20 ನಿಮಿಷ 20 ಸುದ್ದಿ
ಜೆಡಿಎಸ್ ಸಂಸದೀಯ ಮಂಡಳಿ ಸದಸ್ಯರಾಗಿ ತಿಮ್ಮರಾಯಪ್ಪ ನೇಮಕ
ಪಾವಗಡ: ರಾಜ್ಯ ಜೆಡಿಎಸ್ ಸಂಸದೀಯ ಮಂಡಳಿಯ ಸದಸ್ಯರಾಗಿ ಪಾವಗಡ ಕ್ಷೇತ್ರದ ಶಾಸಕ ಕೆ.ಎಂ. ತಿಮ್ಮರಾಯಪ್ಪ ನೇಮಕವಾಗಿರುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎ.ಕೃಷ್ಣಪ್ಪ ತಿಳಿಸಿದ್ದಾರೆ. ಪಕ್ಷ ನಿಷ್ಠೆ ಹಾಗೂ ಪ್ರಮಾಣಿಕತೆ ಗುರುತಿಸಿ ಗಡಿ ಭಾಗದ ಹಿಂದುಳಿದ ವರ್ಗಕ್ಕೆ ಪ್ರಾಶಸ್ಯ ನೀಡುವ ಮೂಲಕ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಶಿಫಾರಸಿನ ಮೇರೆಗೆ ಶಾಸಕ ಕೆ.ಎಂ. ತಿಮ್ಮರಾಯಪ್ಪ ಅವರನ್ನು ಪಕ್ಷದ ಸಂಸದೀಯ ಮಂಡಳಿ ಸದಸ್ಯರನ್ನಾಗಿ ನೇಮಕ ಮಾಡಿ ಆದೇಶ ಜಾರಿ ಮಾಡಿರುವುದಾಗಿ ತಿಳಿಸಿದ್ದಾರೆ.
ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಎನ್. ತಿಮ್ಮಾರೆಡ್ಡಿ, ಜಿಪಂ ಸದಸ್ಯ ಆರ್.ಸಿ. ಅಂಜಿನಪ,್ಪ ಪಕ್ಷದ ತಾ.ಉಪಾಧ್ಯಕ್ಷ ಬಲರಾಮರೆಡ್ಡಿ, ಪ್ರಧಾನ ಕಾರ್ಯದರ್ಶಿ ಗೋವಿಂದಬಾಬು, ಬಿ. ಅಚ್ಚಮ್ಮನಹಳ್ಳಿ ವೆಂಕಟರವಣ ಹಾಗೂ ಯುವ ಮುಖಂಡರಾದ ಪಿ.ಎ. ಶ್ರೀನಿವಾಸ್, ದಲಿತ್ಕುಮಾರ್ ಹಾಗೂ ಕೆ.ಟಿ.ಹಳ್ಳಿ ಮಂಜುನಾಥ್ ಇತರರು ಕೃತಜ್ಞತೆ ಸಲ್ಲಿಸಿದ್ದಾರೆ.
ಸ್ವಚ್ಛತೆ ಕುರಿತು ಅಗತ್ಯ ಕ್ರಮ ಕೈಗೊಳ್ಳಿ: ಶಾಸಕ ನಾಗರಾಜಯ್ಯ
ಕುಣಿಗಲ್: ಗ್ರಾಮಾಂತರ ಪ್ರದೇಶದಲ್ಲಿನ ಹಲವು ಗ್ರಾಮಗಳಲ್ಲಿ ಉತ್ತಮ ಕಾಂಕ್ರಿಟ್ ರಸ್ತೆ ಮತ್ತು ಚರಂಡಿಗಳ ನಿರ್ಮಾಣವಾಗಿದ್ದು, ಸ್ವಚ್ಛತೆ ಬಗ್ಗೆ ಗ್ರಾಮ ಪಂಚಾಯಿತಿಯವರು ಅಗತ್ಯ ಕ್ರಮ ಕೈಗೊಳ್ಳದಿರುವ ಬಗ್ಗೆ ಶಾಸಕ ಡಿ. ನಾಗರಾಜಯ್ಯ ಅಸಮಾಧಾನ ವ್ಯಕ್ತಪಡಿಸಿದರು. ಅಗತ್ಯ ಕ್ರಮಕ್ಕೆ ಮುಂದಾಗಬೇಕೆಂದು ತಾಪಂ ಇಒಗೆ ತಾಕೀತು ಮಾಡಿದರು.
ಶನಿವಾರ, ಹುತ್ರಿದುರ್ಗ ಜಿಪಂ ಕ್ಷೇತ್ರದ ಜೋಡಿ ಹೊಸಹಳ್ಳಿ ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಭೇಟಿ ನೀಡಿದಾಗ, ಕೆಲ ಗ್ರಾಮಸ್ಥರು ಚರಂಡಿಗಳ ಅವ್ಯವಸ್ಥೆ ಬಗ್ಗೆ ದೂರಿದರು. ಈ ಹಿನ್ನೆಲೆಯಲ್ಲಿ ಗ್ರಾಪಂ ಪಿಡಿಒ ಅವರನ್ನು ತರಾಟೆಗೆ ತೆಗೆದುಕೊಂಡು, ಗ್ರಾಪಂ ಪಿಡಿಒ, ಕಾರ್ಯದರ್ಶಿಗಳು ಗ್ರಾಮಾಂತರ ಪ್ರದೇಶಗಳಿಗೆ ಕಾಲಕಾಲಕ್ಕೆ ಭೇಟಿ ನೀಡಿ ಗ್ರಾಮಗಳ ನೈರ್ಮಲ್ಯ ಸಂರಕ್ಷಣೆ ನಿಟ್ಟಿನಲ್ಲಿ ಕಾಳಜಿ ವಹಿಸಬೇಕಿದೆ. ಚರಂಡಿ ಸ್ವಚ್ಛತೆ ಸೇರಿದಂತೆ ಕುಡಿಯುವ ನೀರು ಪೂರೈಕೆ ಮಾಡುವ ನಿಟ್ಟಿನಲ್ಲಿ ಮುಂಜಾಗೃತ ಕ್ರಮ ವಹಿಸಬೇಕೆಂದರು.
ಜಿಪಂ ಸಿಇಒ ನಿರ್ಲಕ್ಷ್ಯಕ್ಕೆ ಆಕ್ರೋಶ, ಕ್ರಮಕ್ಕೆ ಆಗ್ರಹ
ಪಾವಗಡ: ತಾಲೂಕಿನ ಚಿಕ್ಕಹಳ್ಳಿ ಗ್ರಾಪಂನಲ್ಲಿ ಪ್ರಸಕ್ತ ಸಾಲಿನಲ್ಲಿ ಸುಮಾರು 19ಲಕ್ಷ ದುರುಪಯೋಗದ ಬಗ್ಗೆ ದಾಖಲೆ ಸಮೇತ ಸ್ಪಷ್ಟಪಡಿಸಿದ್ದರೂ ಕಾರ್ಯದರ್ಶಿ ವಿರುದ್ಧ ಕ್ರಮ ಜರುಗಿಸುವಲ್ಲಿ ಜಿಪಂ ಸಿಇಒ ನಿರ್ಲಕ್ಷ್ಯ ವಹಿಸಿದ್ದಾರೆಂದು ತಾಲೂಕು ಕಾಂಗ್ರೆಸ್ ಮುಖಂಡ ಬಸವರಾಜ್ ಆರೋಪಿಸಿದ್ದಾರೆ. ಚಿಕ್ಕಹಳ್ಳಿ ಗ್ರಾಪಂನಲ್ಲಿ ಕಾರ್ಯದರ್ಶಿಯೊಬ್ಬರು 2012- 13ನೇ ಸಾಲಿಗೆ ಖಾತ್ರಿ ಯೋಜನೆ ಸೇರಿದಂತೆ ಸರ್ಕಾರ ವಿವಿಧ ಯೋಜನೆ ಅಡಿಯಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಲಕ್ಷಾಂತರ ರು.ಗಳ ಭ್ರಷ್ಟಾಚಾರ ವೆಸಗಿದ್ದಾರೆಂದು ಮುಖಂಡ ರಾಮ್ಮೋಹನ್ರೆಡ್ಡಿ ಎಂಬುವರು ಆರೋಪಿಸಿ ಕ್ರಮಕ್ಕೆ ದಾಖಲೆ ಸಮೇತ ಲೋಕಾಯುಕ್ತರು ಮತ್ತು ಜಿಪಂ ಸಿಇಒಗೆ ದೂರು ಸಲ್ಲಿಸಿದ್ದರು. ಸಿಇಒ ಆದೇಶದಂತೆ 12 ಪುಟಗಳ ವರದಿಯನ್ನು ದಾಖಲೆ ಸಮೇತ ಜಿಪಂ ಸಿಇಒ ಅವರಿಗೆ ವರದಿ ಸಲ್ಲಿಸಿದ್ದಾರೆ. ವರದಿ ಸಲ್ಲಿಸಿ ಸುಮಾರು 1ತಿಂಗಳು ಕಳೆದರೂ ವರದಿಗೆ ಸಂಬಂದಿಸಿದಂತೆ ಜಿಪಂ ಸಿಇಒ ಅವರು ಇದುವೆರಗೂ ಯಾವುದೇ ಕ್ರಮ ಜರುಗಿಸದೇ ಇರುವುದು ವಿಪರ್ಯಾಸವೆಂದ ಅವರು ಲೋಕಾಯುಕ್ತರ ತನಿಖೆಗೆ ದೂರು ಸಲ್ಲಿಸಿ ಒತ್ತಾಯಿಸಿರುವುದಾಗಿ ತಿಳಿಸಿದ್ದಾರೆ.
