ ಹಾದಿಯಲ್ಲಿರುವ ಇಂಗುಗುಂಡಿಗಳನ್ನು ತುಂಬಿ, ಕೆರೆಗಳ ಒಡಲು ತುಂಬಿ ಅಂತರ್ಜಲವನ್ನು ವರ್ಷಕ್ಕಾಗುವಷ್ಟು ವೃದ್ಧಿಸಲಿದ್ದಾಳೆ.
ಈ ನದಿ ನೆಲಮಂಗಲ ತಾಲೂಕು ಹಾಗೂ ರಾಮನಗರ ಜಿಲ್ಲೆಯ ಮಾಗಡಿ ತಾಲೂಕುಗಳಲ್ಲಿ ಹರಿದು, ತಿಪ್ಪಗೊಂಡನಹಳ್ಳಿಯಲ್ಲಿ ಅರ್ಕಾವತಿ ಸೇರಿಕೊಳ್ಳುತ್ತದೆ. 278 ಗ್ರಾಮಗಳಿಗೆ ಕುಮುದ್ವತಿ ನೀರೊದಗಿಸುತ್ತಿತ್ತು. ದಶಕಗಳ ಹಿಂದಷ್ಟೇ ಇದ್ದ ಮಳೆ ಪ್ರಮಾಣ ಈಗಲೂ ಇದ್ದರೂ ನದಿ ಬತ್ತಿದ ಪರಿಸ್ಥಿತಿ ಇಲ್ಲಿದೆ. ಅಂತರ್ಜಲ ವಿಪರೀತ ಬಳಕೆಯ ಪರಿಣಾಮ ಇದು. ಇದನ್ನು ಮನಗಂಡಿರುವ ಪರಿಸರ ಸ್ವಯಂ ಸೇವಕರ ತಂಡ, ಕುಮುದ್ವತಿ ನದಿ ವ್ಯಾಪ್ತಿಯ 223 ಕೆರೆಗಳಲ್ಲಿ ನೀರು ಹರಿಸುವುದು, ಅಲ್ಲಿ ನೀರು ಇಂಗಿಸುವ ಕಾರ್ಯ ಮಾಡುತ್ತಿದೆ. ನದಿ ಕಾಲುವೆಯಲ್ಲೂ ಬೃಹತ್ ಇಂಗುಗುಂಡಿಗಳನ್ನು ಮಾಡುತ್ತಿದೆ.
15 ಅಡಿ ಆಳ, ಮೂರು ಅಡಿ ರಿಂಗ್ ಇಳಿಸುವಷ್ಟು ಅಗಲದ ಇಂಗುಗುಂಡಿಗಳು ಎಷ್ಟು ಮಾಡಿದರೂ ಅಷ್ಟು ಅಂತರ್ಜಲ ವೃದ್ಧಿಯಾಗುತ್ತದೆ. ಇದಕ್ಕೆ ಆರ್ಟ್ ಆಫ್ ಲಿವಿಂಗ್ನ ಸಹಯೋಗವಿದೆ.ಈ ಸ್ವಯಂಸೇವಕರ ತಂಡ ವಾರಾಂತ್ಯದಲ್ಲಿ ಈ ಇಂಗುಗುಂಡಿ ಮಾಡುವ ಕಾರ್ಯ, ಕಲ್ಯಾಣಿಗಳಲ್ಲಿ ಹೂಳು ತೆಗೆಯುವ ಕಾರ್ಯ, ಕೆರೆಗಳಲ್ಲಿ ಹೆಚ್ಚು ನೀರು ಇಂಗಿಸುವ ಕಾರ್ಯ ಮಾಡುತ್ತಿದೆ. ವಾರಾಂತ್ಯದಲ್ಲಿ ಮಾತ್ರ ಕಾರ್ಯ ಆಗುತ್ತಿರುವುದರಿಂದ ಕಳೆದ ಒಂದು ವರ್ಷದಲ್ಲಿ ಸುಮಾರು ನೂರು ಇಂಗುಗುಂಡಿಗಳನ್ನು ಮಾಡಿದ್ದಾರೆ. ಈ ಬೇಸಿಗೆಯಲ್ಲಿ ಇದಕ್ಕೆ ದುಪ್ಪಟ್ಟಾದರೂ ಇಂಗುಗುಂಡಿಗಳಾಗಬೇಕು ಎಂಬ ಗುರಿ ಹೊಂದಿದ್ದಾರೆ. ಸ್ವಯಂ ಸೇವಕರ ಈ ಕಾಯಕಕ್ಕೆ ಮೆಚ್ಚಿ ಕೈಜೋಡಿಸಿರುವ ಗ್ರಾಮಸ್ಥರು ನೀರು ಇಂಗಲು ಸಾಕಷ್ಟು ಕೆಲಸಗಳನ್ನು ಮಾಡುತ್ತಿದ್ದಾರೆ. ಮೂರು ವರ್ಷ ಇಂತಹ ಕೆಲಸ ನಡೆದರೆ, ಮಾಗಡಿ, ನೆಲಮಂಗಲ ತಾಲೂಕುಗಳಲ್ಲಿ ಅಂತರ್ಜಲ ಮಟ್ಟ ಸಾಕಷ್ಟು ವೃದ್ಧಿಯಾಗಲಿದೆ. ಇಂತಹ ಕಾರ್ಯಕ್ಕೆ ಪ್ರೋತ್ಸಾಹದ ಜತೆಗೆ ಕಾರ್ಪೊರೇಟ್ಗಳ ನೆರವಿನ ಹಸ್ತವಿದ್ದರೆ ಕುಮುದ್ವತಿ ನದಿ ಮೈದುಂಬಿ ಹರಿಯುವ ಕಾಲ ದೂರವಿಲ್ಲ.



'ಕುಮುದ್ವತಿ ಉತ್ಸವ'
ಕುಮುದ್ವತಿ ನದಿ ಪುನಶ್ಚೇತನದಲ್ಲಿ ರೈತರು ಹಾಗೂ ಗ್ರಾಮಸ್ಥರಿಗೆ ಹೆಚ್ಚಿನ ಅರಿವು ಮೂಡಿಸಲು ಕುಮುದ್ವತಿ ನದಿ ಪುನಶ್ಚೇತನ ಯೋಜನೆ ವತಿಯಿಂದ 'ಕುಮುದ್ವತಿ ಉತ್ಸವ'ವನ್ನು ನೆಲಮಂಗಲ ತಾಲೂಕಿನ ಮಹಿಮಾಪುರದಲ್ಲಿ ಫೆ.22ರ ಶನಿವಾರ ಆಯೋಜಿಸಲಾಗಿದೆ. ಈ ಉತ್ಸವದಲ್ಲಿ ವಿಚಾರ ಸಂಕಿರಣ ಹಾಗೂ ರೈತರ ಸಮಾವೇಶವನ್ನೂ ಆಯೋಜಿಸಲಾಗಿದೆ. ಸ್ವಾಮೀಜಿಗಳು, ಶಾಸಕರು ಸೇರಿದಂತೆ ಪರಿಸರ ತಜ್ಞರು ಇಲ್ಲಿ ಭಾಗವಹಿಸಲಿದ್ದಾರೆ. ಹೆಚ್ಚಿನ ವಿವರಗಳಿಗೆ ಮೊ-98864 46886, 99160 25348.


ಕುಮುದ್ವತಿ ನದಿ ಭಾಗದಲ್ಲಿ ಇಂಗುಗುಂಡಿಗಳನ್ನು ಸ್ವಯಂಸೇವಕರಿಂದ ನಿರ್ಮಿಸುತ್ತಿದ್ದೇವೆ. ಕೆಲವು ಸಂಸ್ಥೆಗಳು ಹಣ ಸಹಾಯ ಮಾಡುತ್ತಿವೆ. ಗ್ರಾಮಸ್ಥರು ಪರಿಶ್ರಮ ಪಡುತ್ತಿದ್ದಾರೆ. ನರೇಗಾದಿಂದಲೂ ಇದಕ್ಕೆ ಹಣ ಸಿಗುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಮೂರು ವರ್ಷ ನೀರು ಇಂಗಿಸುವ ಕಾರ್ಯ ವೈಜ್ಞಾನಿಕವಾಗಿ ಆಗಿದ್ದೇ ಆದಲ್ಲಿ, ಕುಮುದ್ವತಿ ಜಲಾನಯನ ಪ್ರದೇಶದ 460 ಚದರ ಕಿಮೀ ವಿಸ್ತೀರ್ಣದಲ್ಲಿರುವ 278 ಗ್ರಾಮಗಳು ಸಂಪೂರ್ಣ ಹಸಿರುಮವಾಗುತ್ತವೆ.
ಟಿ  ಡಾ. ವೈ. ಲಿಂಗರಾಜು, ನಿರ್ದೇಶಕರು, ಕುಮುದ್ವತಿ ನದಿ ಪುನಶ್ಚೇತನ ಯೋಜನೆ



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement