ಪ್ರತಿಷ್ಠಾಪನಾ ಮಹೋತ್ಸವ
ಕುಣಿಗಲ್: ಪಟ್ಟಣದ ತುಮಕೂರು ರಸ್ತೆಯಲ್ಲಿರುವ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಶ್ರೀಸ್ವಾಮಿಯ ಮೂರನೇ ವರ್ಷದ ಪ್ರತಿಷ್ಠಾಪನಾ ಮಹೋತ್ಸವದ ಅಂಗವಾಗಿ ಇದೇ 21 ಹಾಗೂ 22ರಂದು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, 21ರ ಶುಕ್ರವಾರದಂದು ವಿವಿಧ ಹೋಮಾದಿಗಳು, 22ನೇ ಶನಿವಾರದಂದು ಮೃತ್ಯುಂಜಯ, ದುರ್ಗಾಹೋಮ ಸೇರಿದಂತೆ ತೈಲಾಭಿಷೇಕ ಕಾರ್ಯಕ್ರಮ, ನಂತರ 1ಗಂಟೆಗೆ ಸಾಮೂಹಿಕ ಪ್ರಸಾದ ವಿನಿಯೋಗ, ಸಂಜೆ ರವಿಶಂಕರ ಗುರೂಜಿಯವರ ಆರ್ಟ್ ಆಫ್ ಲಿವಿಂಗ್ ವತಿಯಿಂದ ಸತ್ಸಂಗ, ಸ್ವಾಮಿ ಭಕ್ತರಿಂದ ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಾಲಯ ಸಮಿತಿಯ ಪ್ರಮುಖರಾದ ಕೆ.ಎಸ್. ರಮೇಶ್ ತಿಳಿಸಿದ್ದಾರೆ.
ಬಂಜಾರ ಸಮುದಾಯರಚನಾತ್ಮಕ ಕಾರ್ಯ
ಶಿರಾ: ಪ್ರತಿಯೊಂದು ಸಂಘ ಸಂಸ್ಥೆಗಳಲ್ಲೂ ಸಂಘಟನೆ ಅತಿ ಮುಖ್ಯವಾಗಿದ್ದು ಉತ್ತಮ ಸಂಘಟನೆಯೊಂದಿದ್ದರೆ ಯಾವ ಕಾರ್ಯವನ್ನಾದರೂ ಸಾಧಿಸಬಹುದು. ಈ ನಿಟ್ಟಿನಲ್ಲಿ ಬಂಜಾರ ಸಮುದಾಯ ತಾಲೂಕಿನಲ್ಲಿ ಉತ್ತಮ ಸಂಘಟನೆಯಲ್ಲಿ ತೊಡಗಿ ರಚನಾತ್ಮಕ ಕಾರ್ಯ ಮಾಡುತ್ತಿದೆ ಎಂದು ಮಾಜಿ ಜಿ.ಪಂ. ಉಪಾಧ್ಯಕ್ಷೆ ಚಂಪಕಮಾಲ ತಿಳಿಸಿದರು. ಅವರು ನಗರದ ಸೇವಾಲಾಲಲ್ಬಂಜಾರ ಸಮುದಾಯ ಭವನದ ಆವರಣದಲ್ಲಿ ಕರ್ನಾಟಕ ಪ್ರದೇಶ ಬಂಜಾರ (ಲಂಬಾಣಿ) ರಕ್ಷಣಾ ವೇದಿಕೆ ಹಾಗೂ ಶಿರಾ ತಾಲೂಕು ಬಂಜಾರ ಶ್ರೇಯೋಭಿವೃದ್ಧಿ ಸಂಘಗಳ ಸಂಯುಕ್ತಾಶ್ರಯದಲ್ಲಿ ನಡೆದ ಶ್ರೀ ಸಂತ ಸೇವಾಲಾಲ್ ಅವರ ಜನ್ಮ ಜಯಂತ್ಯುತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಬಂಜಾರ ಸಮುದಾಯವು ದೇವರಂತೆ ಪೂಜಿಸುವ ಸಂತ ಶ್ರೀ ಸೇವಾಲಾಲ್ ಸ್ವಾಮಿಗಳು ಕೇವಲ ಸ್ವಾಮೀಜಿಯಷ್ಟೆ ಅಲ್ಲದೆ ಶಾಂತಿ ಸ್ವರೂಪರೂ ಆಗಿದ್ದರು. ಇಂತಹ ಹುತಾತ್ಮರ ಜಯಂತಿಯನ್ನು ಶಿರಾ ತಾಲೂಕಿನಲ್ಲಿ ಅದ್ಧೂರಿಯಾಗಿ ಆಚರಿಸುತ್ತಿರುವುದು ಶ್ಲಾಘನೀಯ ಸಂಗತಿ ಎಂದರು. ನಗರಸಭೆ ಆಯುಕ್ತ ಈರಾನಾಯ್ಕ ಅವರು ಮಾತನಾಡಿ ಶಿರಾ ತಾಲೂಕಿನ ಬಂಜಾರ ಸಮುದಾಯದಲ್ಲಿನ ಸಂಘಟನೆ ತಮಗೆ ನಿಜಕ್ಕೂ ಸಂತಸ ತಂದಿದೆ ಎಂದರು. ವಕೀಲ ಪರಶುರಾಮ ನಾಯ್ಕ ಮಾತನಾಡಿ ಬಂಜಾರ ಸಮಾಜ ಈಗಲೂ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು ಹಿಂದುಳಿದವರಿದ್ದಾರೆ. ಇಂದಿಗೂ ಮಲಗಲು ಸೂರಿಲ್ಲದ ವಿದ್ಯಾಭ್ಯಾಸ ಮಾಡಲು ಕಷ್ಟಪಡುವ ಬವಣೆ ಇದ್ದು, ಇವರ ಸಮಸ್ಯೆಯನ್ನು ಹೋಗಲಾಡಿಸಲು ಸರ್ಕಾರ ಸಂಘಟನೆಗಳು ಮುಂದಾಗಬೇಕು ಎಂದರು.
ಆಧ್ಯಾತ್ಮದ ಸುಸ್ಥಿ ತಿಯೇ ಆರೋಗ್ಯ: ಕುಲಕರ್ಣಿ
ತುಮಕೂರು: ನಮ್ಮ ಬದುಕನ್ನು ಆರೋಗ್ಯ ಹಾಗೂ ಆಧ್ಯಾತ್ಮಪೂರ್ಣವಾಗಿ ಇಟ್ಟುಕೊಳ್ಳಬೇಕು. ದೈಹಿಕವಾಗಿ, ಮಾನಸಿಕವಾಗಿ, ಸಾಮಾಜಿಕವಾಗಿ ಹಾಗೂ ಆಧ್ಯಾತ್ಮಿಕವಾಗಿ ಸಾಮಥ್ಯವುಳ್ಳವರೇ ಆರೋಗ್ಯವಂತರು ಹಾಗೂ ಇವುಗಳ ಸುಸ್ಥಿತಿಯೇ ಆರೋಗ್ಯ ಎಂದು ನಿವೃತ್ತ ಆರೋಗ್ಯಾಧಿಕಾರಿಗಳೂ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೂ ಆದ ಲೇಖಕ ಜಿ.ಕೆ. ಕುಲಕರ್ಣಿ ಹೇಳಿದರು. ಅವರು ತುಮಕೂರಿನ ಜ್ಞಾನಬುತ್ತಿ ಸತ್ಸಂಗ ಕೇಂದ್ರವು ವಿದ್ಯಾವಾಹಿನಿ ಪ.ಪೂ. ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ 238 ನೇ ಸಾಪ್ತಾಹಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಆಧ್ಯಾತ್ಮ ಎಂಬ ವಿಷಯದ ಬಗ್ಗೆ ಮಾತನಾಡಿದರು. ಶರೀರಂ ಖಲು ಧರ್ಮ ಸಾಧನಂ ಎಂಬ ನುಡಿಯಂತೆ ಧರ್ಮಸಾಧನೆಗೆ ಶರೀರ ಆರೋಗ್ಯವಾಗಿರಬೇಕು. ಜೊತೆಗೆ ಮನಸ್ಸಿನ ಆರೋಗ್ಯವು ಬಹುಮುಖ್ಯವಾಗಿದೆ. ತಾಮಸದಿಂದ ಕೂಡಿದ ಈ ದೇಹವನ್ನು ಹೆಚ್ಚುಕೊಬ್ಬಿಸಬೇಡಿ. ಆಹಾರವನ್ನು ಆದಷ್ಟು ಕಡಿಮೆ ತಿನ್ನಿ. ಹಸಿರು ತರಕಾರಿ ತಿನ್ನದೇ ಇರುವುದು, ಶ್ರಮವಿಲ್ಲದ ಜೀವನ, ಮಧ್ಯಪಾನ, ಧೂಮಪಾನಗಳ ಚಟಗಳಿಂದ ರಕ್ತದೊತ್ತಡ ದೇಹದ ತೂಕ ಜಾಸ್ತಿ ಹಾಗೂ ಕೊಲೆಸ್ಟ್ರಾಲ್ ಹೆಚ್ಚಳದಿಂದ ಬೊಜ್ಜು ಹೆಚ್ಚಾಗಿ ಎಲ್ಲಾ ರೋಗಗಳ ಮೂಲವಾಗುತ್ತಿದೆ. ಆದ್ದರಿಂದ ಈಗಲಾದರೂ ಎಚ್ಚೆತ್ತುಕೊಳ್ಳಿ ನಿಮ್ಮ ವಾಕಿಂಗ್ ನಿರಂತರವಾಗಿರಲಿ ಎಂದರು. ಸಮತೋಲನ ಆಹಾರ ಸೇವನೆ ಮಾಡಿ, ಮಾತ್ರೆಗಳ ಸಹಾಯವಿಲ್ಲದೆ ನಿದ್ರೆ ಮಾಡಿ. ಆಹಾರ ಸೇವನೆಯಲ್ಲಿ ಕೊಬ್ಬಿನ ಆಹಾರ ಸೇವನೆ ಕಡಿಮೆ ಮಾಡಿ, ಉಪ್ಪು, ಸಕ್ಕರೆ, ಮೈದ ಹಿಟ್ಟಿನ ಸೇವನೆಯನ್ನು ಆದಷ್ಟು ಮಿತಗೊಳಿಸಿ ಎಂದರು.