ಗ್ರಾಮೀಣ ಅಂಚೆ ನೌಕರರ ಬೇಡಿಕೆ ಆಗ್ರಹಿಸಿ ಪ್ರತಿಭಟನೆ
ಮಧುಗಿರಿ: ತಾಲೂಕಿನ ದೊಡ್ಡೇರಿ ಹೋಬಳಿ ಬಡವನಹಳ್ಳಿ ಉಪ ಅಂಚೆ ಕಚೇರಿ ವ್ಯಾಪ್ತಿಗೆ ಬರುವ ಗ್ರಾಮೀಣ ಅಂಚೆ ನೌಕರರ ಹಲವು ಬೇಡಿಕೆ ಈಡೇರಿಸಬೇಕೆಂದು ಪ್ರತಿಭಟಿಸಿದರು. ಜಿಡಿಎಸ್ ನೌಕರರನ್ನು ಪೌರ ನೌಕರರೆಂದು ಪರಿಗಣಿಸಿ ಇಲಾಖೆಯ ಎಲ್ಲ ನೌಕರರಿಗೆ ದೊರೆಯುವ ಸೌಲಭ್ಯಗಳನ್ನು ನೀಡಬೇಕು. ಕೇಂದ್ರದ 7ನೇ ವೇತನ ಆಯೋಗದ ವ್ಯಾಪ್ತಿಗೆ ನಮ್ಮನ್ನು ಸೇರಿಸಬೇಕು. ಅನುಕಂಪದ ಆಧಾರದ ನೌಕರಿ ಸವಲತ್ತನ್ನು ಪೂರ್ಣ ಪ್ರಮಾಣದಲ್ಲಿ ನೀಡಬೇಕು. ಶೇ.50ರಷ್ಟು ಡಿಎ ಮರ್ಜ್ ಮಾಡಿ ದಿನಗೂಲಿ ನೌಕರರಿಗೆ ಡಿಎ ಕೊಡಬೇಕು ಎಂದು ಆಗ್ರಹಿಸಿದರು. ಕೆ.ಪ್ಯಾರಿಜಾನ್, ಅಶ್ವತ್ಥ, ರಂಗನಾಥಪ್ಪ, ಪೂರ್ಣಿಮಾ,ನಟರಾಜ್ , ಬಡವನಹಳ್ಳಿ ಎಓಗೆ ಒಳಪಡುವ ಎಲ್ಲ ಗ್ರಾಮೀಣ ಅಂಚೆ ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ವಿದ್ಯಾರ್ಥಿ ವೃಂದಕ್ಕೆ ಏಕಾಗ್ರತೆ ಅಗತ್ಯ: ದೇಶಿಕೇಂದ್ರ ಶ್ರೀ
ತಿಪಟೂರು: ಪ್ರಕೃತಿಯ ಪ್ರತಿಯೊಂದು ಜೀವಿಯು ತಮ್ಮ ಕಾಯಕ ನಿಷ್ಠೆಯನ್ನು ಹೇಗೆ ಪರಿಪಾಲಿಸುತ್ತದೆಯೋ ಹಾಗೆಯೇ ವಿದ್ಯಾರ್ಥಿಗಳು ವಿದ್ಯಾರ್ಜನೆಯೆಂಬ ಕಾಯಕ ನಿಷ್ಠೆಯನ್ನು ಶಿಸ್ತು, ಸಂಯಮ, ಏಕಾಗ್ರತೆ ಶ್ರದ್ಧೆಯ ಮೂಲಕ ಸಾಧಿಸಿದರೆ ತಮ್ಮ ಕಾಯಕ ಮತ್ತು ಗುರಿ ಸಾರ್ಥಕವಾಗುತ್ತದೆ ಎಂದು ಗುರುಕುಲಾನಂದಾಶ್ರಮದ ಇಮ್ಮಡಿ ಕರಿಬಸವ ದೇಶಿಕೇಂದ್ರ ಸ್ವಾಮೀಜಿ ಕಿವಿಮಾತು ಹೇಳಿದರು. ಪಟ್ಟಣದ ಗುರುಕುಲ ಸಭಾಂಗಣದಲ್ಲಿ ಗುರುಕುಲ ವಿಜ್ಞಾನ ಪದವಿ ಪೂರ್ವ ಕಾಲೇಜು ಹಾಗೂ ಎಸ್ಆರ್ವಿ ಪದವಿ ಪೂರ್ವ ಕಾಲೇಜುಗಳ ಸಹಯೋಗದಲ್ಲಿ ನಡೆದ ಪ್ರತಿಭೋತ್ಸವದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು ವಿದ್ಯಾರ್ಥಿಗಳು ಮನಸ್ಸನ್ನು ಏಕಾಗ್ರತೆಯತ್ತ ಕೇಂದ್ರಿಕರಿಸುವ ಮೂಲಕ ವಿದ್ಯಾರ್ಥಿ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕೆಂದರು. ಪ್ರಾಂಶುಪಾಲ ಹೆಚ್.ಕೆ. ನರಸಿಂಹಮೂರ್ತಿ, ಟಿ.ಜಿ. ಲಿಂಗರಾಜು, ಎಚ್.ಎಸ್. ಸಿದ್ದರಾಮಯ್ಯ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.
ಇಳುವರಿ ಆಸೆಗೆ ರಾಸಾಯನಿಕ
ಬಳಕೆ ತರವಲ್ಲ: ಶಂಕರಪ್ಪ
ಗುಬ್ಬಿ: ಆಧಿಕ ಇಳುವರಿ ಪಡೆಯುವ ನಿಟ್ಟಿನಲ್ಲಿ ರಾಸಾಯನಿಕ ಗೊಬ್ಬರದ ಬಳಕೆ ಮಾಡುತ್ತಿರುವುದು ವಿಪರ್ಯಾಸ ಎಂದು ಸಾವಯವ ಕೃಷಿಕ ಅಮ್ಮನಘಟ್ಟದ ಶಂಕರಪ್ಪ ವಿಷಾದ ವ್ಯಕ್ತಪಡಿಸಿದರು. ತಾಲೂಕಿನ ಯಡವನಹಳ್ಳಿ ಗ್ರಾಮದ ಗಂಗಾಧರಯ್ಯ ಅವರ ತೋಟದಲ್ಲಿ ಶ್ರೀಗಂಧ ಸುಜೀವನ ಕೂಟ, ಐಡಿಎಫ್ ಸುಜೀವನ ಒಕ್ಕೂಟ ಹಾಗೂ ಐಡಿಎಫ್ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಸಾವಯವ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾವಯವ ಪದ್ಧತಿಯಲ್ಲಿ ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಪಡೆಯಬಹುದು. ದಿನ ನಿತ್ಯ ನಮ್ಮ ಆರೊಗ್ಯಕ್ಕೆ ಬೇಕಾದ ಪೋಷಕಾಂಶಯುಕ್ತ ಆಹಾರವನ್ನು ನಾವೇ ಬೆಳೆದುಕೊಂಡು ಆರೋಗ್ಯಕರ ಜೀವನವನ್ನು ನೆಡೆಸಬಹುದು ಎಂದು ಕಿವಿಮಾತು ತಿಳಿಸಿದರು.
ತೋಟಗಾರಿಕೆ ಇಲಾಖೆಯ ಶ್ರೀಧರ್ ಮಾತನಾಡಿದರು. ಸಂವಾದದಲ್ಲಿ ತಾಪಂ ಅಧ್ಯಕ್ಷ ಬಾಲಕೃಷ್ಣೇಗೌಡ, ಶಶಿಧರ್, ಬಸವರಾಜು, ರಮೇಶ್, ಗಂಗಾಧರಯ್ಯ, ಕರುಣಾಕರ್, ಜೀವನ ಉತ್ತೇಜನ ಅಧಿಕಾರಿ ಶಿವಶಂಕರ್, ಲಕ್ಷ್ಮಿನಾರಾಯಣಪ್ಪ, ನೇತ್ರಾ, ಮಂಡಾಲಾಧಿಕಾರಿಗಳಾದ ಶಶಿಕಲಾ, ತಿಮ್ಮರಾಜು, ಸಮೂಹಧಿಕಾರಿ ಮಂಜುನಾಥ ಹಾಜರಿದ್ದರು.
ಕಷ್ಟಪಟ್ಟು ಓದುವ ವಿದ್ಯಾರ್ಥಿ ಗುರಿ ಮುಟ್ಟುತ್ತಾನೆ: ಆಂಜನಪ್ಪ
ಮಧುಗಿರಿ: ಯಾವ ವಿದ್ಯಾರ್ಥಿ ಕಷ್ಟಪಟ್ಟು, ಇಷ್ಟಪಟ್ಟು ಓದಿರುತ್ತಾರೆ ಅಂತಹ ವಿದ್ಯಾರ್ಥಿ ಎದೆಗುಂದದೆ ಧೈರ್ಯ ಹಾಗೂ ಸುಲಭವಾಗಿ ಪರೀಕ್ಷೆ ಬರೆದು ಗುರಿ ಮುಟ್ಟುತ್ತಾನೆ ಎಂದು ಡಿಡಿಪಿಐ ಟಿ.ಎಸ್.ಆಂಜನಪ್ಪ ಹೇಳಿದರು. ಇಲ್ಲಿನ ಗುರುಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಶಾಖೆ ಮಧುಗಿರಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗಾಗಿ ಪರೀಕ್ಷೆ ಫಲಿತಾಂಶ ಉತ್ತಮ ಪಡಿಸುವ ಬಗ್ಗೆ ಏರ್ಪಟಾಗಿದ್ದ ಕಾರ್ಯಾಗಾರ ಮತ್ತು ಸಂವಾದ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತುಮುಲ್ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಕಠಿಣ ಪರಿಶ್ರಮದಿಂದ ಓದಿ ಉತ್ತಮ ಸಾಧನೆ ಮಾಡುವ ಮೂಲಕ ನಮ್ಮ ಶೈಕ್ಷಣಿಕ ಜಿಲ್ಲೆಗೆ ಕೀರ್ತಿ ತರಬೇಕು ಎಂದರು. ಪುರಸಭೆ ಅಧ್ಯಕ್ಷ ಎನ್.ಗಂಗಣ್ಣ ಮಧುಗಿರಿ ಶೈಕ್ಷಣಿಕ ಜಿಲ್ಲೆ ಕಳೆದ ಬಾರಿ ಫಲಿತಾಂಶ 6ನೇ ಸ್ಥಾನ ಪಡೆದಿತ್ತು. ಈ ಸಲ ಪ್ರಥಮ ಸ್ಥಾನ ಪಡೆಯಬೇಕು ಎಂದರು.
ಪ್ರಾಥಮಿಕ ಶಿಕ್ಷಣವನ್ನು ರಾಷ್ಟ್ರೀಕರಣಗೊಳಿಸಿ: ಈಶ್ವರನ್
ತುಮಕೂರು: ಇಡೀ ರಾಷ್ಟ್ರದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಸರ್ಕಾರ ಕಡೆಗಣಿಸಿದ್ದು, ಕೂಡಲೇ ಎಲ್ಲಾ ತಾರತಮ್ಯಗಳನ್ನು ಹೋಗಲಾಡಿಸಿ ಏಕರೂಪ ಶಿಕ್ಷಣ ಜಾರಿಗೆ ತರಬೇಕೆಂದು ರಾಷ್ಟ್ರೀಯ ಪ್ರಾಥಮಿಕ ಶಾಲಾ ಶಿಕ್ಷಕರ ಫೆಡರೇಷನ್ ಅಧ್ಯಕ್ಷ ಈಶ್ವರನ್ ಒತ್ತಾಯಿಸಿದರು. ಅವರು ದೇಶದ ವಿವಿಧ ರಾಜ್ಯಗಳ ಮೂಲಕ ನಗರಕ್ಕೆ ಆಗಮಿಸಿದ ರಾಷ್ಟ್ರೀಯ ಶೈಕ್ಷಣಿಕ ರಥವನ್ನು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ ಆತ್ಮೀಯವಾಗಿ ಸ್ವಾಗತಿಸಿ ಅಸ್ಸಾರ್ ಮೊಹಲ್ಲಾದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಬಸವರಾಜ ಗುರಿಕಾರ ಮಾತನಾಡಿ, ರಾಜ್ಯ ಸರ್ಕಾರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬೇರೆ ರಾಜ್ಯದಲ್ಲಿ ಇರುವಂತ ಎಲ್ಲಾ ಸೌಭ್ಯಗಳನ್ನು ನೀಡುವ ಮೂಲಕ ಗುಣಮಟ್ಟದ ಶಿಕ್ಷಣ ನೀಡಲು ಮುಂದಾಗಬೇಕು.
ಬಿಇಒ ರಾಜಕುಮಾರ್, ಐ.ಎಂ.ಮಹೇಶ್, ಪಾವಗಡ ಬಿಇಓ ನಾಗರಾಜು, ತಿಪ್ಪಯ್ಯ, ನರಸಿಂಹರಾಜು, ಎಚ್. ಹಿಮಂತರಾಜು, ಜೀವನ್ ಪ್ರಕಾಶ್, ಪದಾಧಿಕಾರಿಗಳಾದ ಓಂಕಾರೇಶ್, ಸುರೇಶ್ ಇತರರು ಹಾಜರಿದ್ದರು.
ಉಮ್ರಾಯಾತ್ರೆಗೆ ತಿಪಟೂರಿನಿಂದ 35 ಭಕ್ತರು
ತಿಪಟೂರು: ಸೌದಿ ಅರೇಬಿಯಾದ ಸುಪ್ರಸಿದ್ಧ ಮಕ್ಕಾ ಮದೀನ ಉಮ್ರಾಯಾತ್ರೆಗೆ ತಿಪಟೂರಿನಿಂದ ಮೊಟ್ಟ ಮೊದಲ ಬಾರಿಗೆ 35 ಭಕ್ತರು ತೆರಳಿದ್ದಾರೆ. ಪಟ್ಟಣದ ಗಾಂಧೀನಗರದ ಮದೀನ ಮಸೀದಿಯಲ್ಲಿ ಸಮಾರಂಭ ನಡೆಸಿ ಅವರಿಗೆ ಶುಭ ಹಾರೈಸಲಾಯಿತು. ಉಮ್ರಾಯಾತ್ರೆ ಶುಭವಾಗಲೆಂದು ಸಂಸದರಾದ ಜಿ.ಎಸ್. ಬಸವರಾಜು, ಶಾಸಕ ಕೆ. ಷಡಕ್ಷರಿ, ಬಿಜೆಪಿ ಮುಖಂಡರಾದ ಲೋಕೇಶ್ವರ, ನಾಸೀರ್ಜಾನ್, ಡಾ.ಶ್ರೀಧರ್, ಕಾಂಗ್ರೇಸ್ ಮುಖಂಡರಾದ ಜುಬೇರ್, ಬಂಡೆ ರಾಜಣ್ಣ, ಮುತುವಲ್ಲಿ ದಸ್ತಗೀರ್ ಮತ್ತಿತರ ಮುಖಂಡರು ಶುಭ ಹಾರೈಸಿದರು.
ಮಕ್ಕಳ ಹಕ್ಕು ಪಾಲಕರಿಗೂ ಅರಿವಿರಬೇಕು: ಕರಿಯಪ್ಪ
ಗುಬ್ಬಿ: ಮಕ್ಕಳ ಹಕ್ಕುಗಳ ಸಂರಕ್ಷಣೆ, ಮಕ್ಕಳ ಬದುಕುವ ಹಕ್ಕುಗಳು, ಮಕ್ಕಳ ವಿಕಾಸ ಹೊಂದುವ ಹಕ್ಕುಗಳ ಬಗ್ಗೆ ದೇಶದ ಪ್ರತಿಯೊಬ್ಬ ಪೋಷಕರು ಹಾಗೂ ಜನ ಸಾಮಾನ್ಯರು ಕಡ್ಡಾಯವಾಗಿ ಪಾಲಿಸುವತ್ತ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ತಾಲೂಕು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಕೆ.ಕರಿಯಪ್ಪ ತಿಳಿಸಿದರು. ತಾಲೂಕಿನಲ್ಲಿ ಅಮ್ಮನಘಟ್ಟ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಗ್ರಾಮ ಪಂಚಾಯಿತಿ, ಜನನಿ ಸಾಮಾಜಿಕ ಮತ್ತು ಸಾಂಸ್ಕತಿಕ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಮಕ್ಕಳ ಹಕ್ಕುಗಳ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಟಿ. ವೆಂಕಟೇಶ್, ಗ್ರಾಪಂ ಅಧ್ಯಕ್ಷೆ ಗಾಯತ್ರಿ, ಉಪಾಧ್ಯಕ್ಷ ಯತೀಶ್, ದೇವರಾಜ್, ಗಂಗಯ್ಯ, ವೆಂಕಟರಮಣಪ್ಪ, ಹನುಮಂತರಾಯ, ಕೋಕಿಲ, ಗಂಗಾಧರ್, ಅಪೂರ್ವ, ಶಿಕ್ಷಕರಾದ ಸಂಜೀವಯ್ಯ, ಗಿರಿರಾಜು ಮತ್ತಿತರರು ಉಪಸ್ಥಿತರಿದ್ದರು.
