ಒಬ್ಬ ವ್ಯಕ್ತಿಯಿಂದ ರಾಷ್ಟ್ರ ಪ್ರಗತಿ ಅಸಾಧ್ಯ
ತುಮಕೂರು: ರಾಜಕೀಯ ಪಕ್ಷಗಳು ಒಬ್ಬ ವ್ಯಕ್ತಿಯನ್ನು ಛಾಯಾ ಪುರುಷನಂತೆ ತೋರಿಸುವ ಮೂಲಕ ದೇಶದ ಅಭಿವೃದ್ಧಿಯಾಗುತ್ತದೆ ಎಂದು ಬಿಂಬಿಸುತ್ತಿದ್ದು ಯಾವುದೇ ಒಬ್ಬ ವ್ಯಕ್ತಿಯಿಂದ ದೇಶ ಕಟ್ಟಲು ಸಾಧ್ಯವಿಲ್ಲ. ಚಳವಳಿಗಳನ್ನು ಬಲಿಷ್ಠವಾಗಿ ಕಟ್ಟುವ ಮೂಲಕ ದೇಶ ಕಟ್ಟುವ ಕೆಲಸ ಮಾಡಬೇಕಾಗಿದೆ ಎಂದು ಪ್ರಗತಿಪರ ಚಿಂತಕ ಕೆ.ದೊರೈರಾಜ್ ಅಭಿಪ್ರಾಯಪಟ್ಟರು.
ನಗರದ ದ್ವಾರಕ ರೆಸಿಡೆನ್ಸಿ ಸಭಾಂಗಣದಲ್ಲಿ ನಡೆದ ಡಿವೈಎಫ್‌ಐ 4ನೇ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ನರೇಂದ್ರಮೋದಿ ದೇಶದ ಪ್ರಧಾನಿಯಾದರೆ ದೇಶ ಸಮಗ್ರ ಅಭಿವೃದ್ಧಿಯಾಗುತ್ತದೆ ಎಂದು ಬಿಂಬಿಸುತ್ತಿದ್ದು, ವಾಸ್ತವವಾಗಿ ಯಾವುದೇ ಒಬ್ಬ ವ್ಯಕ್ತಿಯಿಂದ ದೇಶದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.
ಯುವ ಚಿಂತನಾ ಬಜೆಟ್ ಇಲ್ಲವೇ ಇಲ್ಲ: ನಮ್ಮನಾಳಿದ ಸರ್ಕಾರಗಳು ಯುವ ಜನಪರವಾದ ಉದ್ಯೋಗಗಳನ್ನು ಸೃಷ್ಟಿಸುವ ಯಾವುದೇ ಒಂದು ಬಜೆಟ್ ಮಂಡಿಸಿಲ್ಲ ಸರ್ಕಾರಗಳು ಯುವಜನ ಪರವಾದ ಬಜೆಟ್ ಗಳನ್ನು ಮಂಡಿಸಬೇಕು ಎಂದ ಅವರು ಇಂದು ಬಡತನದಿಂದ ಬಳಲುತ್ತಿರುವ ಜನರು ತಮ್ಮ ಜೀವನ ಸಾಗಿಸಲು ಮಕ್ಕಳ ಮಾರಾಟ, ಹೆಣ್ಣು ಮಕ್ಕಳನ್ನು ಮಾರಾಟ ಮಾಡುವಂತಹ ಕೆಲಸಗಳು ನಡೆಯುತ್ತಿವೆ ಇವು ನಮ್ಮ ಸುತ್ತಾ ಇರುವ ಬಡತನವನ್ನು ಬಿಂಬಿಸುತ್ತದೆ ಜಾತಿ ಆಧಾರದಲ್ಲಿ, ಬಲಿಷ್ಠರಾಗಿರುವ ಜನಪ್ರತಿನಿಧಿಗಳು ತಮ್ಮ ತಮ್ಮ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನಗಳನ್ನು ಪಡೆಯುವ ಮೂಲಕ ಅತ್ಯಂತ ಹಿಂದುಳಿದ ಪ್ರದೇಶಗಳನ್ನು ಕಡೆಗಣಿಸುತ್ತಿದ್ದಾರೆ.
ಈ ನಿಟ್ಟಿನಲ್ಲಿ ಇದನ್ನು ಪ್ರಶ್ನಿಸಲು ಯುವ ಜನರು ಬೌದ್ಧಿಕವಾಗಿ ತಯಾರಾಗಬೇಕಾಗಿದೆ ಎಂದು ಕಿವಿಮಾತು ಹೇಳಿದರು.
ಇಲ್ಲದಿದ್ದರೆ ಕೋಮುವಾದ, ಜಾತಿವಾದಗಳಿಂದ ಸರ್ವಾಧಿಕಾರಿ ಅಧಿಕಾರವನ್ನು ನಾವು ನೋಡಬೇಕಾಗುತ್ತದೆ ಎಂದರು ಜೀವನದಲ್ಲಿ ಹಲವು ಕನಸುಗಳನ್ನು ಹೊತ್ತಿರುವ ಯುವಜನರು ತಮ್ಮ ವೈಯಕ್ತಿಕ ಬದುಕಿನ ಜೊತೆ ಸಂಘಟನೆಯನ್ನು ಕಟ್ಟುವ ಕೆಲಸ ಮಾಡಬೇಕಾಗಿದೆ ಎಂದರು
ಎಐಎಲ್‌ಯು ಜಿಲ್ಲಾ ಉಪಾಧ್ಯಕ್ಷ ಎಂ.ನಾರಾಯಣ್ ಬಹುಮಾನ ವಿತರಿಸಿದರು
ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಿ. ರಾಜಶೇಖರಮೂರ್ತಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯುವ ಜನರನ್ನು ಕಡೆಗಣಿಸುತ್ತಿದ್ದು ಕಾರ್ಪೊರೇಟ್ ಆಧಾರಿತ ಆಡಳಿತವನ್ನು ನಡೆಸುತ್ತಿವೆ ಎಂದರು.
ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಎಂ.ಜಿ.ಮಂಜುನಾಥ, ಜಿಲ್ಲಾ ಉಪಾಧ್ಯಕ್ಷೆ ಲಕ್ಷ್ಮಿ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್.ಕೆ. ಸುಬ್ರಮಣ್ಯ , ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಎಸ್. ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾಧ್ಯಕ್ಷ ಎಂ.ಆರ್. ನಾಗರಾಜು ಅಧ್ಯಕ್ಷತೆ ವಹಿಸಿದ್ದರು ಮಂಜುನಾಥ್.ಬಿ ಸ್ವಾಗತಿಸಿ ಆದಿಮೂರ್ತಿ ವಂದಿಸಿದರು.