ಕುಡಿವ ನೀರು ಕಾಮಗಾರಿಗೆ ಅಡ್ಡಿ: ಆಕ್ರೋಶ
ಪಾವಗಡ: ರಸ್ತೆ ಹಾಗೂ ಕುಡಿಯುವ ನೀರಿನ ಪೈಪ್ಲೈನ್ ಕಾಮಗಾರಿಗೆ ರೈತರೊಬ್ಬರು ಅಡ್ಡಿಪಡಿಸಿದ ಹಿನ್ನಲೆಯಲ್ಲಿ ಗ್ರಾಮದ ಸುತ್ತ ಬೇಲಿ ಹಾಕಿ ದಿಗ್ಬಂಧನ ವಿಧಿಸಿ ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ತಾಲೂಕಿನ ಚನ್ನಮ್ಮರೆಡ್ಡಿ ಹಳ್ಳಿಯಲ್ಲಿ ನಡೆದಿದೆ.ತಾಲೂಕಿನ ದೊಮ್ಮತಮರಿ ಗ್ರಾಪಂ ವ್ಯಾಪ್ತಿಯ ಚನ್ನಮ್ಮರೆಡ್ಡಿ ಹಳ್ಳಿಯಲ್ಲಿ ಜಿಪಂ ಪ್ರಾಯೋಜಿತ ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲು ರು. 4.50ಲಕ್ಷ ವೆಚ್ಚದ ಕಾಮಗಾರಿ ನಡೆಯುತ್ತಿದ್ದು, ಗ್ರಾಮದ ಹೊರ ವಲಯದಲ್ಲಿರುವ ಕೊಳವೆ ಬಾವಿಯಿಂದ ಪೈಪ್ಲೈನ್ ಮೂಲಕ ಗ್ರಾಮಕ್ಕೆ ನೀರು ಸರಬರಾಜು ಮಾಡಲು ಜೆಸಿಬಿಯಿಂದ ಕಾಲುವೆ ತೆಗೆಯುವ ಸಂದರ್ಭದಲ್ಲಿ ನಮ್ಮ ಜಮೀನಿನಲ್ಲಿ ಕಾಲುವೆ ತೆಗೆಯಬೇಡಿ ಎಂದು ಗ್ರಾಮದ ರೈತ ವೆಂಕಟೇಶಪ್ಪ ಎಂಬುವರು ಅಡ್ಡಿಪಡಿಸಿದ್ದು ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ನಕಾಶೆಯಲ್ಲಿರುವ ರಸ್ತೆ ಒತ್ತುವರಿ ಮಾಡಿಕೊಂಡು ಸಾರ್ವಜನಿಕರ ಓಡಾಡಟಕ್ಕೆ ತೊಂದರೆ ಪಡೆಸಿರುವುದಲ್ಲದೆ. ಈಗ ಕುಡಿಯುವ ನೀರಿನ ಕಾಮಗಾರಿಗೂ ಅಡ್ಡಿಪಡಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಸಮಸ್ಯೆ ಇತ್ಯರ್ಥವಾಗುವವರೆಗೂ ಗ್ರಾಮದ ಜನತೆ ಹೊರಗಡೆ ಹೋಗಬಾರದು ಮತ್ತು ಹೊರಗಿನ ಜನತೆ ಗ್ರಾಮಕ್ಕೆ ಬರಬಾರದೆಂದು ಗ್ರಾಮದ ಸುತ್ತ ಸೀಮೆ ಜಾಲಿ ಬೇಲಿ ಹಾಕಿ ಪ್ರತಿಭಟಸಿದರು.
ಗ್ರಾಮಸ್ಥರಾದ ಪಾಪಣ್ಣ, ಅಂಜಿನಪ್ಪ, ಕೃಷ್ಣಪ್ಪ,ನಾಗೇಶಪ್ಪ, ಸಂಜೀವರಾಯಪ್ಪ, ಹನುಮಂತರಾಯಪ್ಪ, ಮೈಲಾರಪ್ಪ, ಹರೀಶ್, ಆನಂದ್ ಮತ್ತಿತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು. ಪಿಎಸ್ಐ ಅಶೋಕ್ ಕುಮಾರ್ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು.