ರಾಷ್ಟ್ರೀಯ ಉದ್ಯೋಗ ಖಾತ್ರಿ ಕೂಲಿಗಳಿಗೆ ತೀವ್ರ ತೊಂದರೆ
ತಿಪಟೂರು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (ಇ.ಎಫ್.ಎಂ.ಎಸ್) ಅಂತರ್ಜಾಲ ಮೂಲಕ ನೇರ ನಗದು ಪಾವತಿಗೆ ವ್ಯವಸ್ಥೆ ಮಾಡಿದ್ದು, ಎಂ.ಜಿ.ಎನ್.ಆರ್.ಇ.ಜಿ.ಎ. ಯೋಜನೆಯಡಿಯಲ್ಲಿ ಕೆಲಸ ಮಾಡುವ ಕೂಲಿ ಆಳುಗಳ ಪಾಲಿಗೆ ಓಯಸಿಸ್ ಆಗಿ ಪರಿಣಮಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಬಗ್ಗೆ ಗಮನಹರಿಸಬೇಕೆಂದು ಜನವಿಕಾಸ ತಾಲೂಕು ಅಧ್ಯಕ್ಷರಾದ ಶಿವಪ್ಪ ತಿಳಿಸಿದ್ದಾರೆ.
ಗ್ರಾಮಾಂತರ ಪ್ರದೇಶಗಳಲ್ಲಿರುವ ಗ್ರಾಮ ಪಂಚಾಯಿತಿಗಳಿಗೆ ವಿದ್ಯುತ್ ಸೌಲಭ್ಯ ಸರಿಯಾಗಿಲ್ಲದೆ ಕೆಲವೊಮ್ಮೆ ಶಿಫ್ಟ್ ಮೂಲಕ ಕರೆಂಟ್ ಇದ್ದಾಗ ಗ್ರಾ.ಪಂ. ಸಿಬ್ಬಂದಿಯ ಪಾಡೇನು. ಕಣ್ಣುಮುಚ್ಚಾಲೆ ಕರೆಂಟ್ ನಡುವೆ ಬೇಕೋ ಬೇಡವೋ ಎಂದು ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ಕೆಲಸ ಮಾಡಬೇಕೆನ್ನುವ ಇಚ್ಛೆ ಇದ್ದರೂ ಕರೆಂಟ್ ಇರುವುದಿಲ್ಲ. ಕರೆಂಟ್ ಇಲ್ಲದಿದ್ದರೆ ಯಾವಾಗ ಹಣ ಬಿಡುಗಡೆ ಮಾಡುತ್ತಾರೆಂಬ ಮಾಹಿತಿ ಇಲ್ಲದೆ ಕೂಲಿ ಮಾಡಿದ ಕೂಲಿ ಆಳುಗಳಿಗೆ ಉತ್ತರ ನೀಡಲು ಅಧಿಕಾರಿಗಳು ಒದ್ದಾಡುತ್ತಿದ್ದಾರೆ.
ಮೇಲಾಧಿಕಾರಿಗಳು ಮಾತ್ರ ನಮಗೂ ಇದಕ್ಕೂ ಸಂಬಂಧವಿಲ್ಲವೆಂಬಂತೆ ವರ್ತಿಸುತ್ತಿದ್ದಾರೆ. ಇದು ಒಂದು ಗ್ರಾಮ ಪಂಚಾಯಿತಿಯ ಗೋಳಲ್ಲ. ರಾಜ್ಯದಲ್ಲಿರುವ ಎಲ್ಲಾ ಗ್ರಾಮ ಪಂಚಾಯಿತಿಗಳ ಗೋಳಾಗಿದೆ.