ಶುಲ್ಕ ವಿನಾಯಿತಿಯಿಂದ ದೂರವಿಡುವ ಕ್ರಮಕ್ಕೆ ಖಂಡನೆ
ತುಮಕೂರು: ವಿದ್ಯಾರ್ಥಿಗಳನ್ನು ಶುಲ್ಕ ವಿನಾಯಿತಿ ಸೌಲಭ್ಯದಿಂದ ದೂರವಿಡುವ ಸರ್ಕಾರದ ಕ್ರಮ ಖಂಡಿಸಿ ತುಮಕೂರಿನಲ್ಲಿ ಎಬಿವಿಪಿ ಯಿಂದ ಪ್ರತಿಭಟನೆ ನಡೆಸಲಾಯಿತು.
ರಾಜ್ಯ ಸರ್ಕಾರ ಹೊಸ ಕಾಯ್ದೆಯನ್ನು ತಂದು ವಿದ್ಯಾರ್ಥಿಗಳನ್ನು ಶುಲ್ಕ ವಿನಾಯಿತಿಯಿಂದ ದೂರವಿಡುವ ಪ್ರಯತ್ನವನ್ನು ಮಾಡುತ್ತಿದೆ. ಈ ಹಿಂದೆ ಬಿ.ಸಿ.ಎಂ. ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಶುಲ್ಕ ವಿನಾಯಿತಿ
ರದ್ದಾಗಲಿದ್ದು, ವಿದ್ಯಾರ್ಥಿಗಳು ಪೂರ್ಣ ಶುಲ್ಕವನ್ನು ಪಾವತಿಸುವ ಪರಿಸ್ಥಿತಿ ಉಂಟಾಗಲಿದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
ಈ ಆದೇಶದಂತೆ ವಿದ್ಯಾರ್ಥಿಗಳು ಪಾವತಿಸಿದ ಹೆಚ್ಚುವರಿ ಶುಲ್ಕವನ್ನು (ಡಿ.ಬಿ.ಟಿ.) ನಗದು ವರ್ಗಾವಣೆ ಸೌಲಭ್ಯದಡಿ ಸರ್ಕಾರವು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ವರ್ಗಾಯಿಸುವ ಸರ್ಕಾರದ ನಿರ್ಣಯ ಖಂಡಿಸಿ ಎಬಿವಿಪಿ ರಾಜ್ಯಾದ್ಯಂತ ಹೋರಾಟ ನಡೆಸುತ್ತಿದೆ ಎಂದರು.
ತುಮಕೂರಿನ ಟೌನ್ ಹಾಲ್ ವೃತ್ತದ ಬಳಿ ಹೋರಾಟ ನಡೆಸಲಾಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ರಾಜ್ಯ ಸಹಕಾರ್ಯದರ್ಶಿ ಅಮರೇಶ್ ಮಾತನಾಡಿ ಶುಲ್ಕ ವಿನಾಯಿತಿ ಪಡೆಯಲು ವಿದ್ಯಾರ್ಥಿಯೊಬ್ಬ ಯಾವುದೇ ಮುಷ್ಕರಗಳಲ್ಲಿ ಭಾಗಿಯಾಗಿರಬಾರದು ಅಥವಾ ಈ ರೀತಿಯ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರಬಾರದು ಎಂದು ಕಾಯಿದೆಯಲ್ಲಿ ಉಲ್ಲೇಖಿಸಲಾಗಿದೆ ಎಂದರು.
