ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸಾಮಾಜಿಕ ಪಿಡುಗುಗಳ ವಿರುದ್ಧ ಮಹಿಳೆಯರ ಹೋರಾಟ ಅಗತ್ಯ

Mainashree
Updated On : 23 Feb 2014, 11:31 am

ತುಮಕೂರು: ಮಹಿಳೆಯರು ಇತ್ತೀಚಿನ ದಿನಗಳಲ್ಲಿ ಹೆಚ್ಚು ಜಾಗೃತರಾಗುತ್ತಿದ್ದು, ಮಕ್ಕಳ ಹಾಗೂ ಮಹಿಳೆಯರ ಅನೈತಿಕ ಸಾಗಾಣಿಕೆ ಸೇರಿದಂತೆ ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಡಬೇಕಿದೆ ಎಂದು ಜಿ.ಪಂ. ಸದಸ್ಯ ಅರೇಹಳ್ಳಿ ರಮೇಶ್ ಕರೆ ನೀಡಿದರು.
ಶಿರಾದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸಿಡಿಪಿಓ ಕಚೇರಿ ಆವರಣದಲ್ಲಿ ಇತ್ತೀಚೆಗೆ ನಡೆದ ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆಗಟ್ಟುವ ಜಾಗೃತಿ ಜಾಥಾ ಹಾಗೂ ಬಹಿರಂಗ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಜಿಲ್ಲೆಯ ಹಲವು ಕಡೆ ಮಹಿಳೆಯರು ಮತ್ತು ಮಕ್ಕಳು ಕಾಣೆಯಾಗುತ್ತಿರುವ ಬಗ್ಗೆ ವರದಿಗಳು ಬರುತ್ತಿವೆ. ಇದನ್ನು ನೋಡಿಕೊಂಡು ಸುಮ್ಮನಿರಬಾರದು. ಇವರು ಏಕೆ ಕಾಣೆಯಾಗುತ್ತಾರೆಂಬ ಬಗ್ಗೆ ಅಧ್ಯಯನ ನಡೆಸಬೇಕು ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಸಾ.ಚಿ.ರಾಜಕುಮಾರ್ ಮಾತನಾಡಿ ಮಾನವ ಸಾಗಾಣಿಕೆ ತಡೆಗಟ್ಟಲು ಸಂವಿಧಾನದಲ್ಲಿಯೇ ವಿಶೇಷ ಸೂಚನೆಗಳನ್ನು ನೀಡಲಾಗಿದೆ. ಇದಕ್ಕಾಗಿ ಪ್ರತ್ಯೇಕ ಕಾನೂನುಗಳನ್ನು ಸಹ ತರಲಾಗಿದೆ. ಅನೈತಿಕ ಸಾಗಾಣಿಕೆ ನಿರ್ಬಂಧ ಕಾಯಿದೆ, ಭಾರತ ದಂಡ ಸಂಹಿತೆಯ ಕೆಲವು ಕಲಂಗಳು, ಬಾಲನ್ಯಾಯ ಕಾಯಿದೆ, ಮಾನವ ಅಂಗಾಂಗಗಳ ಜೋಡಣಾ ಕಾಯ್ದೆ, ಬಾಲ ಕಾರ್ಮಿಕ ನಿಷೇಧ ಕಾಯಿದೆ ಹೀಗೆ ಹಲವು ಕಾನೂನು ಕಾಯಿದೆಗಳು ಒಂದಕ್ಕೊಂದು ಪೂರಕವಾಗಿದ್ದು, ಮಹಿಳೆ ಮತ್ತು ಮಕ್ಕಳ ಸಾಗಾಣಿಕೆ ವಿಷಯದಲ್ಲಿ ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಇಷ್ಟಿದ್ದರೂ ಕೆಲವು ಕಡೆ ಇನ್ನೂ ಇಂತಹ ಅನಿಷ್ಟ ಚಟುವಟಿಕೆಗಳು ನಡೆಯುತ್ತಿರುವುದು ದುರದೃಷ್ಟಕರ ಎಂದರು.
ಬಡತನ, ಅಜ್ಞಾನ, ಕೌಟುಂಬಿಕ ಸಮಸ್ಯೆಗಳು ಮುಂತಾದ ಪರಿಣಾಮಗಳಿಂದಾಗಿ ಮಕ್ಕಳು ಹೊರಗೆ ಬರುವಂತಾಗುತ್ತದೆ. ಉದ್ಯೋಗ ಕೊಡಿಸುವ ನೆಪದಲ್ಲಿ ಮಕ್ಕಳು ಹಾಗೂ ಹೆಣ್ಣು ಮಕ್ಕಳನ್ನು ದಂಧೆಗೆ ಕರೆದೊಯ್ಯುವ ಜಾಲಗಳು ಕೆಲಸ ಮಾಡುತ್ತವೆ. ಈ ಬಗ್ಗೆ ಜನತೆ ಎಚ್ಚರದಿಂದಿರಬೇಕಾದ ಅಗತ್ಯವಿದೆ ಎಂದರು.
