ಕಾಲುಬಾಯಿ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ
ಕ.ಪ್ರ. ವಾರ್ತೆ ತಿಪಟೂರು ಫೆ.19
ದೇಶದ ಅನ್ನದಾತನ ಬೆನ್ನೆಲುಬಾಗಿರುವ ಮತ್ತು ಆಹಾರೋತ್ಪಾದನೆ ಹಾಗೂ ಮನುಷ್ಯನ ಜೀವಸೆಲೆಗೆ ಅಗತ್ಯವಾಗಿರುವ ಗೋ ಸಂಪತ್ತು ಇತ್ತೀಚೆಗೆ ನಾನಾ ರೀತಿಯ ಮಾರಣಾಂತಿಕ ರೋಗಗಳಿಗೆ ತುತ್ತಾಗುತ್ತಿದ್ದು, ಈ ಸಂಪತ್ತನ್ನು ಉಳಿಸಿ-ಬೆಳೆಸುವ ಉದ್ದೇಶದಿಂದ ಸರ್ಕಾರ ದೇಶದ ಪ್ರತಿ ಹಳ್ಳಿಗಳಲ್ಲೂ ಸಾಮೂಹಿಕವಾಗಿ ಲಸಿಕೆ ಹಾಕುವ ಕಾರ್ಯಕ್ರಮವನ್ನು ಏಕ ಕಾಲಕ್ಕೆ ಪ್ರಾರಂಭಿಸಿದ್ದು ಇದರ ಉಪಯೋಗವನ್ನು ರೈತರು ಉದಾಸೀನ ಮಾಡದೆ ಪಡೆಯಬೇಕೆಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.
ತಾಲೂಕಿನ ತಿಮ್ಮರಾಯನಹಳ್ಳಿಯಲ್ಲಿ ಕಾಲುಬಾಯಿ ಜ್ವರದ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಇತ್ತೀಚೆಗೆ ಕಾಲುಬಾಯಿ ರೋಗ ಹೆಚ್ಚಾಗಿದ್ದು, ಬೆಲೆ ಬಾಳುವಂತಹ ಹಸು, ಹೋರಿಗಳು ಮೃತಪಡುತ್ತಿವೆ. ಹೈನುಗಾರಿಕೆಯಿಂದಲೇ ಜೀವನೋಪಾಯ ಮಾಡುತ್ತಿರುವ ಬಡ, ಮಧ್ಯಮ ರೈತರ ಸ್ಥಿತಿ ಚಿಂತಾಜನಕವಾಗಿ ರೈತರು ತೀವ್ರ ನಷ್ಟ ಅನುಭವಿಸಿದ್ದಾರೆ. ಇದರಿಂದ ರೈತರು ಜರ್ಝರಿತರಾಗಿದ್ದು ಭಯಪಡುತ್ತಿರುವುದನ್ನು ಮನಗಂಡ ಸರ್ಕಾರ ಉಚಿತವಾಗಿ ಪ್ರತಿ ಹಳ್ಳಿಗಳಲ್ಲಿಯೂ ಸಾಮೂಹಿಕ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ರೈತರು ಸ್ಪಂದಿಸಬೇಕೆಂದು ಮನವಿ ಮಾಡಿದರು.
ಕೆ.ಎಂ.ಎಫ್ ನಿರ್ದೇಶಕ ಎಂ.ಕೆ.ಪ್ರಕಾಶ್ ಜಿಲ್ಲೆಗೆ ಸುಮಾರು 60 ವಾಹನಗಳನ್ನು ಲಸಿಕಾ ಕಾರ್ಯಕ್ರಮಕ್ಕೆ ನಿಯೋಜಿಸಲಾಗಿದ್ದು, ರೈತರು ಲಸಿಕೆ ಹಾಕಿಸಿ ಜಾನುವಾರುಗಳನ್ನು ರೋಗಮುಕ್ತವಾಗಿಸಬೇಕೆಂದು ಕರೆ ನೀಡಿದರು.
ಗ್ರಾ.ಪಂ.ಅಧ್ಯಕ್ಷ ಕೃಷ್ಣಯ್ಯ ಅಧ್ಯಕ್ಷತೆ ವಹಿಸಿದ್ದರು. ಡಾ.ಸಿದ್ದಲಿಂಗಪ್ಪ, ಡಾ.ಮಹೇಶ್. ಡಾ.ಶಶಿಧರ್, ಸ್ಥಳೀಯ ಪಶು ವೈದ್ಯಾಧಿಕಾರಿ ಡಾ.ಫರ್ನಿಷ್ ಪಾಷ ಸೇರಿದಂತೆ ಗ್ರಾ.ಪಂ.ಸದಸ್ಯರು,ಪಶುಸಂಗೋಪನಾ ಇಲಾಖೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ವಿಸ್ತರಣಾಧಿಕಾರಿ ಡಾ.ಎಚ್.ಮಹೇಶ್ ನಿರೂಪಿಸಿ, ವಂದಿಸಿದರು.