'ಧ್ಯಾನಸ್ಥ ಸ್ಥಿತಿಯಲ್ಲಿ ಹುಟ್ಟುವುದೇ ಕಾವ್ಯ'
ತುಮಕೂರು: ಹಳೆಗನ್ನಡದಿಂದ ಪ್ರಾರಂಭವಾದ ಕಾವ್ಯಜಗತ್ತು ಮಧ್ಯಯುಗದ ಮೂಲಕ ಆಧುನಿಕ ಕಾಲವನ್ನು ತಲುಪಿ ನವ್ಯದಲ್ಲಿ ಹೊಸ ಆಯಾಮಗಳನ್ನು ಪಡೆದುಕೊಂಡು ಬೆಳೆಯಿತು ಎಂದು ಲೇಖಕಿ ಸುಶೀಲಾ ಸದಾಶಿವಯ್ಯ ಅಭಿಪ್ರಾಯಪಟ್ಟರು.
ಅವರು ಶ್ರೀ ಸಿದ್ಧಗಂಗಾ ಮಹಿಳಾ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗಾಗಿ ಏರ್ಪಡಿಸಿದ್ದ ಬರಹಗಾರರ ಕಾರ್ಯಾಗಾರದಲ್ಲಿ ವಿಶೇಷ ಉಪನ್ಯಾಸ ಮಾಡಿದರು.
ಧ್ಯಾನಸ್ಥ ಸ್ಥಿತಿಯಲ್ಲಿ ಕಾವ್ಯ ಹುಟ್ಟುತ್ತದೆ ಎಂದು ಅವರು ಸ್ತ್ರೀ ವರ್ಣನೆಗೆ ಸೀಮಿತವಾಗಿದ್ದು ಕಾವ್ಯ ಇಂದು ಸಂವೇದನೆಗೆ, ಭಾವನೆಗಳಿಗೆ ಸ್ಪಂದಿಸುತ್ತಿದೆ. ನಿರಂತರ ಅಧ್ಯಯನ ಪರಿಶ್ರಮ ಕಲ್ಪನೆಗಳಿಂದ ಕಾವ್ಯ ರಚಿಸಲು ಸಾಧ್ಯ ಎಂದು ಹೇಳಿದರು.
ನಿವೃತ್ತ ಪ್ರಾಂಶುಪಾಲರು ವಿಜ್ಞಾನ ಲೇಖಕರು ಆದ ಡಾ. ಎಚ್.ಎಸ್. ನಿರಂಜನಾರಾಧ್ಯ ಅವರು ಬರಹಗಾರರಿಗೆ ವಸ್ತು ಮುಖ್ಯ. ಅದು ಯಾವುದೇ ಇರಲಿ, ತನ್ನಲ್ಲಿನ ಭಾವನೆಗಳನ್ನು ಅಕ್ಷರ ರೂಪದಲ್ಲಿ ಮೂಡಿಸುವ ಸಾಮರ್ಥ್ಯವನ್ನು ಪಡೆದಿದ್ದರೆ ಉತ್ತಮ ಲೇಖನ ರಚಿಸಲು ಸಾಧ್ಯ ಎಂದು ಹೇಳಿದರು.
ಹೂ ಹಣ್ಣುಗಳ ವಸ್ತುಗಳನ್ನಾಧರಿಸಿ ಸುಲಭವಾಗಿ ವಿವಿಧ ಆಯಾಮಗಳಲ್ಲಿ ಲೇಖನಗಳನ್ನು ರಚಿಸಬಹುದು
ಎಂದು ನುಡಿದ ಅವರು ಹೂ ಮತ್ತು ಉದ್ಯಮ, ಹೂ ಮತ್ತು ವ್ಯಕ್ತಿತ್ವ, ಋತುಮಾನದ ಹೂಗಳು, ವಿವಿಧ ಬಗೆಯ ಮಲ್ಲಿಗೆ ಹೂ ಮತ್ತು ಹಾಸ್ಯ ಇತ್ಯಾದಿ ಬರಹಗಾರರಿಗೆ ಉತ್ತಮ ವಿಷಯ ಎಂದರು.
ಪ್ರಾಂಶುಪಾಲರಾದ ನಳಿನಾಕ್ಷಿಯವರು ಅಧ್ಯಕ್ಷತೆ ವಹಿಸಿದ್ದರು ಡಾ. ಡಿ.ಎನ್. ಯೋಗಿಶ್ವರಪ್ಪ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎಚ್.ಎಸ್. ಮಲ್ಲಿಕಾರ್ಜುನಪ್ಪ ವಂದಿಸಿದರು. ಕು. ಸುರಕ್ಷ ಪ್ರಾರ್ಥಿಸಿದರೆ ಪ್ರೊ.ಸುಮಂಗಳಮ್ಮ ಸ್ವಾಗತಿಸಿದರು.