ಯಾವುದೇ ಮಗು ಹಾಗೂ ಮಹಿಳೆಯರು ಕಾಣೆಯಾದ ಕೂಡಲೇ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಪೊಲೀಸರು ವಿನಾಕಾರಣ ವಿಳಂಬ ಮಾಡದೆ ಅಂತಹ ಕಾಣೆಯಾದ ಪ್ರಕರಣಗಳನ್ನು ದಾಖಲಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ ವಾಸಂತಿ ಉಪ್ಪಾರ್ ಮಾತನಾಡಿ ಮಾನವ ಸಾಗಾಣಿಕೆ ಒಂದು ಹೇಯ
ಕೃತ್ಯವಾಗಿದ್ದು, ಸಾಮಾಜಿಕ ಪಿಡುಗಾಗಿ ಪರಿಣಮಿಸಿದೆ. ಜಿಲ್ಲೆಯಲ್ಲಿ 18 ವರ್ಷದ ಒಳಗಿರುವ ಯಾವುದೇ ಮಕ್ಕಳಿಗೆ ತೊಂದರೆಯಾದರೆ, ಹಕ್ಕುಗಳ ಉಲ್ಲಂಘನೆಯಾದರೆ ಮಕ್ಕಳ ರಕ್ಷಣಾ ಘಟಕ ಅವರ ನೆರವಿಗೆ ಬರುತ್ತದೆ. ಪುನರ್ ವಸತಿಗೆ ಅವಕಾಶ ಕಲ್ಪಿಸಿಕೊಡುತ್ತದೆ. ಬಾಲ ನ್ಯಾಯ ಕಾಯಿದೆಯಲ್ಲಿ ಮಕ್ಕಳಿಗಾಗಿ ಮಕ್ಕಳ ಕಲ್ಯಾಣ ಸಮಿತಿ ಹಾಗೂ ಬಾಲ ನ್ಯಾಯ ಮಂಡಳಿ ಕಾರ್ಯನಿರ್ವಹಿಸುತ್ತಿದ್ದು, ತಪ್ಪು ಮಾಡಿದ ಮಕ್ಕಳನ್ನು ನ್ಯಾಯ ಮಂಡಳಿ ಮುಂದೆ ಹಾಗೂ ರಕ್ಷಣೆ ಬೇಕಾಗಿರುವ ಮಕ್ಕಳನ್ನು ಸಮಿತಿಯ ಮುಂದೆ ಹಾಜರುಪಡಿಸಿ ಮುಂದಿನ ಪುನರ್ ವಸತಿಗೆ ವ್ಯವಸ್ಥೆ ಮಾಡಲಾಗುತ್ತದೆ ಎಂದರು.
ಮಕ್ಕಳ ಸಹಾಯವಾಣಿಯ ಉಮೇಶ್ ಮಾತನಾಡಿ ಯಾವುದೇ ಮಕ್ಕಳು ತೊಂದರೆಗೆ ಸಿಲುಕಿದ್ದರೆ ಅಥವಾ ಬಸ್ ನಿಲ್ದಾಣಗಳಲ್ಲಿ ಬೇರೆಯಲ್ಲಿಯಾದರೂ ಮಕ್ಕಳು ಕಂಡರೆ ತಕ್ಷಣ ಸಹಾಯವಾಣಿ ಸಂಪರ್ಕಿಸಲು ತಿಳಿಸಿದರು.
ತಾ.ಪಂ. ಅಧ್ಯಕ್ಷೆ ಗಂಗಮ್ಮ ಸಿದ್ದಹನುಮಯ್ಯ, ತಾ.ಪಂ. ಉಪಾಧ್ಯಕ್ಷ ಉದಯಶಂಕರ್, ಸಿಡಿಪಿಓ ಸಿದ್ದಯ್ಯ, ತಾ.ಪಂ. ಸದಸ್ಯೆ ಜಯಮ್ಮ, ತಿಮ್ಮಯ್ಯ ಮುಂತಾದವರು ಮಾತನಾಡಿದರು. ವಕೀಲರಾದ ವೆಂಕಟೇಶ್, ಶಿರಾ ಸಾಂತ್ವನ ಕೇಂದ್ರದ ಮುಖ್ಯಸ್ಥರು, ವಿವಿಧ ಜನಪ್ರತಿನಿಧಿಗಳು, ಎಸಿಡಿಪಿಓ ಕರಿಯಣ್ಣ ಸೇರಿದಂತೆ ಇತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement