ಎರಡು ರೀತಿಯ ಸಮಾಜ ಬೆಳೆಸುತ್ತಿದ್ದೇವೆ
ಕನ್ನಡಪ್ರಭ ವಾರ್ತೆ ್ಣ ತುಮಕೂರು ್ಣ ಫೆ.22
ಅಸಮಾನ ಶಿಕ್ಷಣ ನೀಡುವ ಮೂಲಕ ದೇಶದಲ್ಲಿ ಎರಡು ರೀತಿಯ ಸಮಾಜ, ಪ್ರಜೆಗಳನ್ನು ಬೆಳೆಸುತ್ತಿದ್ದೇವೆ. ಈ ಮೂಲಕ ಅಸಮಾತೆಯ ಸಮಾಜ ನಿರ್ಮಾಣ ಮಾಡತ್ತಿದ್ದೇವೆ. ಪ್ರಜಾತಂತ್ರವನ್ನು ಅಭದ್ರಗೊಳಿಸುತ್ತಿದ್ದೇವೆ ಎಂದು ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಆತಂಕ ವ್ಯಕ್ತಪಡಿಸಿದರು. ಅವರು ಚಿಕ್ಕನಾಯಕನಹಳ್ಳಿಯಲ್ಲಿ ಏರ್ಪಾಟಾಗಿದ್ದ 6 ನೇ ತಾಲೂಕು ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಪ್ರಾಂತೀಯ, ಇಂಗ್ಲಿಷ್ ಶಿಕ್ಷಣದ ನೀಡುವ ಮೂಲಕ ಅಸಮಾನ ಸಮಾಜ ನಿರ್ಮಾಣ ಮಾಡಿದ್ದೇವೆ. ಮಾಡುತ್ತಿದ್ದೇವೆ. ಇದೊಂದು ದುರಂತ ಹಾಗೂ ನಾಚಿಕೆಗೇಡಿನ ಸಂಗತಿ ಎಂದರು. ಶಿಕ್ಷಣದ ರಾಷ್ಟ್ರೀಕರಣ ಇಂದಿನ ತುರ್ತು. 1 ರಿಂದ 10 ನೇ ತರಗತಿಯವರೆಗಿನ ಶಿಕ್ಷಣವನ್ನು ರಾಷ್ಟ್ರೀಕರಣಗೊಳಿಸಬೇಕು. ಈ ಮೂಲಕ ಸಮಾನತೆಯ ಆಶಯವನ್ನು ಬಿತ್ತಬೇಕು. ಸಮಾನ ಶಿಕ್ಷಣ ನಮ್ಮ ಧ್ಯೇಯವಾಗಬೇಕು. ಹೀಗಾದಾಗ ಮಾತ್ರ ದೇಶದಲ್ಲಿ ಕಾಣಲು ಸಾಧ್ಯ. ಆದರೆ ನಮ್ಮ ಪೋಷಕರು ಇದಕ್ಕೆ ಒಪ್ಪುತ್ತಿಲ್ಲ ಎಂದು ವಿಷಾದಿಸಿದರು.
