ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ರಾಜಕೀಯ ಬಿಕ್ಕಟ್ಟು ರಂಗಭೂಮಿ ಮೂಲಕ ಬಿಂಬಿಸಲು ವ್ಯವಧಾನ ಅವಶ್ಯ

Mainashree
Updated On : 23 Feb 2014, 11:30 am

ತುಮಕೂರು: ಸಾಮಾಜಿಕ, ರಾಜಕೀಯ ಬಿಕ್ಕಟ್ಟುಗಳನ್ನು ಸಮರ್ಥವಾಗಿ ಕಲೆ ಮತ್ತು ರಂಗಭೂಮಿಯ ಮೂಲಕ ಬಿಂಬಿಸಲು ಇನ್ನಷ್ಟು ವ್ಯವಧಾನ ಅವಶ್ಯಕವಾಗಿದೆ ಎಂದು  ರಂಗ ನಿರ್ದೇಶಕ ನಟರಾಜ್ ಹೊನ್ನವಳ್ಳಿ ಅಭಿಪ್ರಾಯಪಟ್ಟರು.
ಪಟ್ಟಣದ ಕನ್ನಡ ಸಂಘದ ಲಕ್ಷ್ಮಣಪ್ಪ ವೇದಿಕೆಯಲ್ಲಿ ನಡೆಯುತ್ತಿರುವ 6ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕದ ರಾಜಕೀಯ-ಸಾಮಾಜಿಕ ಬಿಕ್ಕಟ್ಟುಗಳು ಬಗ್ಗೆ ಮಾತನಾಡಿದ ಅವರು, ರಂಗಭೂಮಿ ಚಳವಳಿಯಿಂದ ಬಂದುದಾಗಿದೆ, ಸಾಂಪ್ರದಾಯಿಕ ಸಂಬಂಧಗಳನ್ನು ಹೊಂದಿರುವ ರಂಗಭೂಮಿ, ರಾಜಕೀಯವನ್ನು ಪ್ರೇರೇಪಿಸುತ್ತದೆ ಎಂದರಲ್ಲದೆ ರಂಗಭೂಮಿಯಲ್ಲಿ ಅಡಗಿರುವ ಕಲೆಯನ್ನು ಹೊರ ತೆಗೆಯುವಾಗ ಸಮಯ ತೆಗೆದುಕೊಳ್ಳುತ್ತದೆ ಎಂದರು.
ಸಂಸ್ಕೃತಿ ವಿಮರ್ಶಕ ಡಾ.ಮೊಗಳ್ಳಿ ಗಣೇಶ್ ಮಾತನಾಡಿ ಮಹಾತ್ಮಾಗಾಂಧಿ, ಅಂಬೇಡ್ಕರ್ ಅವರ ರಾಜಕೀಯ ಕನಸು ನನಸಾಗಲು ಚದುರಿ ಹೋಗಿರುವ ಸಮುದಾಯಗಳ ಒಕ್ಕೂಟ ರಚಿಸಿ ಸಮಾಜದ ಬದಲಾವಣೆಗೆ ಶ್ರಮಿಸಬೇಕಾಗಿದೆ.
ಪ್ರತಿ ರಾಜಕೀಯ ಪಕ್ಷಗಳಿಗೂ ಜಾತಿಯೇ ಬಹುದೊಡ್ಡ ಬಂಡವಾಳವಾಗಿದ್ದು ಜಾಗತೀಕರಣದಲ್ಲಿ ಬಹುರಾಷ್ಟ್ರೀಯ ಕಂಪನಿಗಳು ಜಗತ್ತಿನ ಜಾತಿಗಳನ್ನು ದಮನಿಸುವ ಕಡೆ ಮುಂದಾಗಿದೆ.  ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ನಮ್ಮದೇ ಬಹುರಾಷ್ಟ್ರೀಯ ಕಂಪನಿಗಳು ನಮ್ಮನ್ನು ಮತ್ತು ನಮ್ಮ ರಾಜಕಾರಣಿಗಳನ್ನು ಕೊಂಡುಕೊಳ್ಳುತ್ತವೆ ಎಂದರು.
ದಂಧೆಯಾಗಿದೆ: ಚಿತ್ರ ನಿರ್ದೇಶಕ ಕೃಷ್ಣ ಮಾಸಡಿ ಮಾತನಾಡಿ ಚಲನಚಿತ್ರ ಜಗತ್ತು ಹಣ ಹಾಕಿ ಹಣ ಮಾಡುವ ದಂಧೆಯಾಗಿದೆ, ಸಾಮಾಜಿಕ, ಸಾಂಸ್ಕೃತಿಕ, ಕಲಾತ್ಮಕ ಚಿತ್ರಗಳನ್ನು ನಮ್ಮಿಂದ ದೂರವಾಗುತ್ತಿವೆ. ನಿರ್ಮಿಸುವವರು ಸಾಮಾಜಿಕ ಕಾಳಜಿ ಇರುವ ಚಿತ್ರಗಳನ್ನು ಮಾಡುತ್ತಿಲ್ಲ ಎಂದು ವಿಷಾದಿಸಿದರು.
ನಿರ್ಲಜ್ಜ ವರ್ತನೆ: ನಾಟಕಕಾರರಾದ ಕೆ.ವೈ. ನಾರಾಯಣಸ್ವಾಮಿ ಮಾತನಾಡಿ ಬರಹಗಾರರು, ನಿರ್ದೇಶಕರು, ನಾಟಕಕಾರರು ಆತ್ಮದೊಳಗೆ ಭ್ರಷ್ಟರಾಗಿ ಹೋಗಿದ್ದಾರೆ. ಮಾತು ಮತ್ತು ಬದುಕಿನ ಮಧ್ಯ ದೊಡ್ಡ ಕಂದಕ ಏರ್ಪಟ್ಟಿದೆ ಎಂದು ವಿಷಾದಿಸಿದ ಅವರು ಕೆಲವು ಬರಹಗಾರರು ಸಾಹಿತಿಗಳು ವಿಧಾನಸೌಧದಲ್ಲಿ ನಿರ್ಲಜ್ಯವಾಗಿ ವರ್ತಿಸುತ್ತಿದ್ದು ಇದರಿಂದ ಸಾಮಾಜಿಕವಾಗಿ ಪ್ರಶ್ನೆ  ಕೇಳುವ ಹಕ್ಕನ್ನು ಕಳೆದುಕೊಂಡಿದ್ದೇವೆ ಎಂದರು.
ಗೋಷ್ಠಿಯಲ್ಲಿ ಸಮ್ಮೇಳನಾಧ್ಯಕ್ಷ ನಟರಾಜ್ ಹುಳಿಯಾರ್, ಭುವನೇಶ್ವರಿ ಕಲಾ ಸಂಘದ ಅಧ್ಯಕ್ಷ ರೇಣುಕಾಮೂರ್ತಿ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement