ರಾಯಗಾಲುವೆ ಅತಿಕ್ರಮಣ ಹುನ್ನಾರ
ಕ.ಪ್ರ. ವಾರ್ತೆ ಕುಣಿಗಲ್ ಫೆ.19
ರಾಷ್ರೀಯ ಹೆದ್ದಾರಿ ಪಕ್ಕದಲ್ಲಿನ ಜಮೀನು ಮಾಲೀಕರು, ರಾಯಗಾಲುವೆಗಳನ್ನು ಮುಚ್ಚಿಹಾಕಿ ಆ ಪ್ರದೇಶವನ್ನು ತಮ್ಮ ಜಮೀನಿಗೆ ಸೇರಿಸಿಕೊಳ್ಳುವ ಹುನ್ನಾರದಲ್ಲಿ ತೊಡಗಿರುವುದರಿಂದ ಮುಂದಿನ ದಿನಗಳಲ್ಲಿ ಮಳೆ ನೀರು ಹರಿಯಲು ಜಾಗವಿಲ್ಲದೆ ಹೆದ್ದಾರಿ ರಸ್ತೆ ಸಂಚಾರ ಅಸ್ತವ್ಯಸ್ತವಾಗುವುದರಿಂದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಕರವೇ ಅಧ್ಯಕ್ಷ ಮಂಜುನಾಥ ಅಗ್ರಹಿಸಿದ್ದಾರೆ.
ಪಟ್ಟಣದಲ್ಲಿ ಹಾದುಹೋಗಿರುವ ಹಳೇರಾಷ್ಟೀಯ ಹೆದ್ದಾರಿ 48ಕ್ಕೆ ಹೊಂದುಕೊಂಡಂತೆ ದೊಡ್ಡಕೆರೆಯ ಪ್ರವಾಸಿ ಮಂದಿರದ ಮುಂಭಾಗದಲ್ಲಿ, ಖಾಸಗಿ ಜಮೀನು ಮತ್ತು ಹೆದ್ದಾರಿ ಮಧ್ಯದಲ್ಲಿ ಅಗಲವಾದ ರಾಯಗಾಲುವೆ (ಸಹಜವಾಗಿ ಮಳೆನೀರು ಹರಿಯುವ ಕಾಲುವೆ) ಇದೆ. ಈ ಕಾಲುವೆಗೆ ಸುಮಾರು ಅರ್ಧಕಿ.ಮೀ.ದೂರದಿಂದ ಮೇಲುಭಾಗದ ಆರ್ಎಂಸಿ ಯಾರ್ಡ್ ಪ್ರದೇಶದಿಂದಲೂ ಮಳೆ ನೀರು ಹರಿದು ಬಂದು ದೊಡ್ಡಕೆರೆ ಸೇರುತ್ತಿತ್ತು. ಆದರೆ, ದೊಡ್ಡಕೆರೆಯಲ್ಲಿ ಕುಡಿಯುವ ನೀರು ಯೋಜನೆ ಪ್ರಾರಂಭಗೊಂಡಾಗಿನಿಂದ, ರಾಯಗಾಲುವೆಯ ಒಂದು ಭಾಗವನ್ನು ಹಾಗೆ ಬಿಡಲಾಗಿದೆ.
ಮಳೆನೀರು ಹರಿದು ಬಂದಲ್ಲಿ ಈ ಕಾಲುವೆಯಲ್ಲಿ ನಿಂತು, ತುಂಬಿದ ನಂತರ ಸಮೀಪದ ಚರಂಡಿ ಮೂಲಕ ನೀರು ಹಾದುಹೋಗುತ್ತಿತ್ತು. ಈಗ ಹೆದ್ದಾರಿಗೆ ಹೊಂದುಕೊಂಡಿರುವ ಕೆಲ ಜಮೀನಿ ಮಾಲೀಕರು ಪಟ್ಟಣದಲ್ಲಿ ಯಾವುದೇ ಕಟ್ಟಡ ಕೆಡವಿದರೂ ತಮ್ಮ ಜಮೀನಿನ ಪಕ್ಕದಲ್ಲೆ ಹಾಕಿಸಿಕೊಂಡು, ದಿನದಿಂದ ದಿನಕ್ಕೆ ರಾಯಗಾಲುವೆ ಮುಚ್ಚಿ, ತಮ್ಮ ಜಮೀನನ್ನು ಹೆದ್ದಾರಿ ಬದಿಗೆ ವಿಸ್ತರಿಸುತ್ತಿದ್ದಾರೆ. ಇದರಿಂದಾಗಿ ಮಳೆನೀರು ಸರಾಗವಾಗಿ ಹರಿಯಲು ಜಾಗವಾಗದೆ, ರಾಯಗಾಲುವೆ ಮುಚ್ಚಿದ ಕಾರಣ ವಿಧಿ ಇಲ್ಲದೆ ನೀರು ಹೆದ್ದಾರಿಯಲ್ಲೆ ನಿಲ್ಲುವುದರಿಂದ ಈ ಭಾಗದಲ್ಲಿ ವಾಹನ ಸೇರಿದಂತೆ ಜನಸಂಚಾರಕ್ಕೆ ತೊಂದರೆಯಾಗಿ ಜನ
ಪರದಾಡುವಂತಾಗುತ್ತದೆ. ಸದರಿ ಪ್ರದೇಶವು ಹಾಲಿ ಹೆದ್ದಾರಿ ಒಡೆತನದ ಲೋಕೋಪಯೋಗಿ ಎಇಇ ಕಚೇರಿಯ ಸಮೀಪದಲ್ಲೆ ಇದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕಂಡೂ ಕಾಣದಂತೆ ಜಾಣಮೌನ ವಹಿಸಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಡುತ್ತಿದ್ದು, ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ರಾಯಗಾಲುವೆ ಮುಚ್ಚದಂತೆ, ಹಾಲಿ ಮುಚ್ಚಲಾಗಿರುವ ಕಾಲುವೆ ಪ್ರದೇಶವನ್ನು ತೆರವುಗೊಳಿಸಿ, ಮುಂದಿನ ದಿನಗಳಲ್ಲಿ ಹೆದ್ದಾರಿ ಸಂಚಾರದಲ್ಲಿ ಯಾವುದೇ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಆದರ್ಶ ಸಮಾಜ ನಿರ್ಮಾಣದಿಂದ ಆರೋಗ್ಯಪೂರ್ಣ ಸಮಾಜ ಸಾಧ್ಯ
ಕ.ಪ್ರ. ವಾರ್ತೆ ತುಮಕೂರು ಫೆ.19
ನಮ್ಮ ಮುಂದಿನ ಸಾಮಾಜಿಕ ವ್ಯವಸ್ಥೆಯು ಜಾತಿ ರಹಿತವಾದ ಆರ್ಥಿಕ, ಸಾಮಾಜಿಕ, ಲಿಂಗ ಸಮಾನತೆಯನ್ನು ಉಳ್ಳ ಆದರ್ಶ ಸಮಾಜದ ನಿರ್ಮಾಣ ಮಾಡಿದಾಗ ಮಾತ್ರ ಭವಿಷ್ಯದ ಆರೋಗ್ಯಪೂರ್ಣ ಸಮಾಜ ಕಟ್ಟಲು ಸಾಧ್ಯ ಎಂದು ತುಮಕೂರು ವಿವಿ ಕುಲಪತಿ ಡಾ. ರಾಜಾಸಾಬ್ ಅಭಿಪ್ರಾಯಪಟ್ಟರು.
ತುಮಕೂರು ವಿಶ್ವವಿದ್ಯಾನಿಲಯದ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ ಮತ್ತು ಪ್ರಸಾರಂಗಗಳ ಸಂಯುಕ್ತ ಆಶ್ರಯದಲ್ಲಿ ಸಾಮಾಜಿಕ ಸಮಾನತೆ ಮತ್ತು ಆಧುನಿಕ ಸವಾಲುಗಳು ಎನ್ನುವ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಈ ರೀತಿ ಆರೋಗ್ಯಪೂರ್ಣ, ಅಭಿವೃದ್ಧಿಪರ, ಸಾಮಾಜಿಕ ವಾತಾವರಣ ನಿರ್ಮಿಸುವ ಜವಾಬ್ದಾರಿ ಉನ್ನತ ಶಿಕ್ಷಣ ಪಡೆದ ವಿದ್ಯಾರ್ಥಿಗಳ ಜವಾಬ್ದಾರಿಯಾಗಿದೆ. ಈ ಜವಾಬ್ದಾರಿಯನ್ನು ನಮ್ಮ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಜವಾಬ್ದಾರಿಯಿಂದ ನಿರ್ವಹಿಸಬೇಕು ಎಂದು ಕರೆ ನೀಡಿದರು.
ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಕುವೆಂಪು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಡಾ.ಜಿ. ಪ್ರಶಾಂತ್ ನಾಯಕ್ ಅವರು ಸಾಮಾಜಿಕ ಸಮಾನತೆ ಮತ್ತು ಆಧುನಿಕ ಸವಾಲುಗಳು ಎನ್ನುವ ವಿಷಯದ ಕುರಿತು ದಿಕ್ಸೂಚಿ ಉಪನ್ಯಾಸ ನೀಡಿದರು.
ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ.ಜಿ. ಸೋಮಶೇಖರ್ ಅವರು ಸಾಮಾಜಿಕ ಸಮಾನತೆಗಾಗಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯಗಳು ಎನ್ನುವ ವಿಷಯದ ಕುರಿತು ಉಪನ್ಯಾಸ ನೀಡಿದರು. ಮಂಗಳೂರಿನ ಸಂಸ್ಕೃತಿ ಚಿಂತಕ ಡಾ. ವಾಸುದೇವ ಬೆಳ್ಳೆ ಅವರು ಭವಿಷ್ಯದ ಸಾಮಾಜಿಕ ಸಮಾನತೆಗಾಗಿ ಇಂದಿನ ಯುವಕರ ಜವಾಬ್ದಾರಿಗಳು ಎನ್ನುವ ವಿಷಯ ಕುರಿತು ಉಪನ್ಯಾಸ ನೀಡಿದರು.
ತುಮಕೂರು ವಿಶ್ವವಿದ್ಯಾನಿಲಯ ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಬಿ. ರಮೇಶ್ ಅವರು ಪ್ರಾಸ್ತಾವಿಕ ಹಾಗೂ ಸ್ವಾಗತವನ್ನು ಮಾಡಿದರು. ತುಮಕೂರು ವಿಶ್ವವಿದ್ಯಾನಿಲಯದ ಪ್ರಸಾರಂಗದ ನಿರ್ದೇಶಕ ಡಾ.ನಿತ್ಯಾನಂದ ಬಿ. ಶೆಟ್ಟಿ ವಂದಿಸಿದರು.