ಸಾಹಿತ್ಯ ವೈಯಕ್ತಿಕ ಆಗಬಾರದು. ಸಮಕಾಲೀನ ಸಮಸ್ಯೆ ಕುರಿತ ಸಾಹಿತ್ಯ ರಚಿಸದಿದ್ದರೆ ಬೇಜವಾಬ್ದಾರಿತನವಾಗುತ್ತದೆ. ರೂಪಕ, ಕಥೆ, ಕವಿತೆ, ಬಿಡಿ ಬರಹಗಳನ್ನು ಬರೆದರೂ, ಅಲ್ಲಿ ಸಾಮಾಜಿಕ ಸಮಸ್ಯೆಗಳಿಗೆ, ರೈತರ ಸಮಸ್ಯೆಗಳಿಗೆ ಸ್ಥಾನವಿಲ್ಲದಿದ್ದರೆ, ಅರ್ಥವಿಲ್ಲ ಎಂದು ಕಂಬಾರರು ಮಾರ್ಮಿಕವಾಗಿ ನುಡಿದರು. ಏನೇ ಸಮಸ್ಯೆಗಳಿದ್ದರೂ ಕೈ ತುಂಬಾ ಸಂಬಳ ಸಂಪಾದಿಸುವ ಸರ್ಕಾರಿ ನೌಕರ, ಎಷ್ಟೆಲ್ಲಾ ಸಮಸ್ಯೆಗಳನ್ನು ಎದುರಿಸಿ ಬೆಳೆ ಬೆಳೆದರೂ ಕೈತುಂಬಾ ಸಂಪಾದಿಸಲಾಗದ ರೈತ. ಇಂತಹ ಅಸಮಾನತೆಯ ವಾತಾವರಣದಲ್ಲಿದ್ದೇವೆ. ರೈತರು ಮಾತ್ರವೇ ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂಬುದರ ಕುರಿತು ನಿರ್ಲಕ್ಷ್ಯ ವಹಿಸಿದ್ದೇವೆ. ಐಎಎಸ್, ಅಧಿಕಾರಶಾಹಿಗೆ ಆದ್ಯತೆ ನೀಡಿ, ದೇಶದ ಬೆನ್ನುಲುಬಾದ ರೈತರು, ಕಾರ್ಮಿಕರನ್ನು ಕಡೆಗಣಿಸಿದ್ದೇವೆ. ಶ್ರಮವನ್ನು ಅಪಮೌಲ್ಯಗೊಳಿಸಿದ್ದೇವೆ ಎಂದು ವಿಷಾದಿಸಿದರು.
ನಿರ್ಲಕ್ಷ್ಯ: ವಿದೇಶಿ ಘಟನಾವಳಿಗಳನ್ನು ಕುರಿತು ವಿಜೃಂಭಿಸಿ ಬರೆಯುವ ನಾವು ಸಮಕಾಲೀನ ಸಮಸ್ಯೆಗಳತ್ತ ನಿರ್ಲಕ್ಷ್ಯ ತೋರಿದ್ದೇವೆ ಎಂದು ವಿಷಾದಿಸಿದರು.
ನಮ್ಮ ರಾಜಕಾರಣಿಗಳಿಗೆ ಉದ್ಯೋಗ ನೀಡುವಂತೆ ಕೇಳುವ ಛಾತಿಯನ್ನು ಜನತೆ ಬೆಳೆಸಿಕೊಳ್ಳಬೇಕಿದೆ. ಇದಾಗದೆ ಹೋದರೆ ಕಷ್ಟ. ಬ್ರಿಟೀಷರು ಬಿಟ್ಟು ಹೋಗಿರುವ ಕೀಳರಿಮೆಯನ್ನು ಬಿಟ್ಟು, ಹೊಸ, ಸಮಾನತೆಯ ಸಮಾಜವನ್ನು ಕಟ್ಟುವದರತ್ತ ಎಲ್ಲರೂ ಚಿತ್ತಹರಿಸಬೇಕಿದೆ. ಈ ಹಿನ್ನೆಲೆಯಲ್ಲಿ ಸಮಾನ ಶಿಕ್ಷಣ ಇಂದಿನ ತುರ್ತಾಗಿದೆ. ಜಾಗತೀಕರಣದ ಹೊಡೆತಕ್ಕೆ ಸಿಕ್ಕು ನಜ್ಜು-ಗುಜ್ಜಾಗಿರುವ ರೈತ ಸಮುದಾಯಕ್ಕೆ ಬಲ ತುಂಬಬೇಕಾಗಿದೆ. ಸಾಹಿತ್ಯದ ಮೂಲಕ ಸಮಕಾಲೀನ ಸಮಸ್ಯೆಗಳತ್ತ ಬೆಳಕು ಚೆಲ್ಲಬೇಕಿದೆ. ಜನತೆಯನ್ನು ಜಾಗೃತಗೊಳಿಸಬೇಕಿದೆ. ಪ್ರಜಾತಂತ್ರವನ್ನು ಸುಭದ್ರಗೊಳಿಸಬೇಕಿದೆ ಎಂದರು.