ರಸ್ತೆ ಅಭಿವೃದ್ಧಿ ಕೈಗೊಳ್ಳದೆ ಉದ್ಯೋಗ ಖಾತ್ರಿ ಹಣ ಗುಳುಂ ಮಾಡಿದ್ದು ಯಾರು?
ಶಿರಾ: ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳದೆ ಉದ್ಯೋಗ ಖಾತ್ರಿ ಹಣ ಗುಳಂ ಮಾಡಿದ್ದು ಯಾರು, ಇದಕ್ಕೆ ಕಾರಣ ಜನಪ್ರತಿನಿಧಿಯೋ ಅಥವಾ ಪಂಚಾಯತಿ ಅಧಿಕಾರಿಯೋ, ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರ ಒತ್ತಾಯಿಸಿದ್ದಾರೆ.
ಪುಟ್ಟ-ಪುಟ್ಟ ಗ್ರಾಮಗಳ ಜನಸಾಮಾನ್ಯರಿಗೆ ಸಾರಿಗೆ ಸಂಪರ್ಕ ಸುಗಮವಾಗಲಿ ಮತ್ತು ಕೆಲಸವಿಲ್ಲದ ಬಡ ಕೂಲಿ ಕಾರ್ಮಿಕರಿಗೆ ಉದ್ಯೋಗಸಿಗುವಂತಾಗಿ ಬಡತನ ನಿರ್ಮೂಲನೆಯಾಗಿ ಗ್ರಾಮೀಣರ ಬದುಕು ಹಸನಾಗಲಿ ಎಂಬ ಮಹತ್ವಾಕಾಂಕ್ಷೆಯಿಂದ ಕೇಂದ್ರ ಸರ್ಕಾರ ನರೇಗಾ ಯೋಜನೆ ಜಾರಿಗೆ ತಂದಿದೆ. ಇಂತಹ ಯೋಜನೆಗಳು ಅಧಿಕಾರಿಗಳ ಅಸಡ್ಡೆ ವರ್ತನೆಯಿಂದ ಹಳ್ಳ ಹಿಡಿಯುತ್ತಿರುವುದಂತು ಸತ್ಯ.
ಶಿರಾ ತಾಲೂಕಿನ ಹೆಂದೊರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ವೀರಾಪುರ ಎಂಬ ಕುಗ್ರಾಮಕ್ಕೆ, ಎನ್‌ಆರ್‌ಇಜಿ ಯೋಜನೆಯಡಿ ಪಿ.ಎನ್.ಹಳ್ಳಿ ರಸ್ತೆಯಿಂದ ವೀರಾಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಆಭಿವೃದ್ಧಿ ಕಾಮಗಾರಿಗೆ 2013-14ನೇ ಸಾಲಿನಲ್ಲಿ ಕ್ರಿಯಾಯೋಜನೆ ರೂಪಿಸಿ 1 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸುವಂತೆ
ಅನುಮೋದನೆ ನೀಡಲಾಗಿತ್ತು. ಈ ಕುಗ್ರಾಮದಲ್ಲಿ ಹೆಚ್ಚುಮಂದಿ ಕೃಷಿ ಅವಲಂಬಿತರೆ ವಾಸಿಸುತ್ತಿದ್ದು ಪಟ್ಟಣಕ್ಕೆ ಸಂಪರ್ಕಿಸುವ ಮುಖ್ಯರಸ್ತೆ ಆಭಿವೃದ್ಧಿ ಅವಶ್ಯಕವಾಗಿದ್ದು, ಇಂತಹ ರಸ್ತೆಯ ಕಾಮಗಾರಿ ನರೇಗಾ ಯೋಜನೆಯಡಿ ಗ್ರಾಮಸ್ಥರೆ ಕೈಗೊಳ್ಳೋಣ ಅಂತ ಗ್ರಾಮದ ಹನುಮಂತರಾಯ ಪಂಚಾಯತಿ ಕಾರ್ಯಾಲಯಕ್ಕೆ ಭೇಟಿ ನೀಡಿ ವಿಚಾರಿಸಿದರೆ ಅಚ್ಚರಿ ಕಾದಿತ್ತು. ಈ ರಸ್ತೆಗೆ 1 ಲಕ್ಷ ರು.ಮಂಜೂರು ಮಾಡಲಾಗಿದ್ದು, ನರೇಗಾದಲ್ಲಿ ಕಾಮಗಾರಿ ಮಾಡಿರುವುದಾಗಿ 40 ಸಾವಿರ ರು. ಎನ್‌ಎಂಆರ್ ಹಣ ನೀಡಲಾಗಿದೆ ಎಂಬ ಮಾಹಿತಿ ಗ್ರಾಮಸ್ಥರನ್ನು ಕಂಗಾಲಾಗುವಂತೆ ಮಾಡಿದೆ.
ನಮ್ಮ ಕಣ್ಣು ಮುಂದೆ ನಿತ್ಯ ಕಾಣುವ ರಸ್ತೆ ಕಾಮಗಾರಿ ನಡೆಸದೆ ಹಣ ಗುಳಂ ಮಾಡಿರುವುದು ಯಾರು ಎಂಬ ಪ್ರಶ್ನೆಗೆ ಪಿಡಿಓ ಉತ್ತರ ನೀಡದೆ ನುಣಚಿ ಕೊಂಡಿದ್ದಾರೆ ಎಂದು ಗ್ರಾಮಸ್ಥರು ಅರೋಪಿಸಿದ್ದಾರೆ. ಪಂಚಾಯತಿ ಅವ್ಯವಸ್ಥೆ ಬಗ್ಗೆ ಅಸಮಾದಾನ ವ್ಯಕ್ತ ಪಡಿಸಿದ್ದು, ಪರಿಶೀಲನೆ ಮಾಡದೆ ಬಿಲ್ ಪಾಸ್ ಮಾಡಿದ ಅಭಿಯಂತರ ಮತ್ತು ಪಿಡಿಓ ವಿರುದ್ಧ ಸೂಕ್ತ ಕ್ರಮ ಜರಗಿಸುವಂತೆ ದೊಡ್ಡಯ್ಯ, ನಾಗಪ್ಪ, ಹೇಮಂತ, ಹನುಮಂತಪ್ಪ, ರಾಮಯ್ಯ ಒತ್ತಾಯ ಪಡಿಸಿದ್ದಾರೆ.