ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಪ್ರತಿಭಟನೆ ಸ್ಥಳಕ್ಕೆ ಜಿ.ಪಂ. ಅಧ್ಯಕ್ಷೆ ಭೇಟಿ, ರೈತರೊಂದಿಗೆ ಚರ್ಚೆ

Mainashree
Updated On : 23 Feb 2014, 11:29 am

ಶಿರಾ: ಕೋಳಿ ಫಾರಂ ಸ್ಥಳಾಂತರಿಸುವಂತೆ ಒತ್ತಾಯಿಸಿ ತಾಲೂಕಿನ ಹಲ್ಕೂರು ಭಾಗದ ರೈತರು ಹಾಗೂ ಸಾರ್ವಜನಿಕರು ತಹಸೀಲ್ದಾರ್ ಕಚೇರಿ ಮುಂದೆ ನಡೆಸುತ್ತಿರುವ ನಿರಂತರ ಪ್ರತಿಭಟನೆಯ ಸ್ಥಳಕ್ಕೆ ಜಿ.ಪಂ. ಅಧ್ಯಕ್ಷೆ ಸಾಕಮ್ಮ ನಾಗರಾಜು ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿದರು.
ಹಲ್ಕೂರು ಬಳಿ ನಿರ್ಮಾಣಗೊಂಡಿರುವ ಕೋಳಿಫಾರಂನಿಂದಾಗಿ ಆ ಭಾಗದ ರೈತರಿಗೆ ಹಾಗೂ ಸಾರ್ವಜನಿಕರಿಗೆ ನೊಣಗಳ ಕಾಟ ಹೆಚ್ಚಾಗಿ ಪರಿತಪಿಸುವಂತಾಗಿದೆ. ಜನರಲ್ಲಿ ಅನಾರೋಗ್ಯ ಉಂಟಾಗಿದ್ದು ಜನರು ಬದುಕು ಸಾಗಿಸುವುದೇ ಕಷ್ಟವಾಗಿದ್ದು, ಈ ಸಂಬಂಧ  ಜಿ.ಪಂ. ಸಾಮಾನ್ಯ ಸಭೆಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿ.ಪಂ. ಅಧ್ಯಕ್ಷರು ತಿಳಿಸಿದರು.
ಜಿ.ಪಂ. ಸದಸ್ಯ ಬಿ.ಕೆ.ಬಡೀರಣ್ಣ ಮಾತನಾಡಿ ಆರಂಭದಲ್ಲಿ ಕೇವಲ ಒಂದು ಶೆಡ್‌ಗೆ ಸ್ಥಳೀಯ ಗ್ರಾ.ಪಂ. ನಿಂದ ಪರವಾನಿಗೆ ಪಡೆದ ಶೆಡ್ ಮಾಲೀಕರು ಇದೀಗ 14 ಬೃಹತ್ ಶೆಡ್‌ಗಳನ್ನು ನಿರ್ಮಿಸಿದ್ದು, ಸತ್ತ ಕೋಳಿಗಳ ತ್ಯಾಜ್ಯದಿಂದ ಅನೈರ್ಮಲ್ಯ ಹೆಚ್ಚಾಗಿ ನೊಣಗಳ ಕಾಟವೂ ಹೆಚ್ಚಾಗಿದೆ ಎಂದು ತಿಳಿಸಿ ಶಿರಾ ತಾಲೂಕು ಅತ್ಯಂತ ಸೂಕ್ಷ್ಮವಾದ ಪ್ರದೇಶ. ಈ ನೆಲದಲ್ಲಿ ರೈತರ ಸಮಸ್ಯೆಗಳಿಗಾಗಿ ನಡೆದ ಘಟನೆಗಳಿಂದ ಸಾವು ನೋವುಗಳಾಗಿವೆ. ಜಿಲ್ಲಾ ಉಸ್ತುವಾರಿ ಸಚಿವರು ತಾಲೂಕಿನ ರೈತರನ್ನು ಕೇವಲವಾಗಿ ಕಾಣುವುದನ್ನು ಬಿಟ್ಟು ಮೊದಲು ಇಲ್ಲಿನ ರೈತರ ಸಮಸ್ಯೆಗಳಿಗೆ ಸ್ಪಂದಿಸಲಿ ಎಂದರು.
ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್.ಗೌಡ ಮಾತನಾಡಿ ಸದರಿ ಕೋಳಿ ಫಾರಂ ಮಾಲೀಕರು  ಈತನಕವು ವಿದ್ಯುತ್ ಸಂಪರ್ಕಕ್ಕೆ ಹಾಗೂ ನೀರು ಪೂರೈಕೆಗೆ ಸ್ಥಳೀಯ ಗ್ರಾ.ಪಂ. ನಿಂದ ಪರವಾನಿಗೆಯನ್ನೇ ಪಡೆದಿಲ್ಲ. ತಾ.ಪಂ. ಅಧಿಕಾರಿಗಳು ಮೊದಲು ಕ್ರಮ ಕೈಗೊಳ್ಳಬೇಕು, ಬೆಸ್ಕಾಂ ಅಧಿಕಾರಿಗಳು ಕೂಡಲೇ ಈ ಕೋಳಿ ಫಾರಂಗೆ ಅನಧಿಕೃತವಾಗಿ ನೀಡಿದ ವಿದ್ಯುತ್ ಸಂಪರ್ಕ ಕಡಿತಗೊಳಿಸಬೇಕು ಎಂದರು.
ಹಲ್ಕೂರು ಬಳಿಯ ಕೋಳಿ ಫಾರಂ ಒಂದು ದೊಡ್ಡ ಸುದ್ದಿಯಾಗಿ ಪರಿಣಮಿಸಿದ್ದು ಈವರೆಗೂ ಜಿಲ್ಲಾ ಸಚಿವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮಾಜಿ ತಾ.ಪಂ. ಸದಸ್ಯ ಬಾಂಬೆ ರಾಜಣ್ಣ ತಿಳಿಸಿದರು. ಸ್ಥಳದಲ್ಲಿ ತಾಲೂಕು ರೈತ ಸಂಘದ ಅಧ್ಯಕ್ಷ ಪರಮಶಿವಯ್ಯ, ತಾ.ಪಂ. ಸದಸ್ಯ ತಿಮ್ಮಯ್ಯ, ತಾಲೂಕು ಬಿಜೆಪಿ ಅಧ್ಯಕ್ಷ ಬಸವರಾಜು, ಲಕ್ಷ್ಮೀಕಾಂತ್, ಹೊನ್ನಗೊಂಡನಹಳ್ಳಿ ರಘು, ಸೇರಿದಂತೆ ಅನೇಕ ರೈತರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement