ನೀರು ಪೂರೈಕೆ ಯೋಜನೆಗೆ ಅಂಗೀಕಾರ
ಕುಣಿಗಲ್: ತಾಲೂಕಿನ ಹುತ್ರಿದುರ್ಗ ಹೋಬಳಿಯ ಎಲ್ಲಾ ಗ್ರಾಮಗಳಿಗೂ ಕುಣಿಗಲ್ ದೊಡ್ಡಕೆರೆಯ ಮೂಲಕ ಕುಡಿಯುವ ನೀರು ಪೂರೈಕೆ ಯೋಜನೆಯ 49ಕೋಟಿ ರು. ಕಾಮಗಾರಿಗೆ ಸರ್ಕಾರ ಅಂಗೀಕಾರ ನೀಡಿದ್ದು ಶೀಘ್ರದಲ್ಲೆ ಕಾಮಗಾರಿ ಪ್ರಾರಂಭಿಸಲಾಗುವುದೆಂದು ಶಾಸಕ ಡಿ. ನಾಗರಾಜಯ್ಯ ತಿಳಿಸಿದರು.
ಶನಿವಾರ, ಹುತ್ರಿದುರ್ಗ ಜಿಲ್ಲಾ ಪಂಚಾಯಿತಿ ಕ್ಷೇತ್ರದ ವಿವಿಧೆಡೆಗಳಲ್ಲಿ ನಾಲ್ಕು ಕೋಟಿ ರು.ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ, ಶಂಕುಸ್ಥಾಪನೆ ನೆರವೇರಿಸಿ ಹೊಡಾಘಟ್ಟ ಗ್ರಾಮದಲ್ಲಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳ ಹಿಂದೆ ಹುತ್ರಿದುರ್ಗ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಭೀಕರವಾಗಿರುವುದನ್ನು ಮನಗಂಡ ಜಿಪಂ ಸದಸ್ಯ ವೈ.ಎಚ್. ಹುಚ್ಚಯ್ಯ, ಅಂದಿನ ಲೋಕಸಭೆ ಸದಸ್ಯರಾದ ಎಚ್.ಡಿ. ಕುಮಾರಸ್ವಾಮಿ ಅವರಿಗೆ, ಎಲ್ಲಾ ಗ್ರಾಮಗಳಿಗೂ ಕುಡಿಯುವ ನೀರು ಪೂರೈಸುವ ಯೋಜನೆ ಕುರಿತು ಜಿಪಂ, ಹೇಮಾವತಿ ನಾಲಾ ಅಧಿಕಾರಿಗಳಿಂದ ಸಮಗ್ರ ವರದಿ ತಯಾರಿಸಿ ಪ್ರಸ್ತಾವನೆ ಕಳಿಸಿದ್ದರು. ಈ ಮೇರೆಗೆ, ಶುಕ್ರವಾರ ಸರ್ಕಾರ ಅಂಗೀಕಾರ ನೀಡಿದೆ. ಇದರಿಂದ ಈ ಭಾಗದ ಜನತೆಯ ಬಹುದಿನದ
ಬೇಡಿಕೆ ಈಡೇರಿದಂತಾಗಿದ್ದು, ಶೀಘ್ರದಲ್ಲೆ ಕಾಮಗಾರಿ ಪ್ರಾರಂಭಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದರು.
ಡಿ. ನಾಗರಾಜಯ್ಯನವರು ಶಾಸಕರಾಗಿ ಆಯ್ಕೆಯಾದ ಎಂಟು ತಿಂಗಳಲ್ಲೆ ಹುತ್ರಿದುರ್ಗ ಜಿಪಂ ಕ್ಷೇತ್ರಕ್ಕೆ ವಿವಿಧ ಅನುದಾನದಡಿಯಲ್ಲಿ ಒಟ್ಟಾರೆ ಒಂಬತ್ತು ಕೋಟಿ ರು. ವೆಚ್ಚದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿ ಅನುಷ್ಠಾನವಾಗಲು ಶ್ರಮಿಸಿದ್ದಾರೆ. ಅಂಚೇಪಾಳ್ಯ-ಯಲಗಲವಾಡಿ- ಜೋಡಿಹೋಸಹಳ್ಳಿ 24ಕಿಮಿ ಉದ್ದದ ರಸ್ತೆ ಅಭಿವೃದ್ಧಿಗೆ ಒಂದು ಕೋಟಿ ರು.ವೆಚ್ಚದಲ್ಲಿ ಕಾಮಗಾರಿಗೆ ಚಾಲನೆ ನೀಡುವ ಮೂಲಕ ಈ ವ್ಯಾಪ್ತಿಯ ಬಹುತೇಕ ಗ್ರಾಮಗಳಿಗೆ ಉತ್ತಮ ಸಂಪರ್ಕ ರಸ್ತೆ ಅಭಿವೃದ್ದಿಗೊಳಿಸಲು ಸ್ಪಂದಿಸಿದ್ದು, ಹುತ್ರಿದುರ್ಗ ಹೋಬಳಿಯ ಪ್ರಮುಖ ನೀರಿನ ಸಮಸ್ಯೆ ಬಗೆಹರಿಸಲು ನೀರಾವರಿ ಕಾಮಗಾರಿಗೆ ಅನುಮೋದನೆ ನೀಡಿದ ರಾಜ್ಯ ಸರ್ಕಾರಕ್ಕೆ, ಶ್ರಮಿಸಿದ ಸಂಸದರು, ಶಾಸಕರಿಗೆ ಧನ್ಯವಾದ ಅರ್ಪಿಸಿದರು.
ಜಿಪಂ ಮಾಜಿ ಅಧ್ಯಕ್ಷ ಡಾ.ಬಿ.ಎನ್. ರವಿ, ಜೋಡಿ ಹೊಸಹಳ್ಳಿ ಗ್ರಾಮಪಂ ಅಧ್ಯಕ್ಷ ನಿಂಗಣ್ಣ, ಪ್ರಮುಖರಾದ ರಮೇಶ, ನಾರಾಯಣ, ನಾಗರಾಜ್, ತಾಪಂ ಇಒ ಶಂಕರಪ್ಪ, ಜಿಪಂ ಎಇಇ ಸಣ್ಣಮರಿಗೌಡ ಪಿಡಿಒ ನರಸಿಂಹಮೂರ್ತಿ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.
ಗ್ರಾಮಕ್ಕೆ ಭೇಟಿ ನೀಡಿದ ಶಾಸಕರಿಗೆ ಕೆರೆಯತೂಬು ಸೋರಿಕೆಯಾಗುತ್ತಿದ್ದು ಸರಿಪಡಿಸುವಂತೆ, ಶಾಲೆಯ ಆಟದ ಮೈದಾನದಲ್ಲಿ ಕೆಲವರು ತಿಪ್ಪೆಹಾಕಿದ್ದು ತೆರವುಗೊಳಿಸುವಂತೆ, ಗ್ರಾಮದಲ್ಲಿ ನೈರ್ಮಲ್ಯ ವ್ಯವಸ್ಥೆ ಹದಗೆಟ್ಟಿದ್ದು ಸರಿಪಡಿಸುವಂತೆ, ಮೇಲುಸ್ಥರದ ಟ್ಯಾಂಕ್ ಇದ್ದರೂ ಗ್ರಾಮಕ್ಕೆ ಸರಿಯಾಗಿ ನೀರು ಪೂರೈಕೆಯಾಗದ ಬಗ್ಗೆ ಅಹವಾಲು ಸಲ್ಲಿಸಿದರು.