ಜೈನ ತತ್ವಗಳು ವೈಜ್ಞಾನಿಕ ತಳಹದಿಯ ಮೇಲೆ ನಿರೂಪಿತ, ವಿಶ್ವಕ್ಕೆ ಮಾದರಿ
ಮಧುಗಿರಿ: ಜೈನ ತತ್ವಗಳು ವೈಜ್ಞಾನಿಕ ತಳಹದಿಯ ಮೇಲೆ ನಿರೂಪಿತವಾಗಿ ವಿಶ್ವದ ವಿವಿಧ ಧರ್ಮಗಳಿಗಿಂತ ವಿಭಿನ್ನ ಹಾಗೂ ವಿಶ್ವಕ್ಕೆ ಮಾದರಿ ಎಂದು ಶ್ರೀಕ್ಷೇತ್ರ ಹುಂಚ ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ನುಡಿದರು.
ಮಧುಗಿರಿ ತಾಲೂಕಿನ ಮಿಡಿಗೇಶಿಯಲ್ಲಿ ಭಗವಾನ್ 1008 ಶ್ರೀಸುಪಾರ್ಶ್ವನಾಥಸ್ವಾಮಿ ಮತ್ತು ಪ್ರಸಿದ್ಧ ಶ್ರೀಬ್ರಹ್ಮಯಕ್ಷರ ವಾರ್ಷಿಕ ಪೂಜಾ ಮಹೋತ್ಸವ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಜೀವನ ಶೈಲಿ ಸುಧಾರಣೆಗಾಗಿ ಧರ್ಮ ಆಚರಣೆಗೆ ಬರಬೇಕು. ಧಾರ್ಮಿಕ ವಿಚಾರಧಾರೆ ಅಳವಡಿಸಿಕೊಳ್ಳುವ ಮೂಲಕ ಎಲ್ಲರ ಜತೆ ಸಹಕಾರ, ಪರೋಪಕಾರ ಸಹಬಾಳ್ವೆ ಜೀವನ ನಡೆಸಬೇಕು. ಧರ್ಮ ಮನಷ್ಯರಿಗಷ್ಟೇ ಸೀಮಿತವಲ್ಲ, ಗಿಡ ಮರ, ಪ್ರಕೃತಿ ಹಾಗೂ ಪ್ರಾಣಿಗಳು ಗೌರವದಿಂದ ಬದುಕು ಸಾಗಿಸಬೇಕು. ನೈತಿಕ ಶಿಕ್ಷಣ ಕೂಡುವುದು ಜೈನ ದರ್ಮದ ತತ್ವ, ದುಡಿದು ತಿನ್ನುವುದು ನಮ್ಮ ದೇಶದ ಸಂಸ್ಕೃತಿ, ಸನಾತನ ಭಾರತೀಯ ಸಂಸ್ಕೃತಿ ಉತ್ಕೃಷ್ಟ , ವಿದೇಶಿ ಭೋಗ ಸಂಸ್ಕೃತಿ, ನಮ್ಮ ಸಂಸ್ಕೃತಿ, ಸಂಸ್ಕಾರ ನಮ್ಮ ಜೀವನದ ಪ್ರೇರಣೆ ಎಲ್ಲ ಧರ್ಮಗಳನ್ನು ಗೌರವಿಸುವ ಮೂಲಕ ಸ್ವಧರ್ಮದಲ್ಲಿ ಮುಕ್ತಿ ಕಾಣಬೇಕು. ಮಿಡಿಗೇಶಿಯಲ್ಲಿ ಧಾರ್ಮಿಕ ಆಚರಣೆ, ಆರೋಗ್ಯ, ಶಿಕ್ಷಣ ಕಾರ್ಯಗಳು ಹೆಚ್ಚು ನಡೆಯಲಿ. ಇಲ್ಲಿನ ಗ್ರಾ.ಪಂ.ಅಧ್ಯಕ್ಷ ರಾಜು ಅವರು ನಮ್ಮ ದೇವಸ್ಥಾನಕ್ಕೆ ಪಕ್ಕದ ಜಮೀನು ಕೊಡಿಸುವ ಮೂಲಕ ಶಾಲೆ ತೆರೆಯಲು ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು. ನಿವೃತ್ತ ಇತಿಹಾಸ ಉಪನ್ಯಾಸಕ ಪ್ರೊ.ಜೀವಿಂದರ ಕುಮಾರ ಜೀವನದಲ್ಲಿ ಅಹಿಂಸೆ ಪ್ರಧಾನ, ಲೌಕಿಕ ಜೀವನದಲ್ಲಿ ಧರ್ಮದ ಅರಿವು ಬೆಳಸಿಕೊಳ್ಳಬೇಕು ಎಂದರು.
ಹಿರಿಯ ನ್ಯಾಯವಾದಿ ಇ.ಆರ್.ಇಂದ್ರ ಕುಮಾರ್ ಜೈನ ಧರ್ಮದಲ್ಲಿ ಅಡಕವಾಗಿರುವ ತತ್ವಗಳು ಇಡೀ ವಿಶ್ವಕ್ಕೆ ಮಾದರಿ ಎಂದರು.
ಬೆಂಗಳೂರು ಆರ್.ವಿ. ಶಿಕ್ಷಣ ಸಂಸ್ಥೆ ರಿಜಿಸ್ಟಾರ್ ಆರ್.ಅಶೋಕ್ ಮಾತನಾಡಿದರು. ಮಿಡಿಗೇಶಿ ಜಿನಮಂದಿರದ ಎನ್.ಬಿ. ಶ್ರೇಯಾಂಸಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ.ಅಧ್ಯಕ್ಷ ಎಸ್.ಎನ್.ರಾಜು ದೇವಸ್ಥಾನಕ್ಕೆ ಭದ್ರತೆ ಒದಗಿಸುವಂತೆ ಜೈನ ಬಂಧುಗಳಿಗೆ ಮನವಿ ಮಾಡಿದರು. ತುಮುಲ್ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್, ಎಂಜಿನಿಯರ್ ಬ್ರಹ್ಮದೇವರು ಮಾತನಾಡಿದರು. ಶಾಂತಮ್ಮ, ಸೂರಣ್ಣ ಅವರನ್ನು ಸನ್ಮಾನಿಸಿದರು. ಸಮಾರಂಭದಲ್ಲಿ ಪುರಸಭೆ ಅಧ್ಯಕ್ಷ ಎನ್. ಗಂಗಣ್ಣ, ನೇಮಿರಾಜಯ್ಯ ಉಪಸ್ಥಿತರಿದ್ದರು. ಕಾರ್ಯದರ್ಶಿ ರಾಜೇಂದ್ರ ಪ್ರಸಾದ್ ಸ್ವಾಗತಿಸಿ ಕುಮುದ ನಾಗಭೂಷಣ್ ನಿರೂಪಿಸಿ ಪದ್ಮಲತಾ ಬ್ರಹ್ಮಾನಂದ್ ವಂದಿಸಿದರು.