ರು. 5.55 ಲಕ್ಷ ಮೌಲ್ಯದ ಅನ್ನಭಾಗ್ಯ ಅಕ್ಕಿ ವಶ
ಪಾವಗಡ: ಶನಿವಾರ ಪಟ್ಟಣದ ಜ್ಯೋತಿ ರೈಸ್ ಮಿಲ್ ಮೇಲೆ ದಾಳಿ ಮಾಡಿದ ಪಾವಗಡ ಪೊಲೀಸರು ಸುಮಾರು 5.55ಲಕ್ಷ ರು.ಮೌಲ್ಯದ ಅನ್ನಭಾಗ್ಯ ಅಕ್ಕಿ ಲಾರಿಯೊಂದನ್ನು ವಶಕ್ಕೆ ತೆಗೆದುಕೊಂಡು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ತುರುವೇಕೆರೆಯಿಂದ ಅನ್ನಭಾಗ್ಯ ಅಕ್ಕಿ ಸಾಗಣಿಕೆ ಆಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಉಪ ತಹಸೀಲ್ದಾರ್ ಹನುಮಂತರಾಜು ಮತ್ತು ಪಿಎಸ್ಐ ನೇತೃತ್ವದ ಪಾವಗಡ ಪೊಲೀಸರು ಪಟ್ಟಣದ ಗೌರಜ್ಜಪಲ್ಲಿ ಶಂಕರಪ್ಪ ಎಂಬುವರ ರೈಸ್ ಮಿಲ್ಗೆ ದಾಳಿ ಮಾಡಿ ಪರಿಶೀಲಿಸಿದಾಗ ತುರುವೇಕೆರೆಯಿಂದ ಲಾರಿಯೊಂದರಲ್ಲಿ ಚೀಲಗಳಲ್ಲಿ
ತುಂಬಿಸಿಕೊಂಡು ಬಂದಿದ್ದ 5.55ಲಕ್ಷ ರು.ಮೌಲ್ಯದ ಅನ್ನಭಾಗ್ಯ ಅಕ್ಕಿಯನ್ನು ಪತ್ತೆ ಹಚ್ಚಿ ಮಿಲ್ಗೆ ಬೀಗ ಜಡಿದು ಮಿಲ್ ಮಾಲೀಕ ಗೌರಜ್ಜಪಲ್ಲಿ ಶಂಕರಪ್ಪ ಹಾಗೂ ಲಾರಿ ಚಾಲಕ ಸೇರಿದಂತೆ ಅಕ್ಕಿಯನ್ನು ತಮ್ಮ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಅನ್ನಭಾಗ್ಯ ಅಕ್ಕಿ ಆಕ್ರಮ ಸಾಗಣಿಕೆಗೆ ಸಂಬಂಧಿಸಿದಂತೆ ಪಿಎಸ್ಐ ಅಶೋಕ್ ಕುಮಾರ್ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಪ್ರಕರಣದ ಬಗ್ಗೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
ಜಾನಪದ ಮಾನವನ ಅವಿಭಾಜ್ಯ ಅಂಗ: ಚಿಕ್ಕಣ್ಣಯ್ಯ
ಶಿರಾ: ಜಾನಪದ ಮಾನವನ ಅವಿಭಾಜ್ಯ ಅಂಗ ಎಂದು ಪಟ್ಟನಾಯಕನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಚಿಕ್ಕಣ್ಣಯ್ಯ ಅಭಿಪ್ರಾಯಪಟ್ಟರು.
ಅವರು ನಗರದ ಹೊರವಲಯದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ತಾಲ್ಲೂಕು ಜಾನಪದ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ಎಚ್.ಎಲ್.ನಾಗೇಗೌಡರ ಶತಮಾನೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಜಾನಪದ ಮತ್ತು ಜೀವನ ಕುರಿತ ವಿಶೇಷ ಉಪನ್ಯಾಸ ನೀಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲೆ ಜಿ.ಎನ್. ರೂಪ ಮಾತನಾಡಿ, ಜಾನಪದ ಎಂದರೆ ಕೇವಲ ಹಾಡು ಮಾತ್ರ ಅಲ್ಲ. ಅದು ಮನುಷ್ಯನ ಬದುಕಿನ ಎಲ್ಲಾ ಕ್ರಿಯೆಗಳಲ್ಲಿ ತುಂಬಿದೆ. ಅಭಿವ್ಯಕ್ತಿ ಕೆಲವರಿಗೆ ಮಾತ್ರ ಸಾಧ್ಯ ಎಂದು ವಿವರಿಸಿದರು.
ಲಕ್ಷ್ಮಮ್ಮಮಣಿಚೆಂಡೂರು ಗ್ರಾಪಂ ಅಧ್ಯಕ್ಷೆಯಾಗಿ ಆಯ್ಕೆ
ತುರುವೇಕೆರೆ: ತಾಲೂಕಿನ ಮಣಿಚೆಂಡೂರು ಗ್ರಾಮ ಪಂಚಾಯ್ತಿಯ ನೂತನ ಅಧ್ಯಕ್ಷರಾಗಿ ಲಕ್ಷ್ಮಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪಂಚಾಯಿತಿಯ ಹಿಂದಿನ ಅಧ್ಯಕ್ಷರಾಗಿದ್ದ ಧನಲಕ್ಷ್ಮಿಯವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರಿಂದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿ ರತ್ಮಮ್ಮ ಹಾಗೂ ಲಕ್ಷ್ಮಮ್ಮ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಹಿಂತೆಗೆದುಕೊಳ್ಳುವ ಸಂದರ್ಭದಲ್ಲಿ ರತ್ನಮ್ಮ ನಾಮಪತ್ರ ವಾಪಸು ಪಡೆದರು. ಕಣದಲ್ಲಿ ಲಕ್ಷ್ಮಮ್ಮನವರ ನಾಮಪತ್ರ ಮಾತ್ರ ಉಳಿದಿದ್ದರಿಂದ ಲಕ್ಷ್ಮಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿದ್ದ ತಹಸೀಲ್ದಾರ್ ನಂಜಪ್ಪ ಘೋಷಿಸಿದರು. ಅವಿರೋಧವಾಗಿ ಆಯ್ಕೆಯಾದ ನೂತನ ಅಧ್ಯಕ್ಷೆ ಲಕ್ಷ್ಮಮ್ಮ ಅವರನ್ನು ಮಾಯಸಂದ್ರ ಕ್ಷೇತ್ರದ ಜಿಲ್ಲಾ ಪಂಚಾಯ್ತಿ ಸದಸ್ಯ ಶ್ರೀನಿವಾಸಯ್ಯ ಅಭಿನಂದಿಸಿದರು. ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷೆ ಧನಲಕ್ಷ್ಮಿ, ಉಪಾಧ್ಯಕ್ಷೆ ಬ್ಯಾಟಲಕ್ಷ್ಮಮ್ಮ, ಸದಸ್ಯರಾದ ಮುರುಳಿ, ಜವರೇಗೌಡ ದಲಿತ ಮುಖಂಡ ತಿಮ್ಮೇಶ್, ವಕೀಲ ನಟರಾಜು, ಮಲ್ಲಪ್ಪ, ರಿಜ್ವಾನಾಬಾನು, ಮಹಮದ್ ಯೂಸುಫ್, ಶಾಂತಮ್ಮ ಅಭಿನಂದಿಸಿದರು.
ಪಶು ವೈದ್ಯರ ಮೇಲೆ ಹಲ್ಲೆಗೆ ಆಕ್ರೋಶ, ಧರಣಿ ಎಚ್ಚರಿಕೆ
ಪಾವಗಡ: ಸಹಾಯಕ ನಿರ್ದೇಶಕರೊಬ್ಬರ ಕುಮ್ಮಕ್ಕಿನಿಂದ ಅರಸೀಕೆರೆ ಪಶು ವೈದ್ಯರ ಮೇಲೆ ನಡೆದ ಹಲ್ಲೆ ದುರುದ್ದೇಶಪೂರಕವಾಗಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಪಶುವೈದ್ಯಕೀಯ ಮಂಡಳಿಯ ಜಿಲ್ಲಾ ಶಾಖೆ ತೀವ್ರವಾಗಿ ಖಂಡಿಸಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಕಾಂತರಾಜ್ ಕಿಡಿಕಾರಿದರು. ಶನಿವಾರ ಸುದ್ದಿಗಾರರೊಂದಿಗೆ ಮಾತಾನಾಡಿದ ಕಾಂತರಾಜ್ ಕಾಲುಬಾಯಿ ರೋಗಕ್ಕೆ ಸಂಬಂಧಿಸಿದಂತೆ ಪಶುಗಳಿಗೆ ಲಸಿಕೆ ಹಾಕುವ ಕಾರ್ಯಕ್ರಮ ತಾ.ಹಮ್ಮಿಕೊಂಡಿದ್ದು ಸರ್ಕಾರದ ಆದೇಶದಂತೆ ಲಸಿಕೆ ಕಾರ್ಯಕ್ರಮದಲ್ಲಿ ತೊಡಗಿದ್ದ ಅರಸೀಕೆರೆ ಪಶು ವೈದ್ಯಾಧಿಕಾರಿ ಡಾ.ಸಿ. ಅಶ್ವತ್ಥ ಎಂಬುವರ ಮೇಲೆ ಇಲಾಖೆಯ ಪಶು ಪರಿವೀಕ್ಷಕ ರಾಮಾಂಜಿನೇಯ ಅವರು ಇಲಾಖೆಯ ಸಹಾಯಕ ನಿರ್ದೇಶಕ ಸಂಜೀವರಾಯಪ್ಪ ಎಂಬುವರ ಎದುರಿನಲ್ಲಿಯೇ ಏಕಾಏಕಿ ಹಲ್ಲೆ ಮಾಡಿರುವುದು ಅಕ್ಷ್ಯಮ್ಯ ಎಂದು ಆರೋಪಿಸಿದರು. ಘಟನೆ ಬಗ್ಗೆ ಜಿಲ್ಲಾ ಪಶು ಇಲಾಖೆಯ ಉಪ ನಿರ್ದೇಶಕರ ಗಮನಕ್ಕೆ ತಂದಿದ್ದು ಅವರ ಆದೇಶದಂತೆ ವೈದ್ಯಾಧಿಕಾರಿಗಳ ಮೇಲೆ ದೌರ್ಜನ್ಯವೆಸಗಿ, ಹಲ್ಲೆ ಮಾಡಿದ ರಾಮಾಂಜಿನೇಯ ವಿರುದ್ಧ ಪಾವಗಡ ಠಾಣೆಗೆ ದೂರು ಸಲ್ಲಿಸುವುದಾಗಿ ಅವರು ತಿಳಿಸಿದರು.