ಮುಷ್ಕರ ಮಾಡುವುದು ಕಾನೂನು ಬಾಹಿರವೇ ಎಂಬುವುದನ್ನು ಸರ್ಕಾರ ಸ್ಪಷ್ಟಪಡಿಸಬೇಕು. ಅನ್ಯಾಯದ ವಿರುದ್ಧ, ತಮ್ಮ ಹಕ್ಕು, ಸಾಮಾಜಿಕ ನ್ಯಾಯಕ್ಕೆ ಆಗ್ರಹಿಸಿ ಆಂದೋಲನ ನಡೆಸುವುದು, ಪ್ರಶ್ನಿಸುವುದು ಸಂವಿಧಾನ ಭಾರತದ ಪ್ರಜೆಗಳಿಗೆ ನೀಡಿರುವ ಸಂವಿಧಾನ ದತ್ತವಾದ ಮೂಲಭೂತ ಹಕ್ಕಾಗಿದೆ. ಈ ಹಕ್ಕನ್ನು ನಿರಾಕರಿಸುವುದು ಸಂವಿಧಾನ ಪ್ರಜೆಗೆಳಿಗೆ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸರ್ಕಾರ ಧಕ್ಕೆ ತರುತ್ತಿದೆ ಎಂದರು.
ವಿದ್ಯಾರ್ಥಿಯೊಬ್ಬ ಶುಲ್ಕ ಭರಿಸುವ ವೇಳೆಗೆ ಶುಲ್ಕ ವಿನಾಯಿತಿ ನೀಡದೆ, ವಿದ್ಯಾರ್ಥಿ ದೆಸೆ ಮುಗಿದನಂತರ ಅವನ ಬ್ಯಾಂಕ್ ಖಾತೆಗೆ ಹಣ ಪಾವತಿಸುವುದು, ದೇಶದಲ್ಲಿ ಆಧಾರ್ ಕಾರ್ಡ್ ಕಡ್ಡಾಯವಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದರೂ ಈ ಶುಲ್ಕ ವಿನಾಯಿತಿಗೆ ಆಧಾರ್ ಕಾರ್ಡ್ ಕಡ್ಡಾಯವಾಗಿ ಹೊಂದಿರಬೇಕು ಎನ್ನುವುದು ವಿದಾರ್ಥಿ ವಿರೋಧಿ ನೀತಿಯಾಗಿದೆ ಎಂದು ಜಿಲ್ಲಾ ಸಹ ಸಂಚಾಲಕ್ ರವಿಕುಮಾರ್ ಹೇಳಿದರು.
ಶುಲ್ಕ ವಿನಾಯಿತಿಯನ್ನು ವಿದ್ಯಾರ್ಥಿಯೂ ಶುಲ್ಕ ಪಾವತಿಸುವ ಶೈಕ್ಷಣಿಕ ವರ್ಷಾರಂಭ ಸಂದರ್ಭದಲ್ಲೇ ವಿನಾಯಿತಿ ಪಡೆದು ಶುಲ್ಕ ಪಾವತಿಸಬೇಕು. ಮುಷ್ಕರ, ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ಸರ್ಕಾರಿ ಸೌಲಭ್ಯವನ್ನು ನೀಡದೇ ಸಂವಿಧಾನ ವಿರೋಧಿ ನಿಲುವನ್ನು ತಕ್ಷಣವೇ ಹಿಂಪಡೆದುಕೊಂಡು ರಾಜ್ಯದ ವಿದ್ಯಾರ್ಥಿ ಸಮುದಾಯದ ಕ್ಷಮೆ ಕೇಳಬೇಕು ಎಂದಿದ್ದಾರೆ.
ವಿದ್ಯಾರ್ಥಿ ನಾಯಕರಾದ ಸುನಿಲ್ ಕುಮಾರ್, ಮಧು. ಕೆ.ಎನ್. ಸಚಿನ್, ಮನೋಜ್, ಮಲ್ಲಿಕಾರ್ಜುನ, ದೇವೆಂದ್ರ, ಸಂತೋಷ್, ನಗರ ಸಹ ಕಾರ್ಯದರ್ಶಿ ತ್ರಿನೇತ್ರ, ಕಾರ್ಯಕರ್ತರುಗಳಾದ ಮಂಜುನಾಥ, ಶಿವುಕುಮಾರ್ ಮುಂತಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.