ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕಂದಾಯ ಇಲಾಖಾ ಸಿಬ್ಬಂದಿ ಗೊಂದಲ

Rashmi Kasaragodu
Updated On : 20 Feb 2014, 2:25 am

ಕ.ಪ್ರ. ವಾರ್ತೆ    ಕುಣಿಗಲ್    ಫೆ.19
ಕಂದಾಯ ಇಲಾಖಾ ಸಿಬ್ಬಂದಿಗಳ ಚೆಲ್ಲಾಟಕ್ಕೆ ಪೊಲೀಸ್ ಇಲಾಖಾ ಸಿಬ್ಬಂದಿಗಳು ಪರದಾಟಕ್ಕೆ ಬಿದ್ದಿರುವ ಘಟನೆ ನಡೆದಿದೆ.
ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿನ ಕಂದಾಯ ದಾಖಲೆಗಳ ಹಲವು ಸಮಸ್ಯೆಗಳಿಗೆ ಲಭ್ಯವಿರುವ ದಾಖಲೆಗಳ ಆಧಾರದ ಮೇಲೆ ಸರಿಯಾಗಿ ವರದಿ ನೀಡಿ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕಿದೆ.
ದುರಂತ ಎಂದರೆ ಕಂದಾಯ ಇಲಾಖೆಯಡಿಯಲ್ಲಿ ಬರುವ ವಿವಿಧ ವಿಭಾಗಗಳಾದ ಮುಜರಾಯಿ, ಮೋಜಿಣಿ, ಭೂದಾಖಲೆ ವಿಭಾಗಗಳ ಸಿಬ್ಬಂದಿಗಳು ಮೇಲಧಿಕಾರಿಗಳಿಗೆ ಸಮರ್ಪಕ ಮಾಹಿತಿ ನೀಡದೆ, ಗೊಂದಲಮಯ, ದೋಷಪೂರಿತ ವರದಿಗಳನ್ನು ನೀಡಿ ಚೆಲ್ಲಾಟ ನಡೆಸಿರುವ ಕಾರಣ ತಾಲೂಕಿನಲ್ಲಿ ಕಳೆದ 30 ದಿನದಲ್ಲಿ ಜನತೆ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿ, ತಮ್ಮದಲ್ಲದ ತಪ್ಪಿಗೆ ಪೊಲೀಸ್ ಸಿಬ್ಬಂದಿ ವಿನಾಕಾರಣ ಪರದಾಡುವಂತಾಗಿದೆ.
ಹುತ್ರಿದುರ್ಗ ಹೋಬಳಿಯ ಸೀನಪ್ಪನ ಹಳ್ಳಿ ಮತ್ತು ಹೊಸಕೆರೆ ಗ್ರಾಮಗಳ ನಡುವೆ ಗ್ರಾಮದೇವತೆ ಚೌಡೇಶ್ವರಿದೇವಾಲಯ ಸಮಿತಿಯ ಟ್ರಸ್ಟ್ ಸಮಸ್ಯೆಗೆ ಸಂಬಂಧಿಸಿದಂತೆ, ಕಂದಾಯ ಇಲಾಖೆಯ ಮುಜರಾಯಿ ಸಿಬ್ಬಂದಿ ನೀಡಿದ ದೊಷಪೂರಿತ ವರದಿ ಮೇರೆಗೆ, ಸೀನಪ್ಪನಹಳ್ಳಿ ಗ್ರಾಮಸ್ತರಿಗೂ ಹೊಸಕೆರೆ ಗ್ರಾಮಸ್ಥರಿಗೂ ವಾಗ್ವಾದವಾಗಿ, ಇಂದು ಎರಡು ಗ್ರಾಮಗಳ ನಡುವೆ ವೈಷಮ್ಯಕ್ಕೆ ಕಾರಣವಾಗಿ, ಸೀನಪ್ಪನಹಳ್ಳಿ ಗ್ರಾಮಸ್ಥರು ತಹಸೀಲ್ದಾರ್ ಕಚೇರಿ ಮುಂದೆ ಧರಣಿ ನಡೆಸಿ, ಹೊಸಕೆರೆ ಗ್ರಾಮದವರನ್ನು ಅಟ್ಟಾಡಿಸಲು ಹೋಗಿದ್ದು, ಇವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಯಿತು.
ಎರಡು ಗುಂಪು: ಇನ್ನು ಕಳೆದ ಮಂಗಳವಾರ ಕೆಂಪನಹಳ್ಳಿ ಗ್ರಾಮದ ಮಧ್ಯಭಾಗದಲ್ಲಿನ ವಿನಾಯಕ ದೇವಾಲಯ ನಿವೇಶನದಾಖಲೆ ದುರಸ್ತಿಗೊಳಿಸಿ ಸಮರ್ಪಕ ದಾಖಲೆ ನೀಡಬೇಕಾದ ಮೋಜಿಣಿ ಇಲಾಖಾ ಸಿಬ್ಬಂದಿ ನಿರ್ಲಕ್ಷ್ಯದಿಂದ ಸದರಿ ನಿವೇಶನದಲ್ಲಿ ಖಾಸಗಿಯವರಿಗೆ ಜಾಗಬರಬೇಕಿದೆ ಎಂಬ ವರದಿ ನೀಡಿದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಎರಡು ಗುಂಪುಗಳಾಗಿ, ಪರಸ್ಪರ ದೋಷಾರೋಪಣೆ ಮಾಡಿಕೊಂಡು ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿ ಕೊನೆಗೆ ಕಂದಾಯ ಇಲಾಖೆ ಲೋಪಕ್ಕೆ ಗ್ರಾಮಸ್ಥರು ಪೊಲೀಸ್ ಠಾಣೆ ಮುಂದೆ ಧರಣಿ ನಡೆಸಿದರು.
ಕಳೆದ ಹದಿನೈದು ದಿನಗಳ ಕೆಳಗೆ ನರ್ಜನಕುಪ್ಪೆ ಗ್ರಾಮದಲ್ಲಿನ ಭೂ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸಿ, ಸೂಕ್ತ ಅಭಿಪ್ರಾಯವನ್ನು ಕಂದಾಯ ಇಲಾಖಾ ಸಿಬ್ಬಂದಿ ನೀಡದ ಕಾರಣ, ಕುಟುಂಬದ  ಸದಸ್ಯರು ಬಡಿದಾಡಿಕೊಂಡು ಠಾಣೆ ಮೆಟ್ಟಿಲೇರಿದ್ದು, ಈ ಸಂಬಂಧದಲ್ಲಿ ಕುಟುಂಬದವರು ಬಡಿದಾಡಿಕೊಳ್ಳುವುದನ್ನು ನಿಯಂತ್ರಿಸಲು ಹೋದ ಎಎಸೈ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆಂದು ಗ್ರಾಮಸ್ಥರು ಠಾಣೆ ಮುಂದೆ ಧರಣಿ ನಡೆಸಿ ಪೊಲೀಸರನ್ನೆ ಪೇಚಿಗೆ ಸಿಲುಕಿಸಿದ ಘಟನೆ ನಡೆಯಿತು.
ಸಮರ್ಪಕ ನಿರ್ವಹಣೆ ಇಲ್ಲ: ಈ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಹಿರಿಯ ವಕೀಲರಾದ ತಿಮ್ಮಪ್ಪ, ಕಂದಾಯ ಇಲಾಖೆಯ ಕೆಳಹಂತದ ಸಿಬ್ಬಂದಿಗಳು ತಮ್ಮ ಪಾಲಿನ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸದ ಕಾರಣ ಇಂದು ನ್ಯಾಯಾಲಯ ಸೇರಿದಂತೆ ಪೊಲೀಸ್ ಠಾಣೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿ, ಸ್ವಾಸ್ತ್ಯಸಮಾಜಕ್ಕೆ ಮಾರಕವಾಗುತ್ತಿದೆ. ಕೆಲಕಂದಾಯ ಇಲಾಖೆ ಸಿಬ್ಬಂದಿಗಳು ಹಲವು ಆಮಿಷಕ್ಕೆ ಒಳಗಾಗಿ ನಿಯಮಾನುಸಾರ ಕರ್ತವ್ಯನಿರ್ವಹಿಸದಿರುವುದು ಇಲಾಖೆಗೂ ಕೆಟ್ಟಹೆಸರು ತರುತ್ತಿದೆ. ಈಗಾಗಲೆ ಇಂತಹ ಸಾಕಷ್ಟು ಪ್ರಕರಣಗಳು ನಡೆದಿವೆ.
ಇದರಿಂದ ಮುಂದಿನ ದಿನಗಳಲ್ಲಿ ಮತ್ತಷ್ಟು ಪರದಾಡುವಂತ ಘಟನೆಗಳು ನಡೆಯುವುದನ್ನು ತಳ್ಳಿಹಾಕುವಂತಿಲ್ಲ. ಇನ್ನಾದರೂ ಇಲಾಖೆಯ ಆಯಕಟ್ಟಿನ ಇಲಾಖಾಧಿಕಾರಿಗಳು ಕೆಳಹಂತದ ಸಿಬ್ಬಂದಿಗಳ ಲೋಪಕ್ಕೆ ಸರಿಯಾದ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಸಮಾಜದ ಸ್ವಾಸ್ತ್ಯ ಕಾಪಾಡಬೇಕೆಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement