ಗಜರಾಜನೊಂದಿಗೆ ಸಾಧುಗಳ ಪಾದಯಾತ್ರೆ
ತುರುವೇಕೆರೆ: ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮಾಲೆಗಾವ್ ಕಾಲಭೈರವ ಮಂಚ್ನ ನವನಾಥ ಸಂಪ್ರದಾಯಕ್ಕೆ ಸೇರಿದ ಯತಿಗಳು ಹಿಂದೂ ಧರ್ಮದ ಪ್ರಚಾರಕ್ಕಾಗಿ ಗಜರಾಜನೊಂದಿಗೆ ರಾಜ್ಯ ಪ್ರವಾಸವನ್ನು ಕೈಗೊಂಡಿದ್ದಾರೆ.
ಮಡಿಕೇರಿ, ಮೈಸೂರಿನಿಂದ ಪಟ್ಟಣಕ್ಕೆ ಆಗಮಿಸಿದ ಯತಿಗಳು ಪಟ್ಟಣದ ಬಹುತೇಕ ಬಡಾವಣೆಗಳಲ್ಲಿ ಸಂಚರಿಸಿದರು. ಇಲ್ಲಿಂದ ಧರ್ಮಸ್ಥಳಕ್ಕೆ ತೆರಳುವುದಾಗಿ ತಂಡದ ಮುಖ್ಯ ಗುರುಗಳಾದ ಗುರುನಾಮಾನಂದಪುರಿ ಹೇಳಿದರು. ಹಿಂದೂ ಧರ್ಮದ ಸಾರವನ್ನು ಪ್ರಚಾರ ಮಾಡುವುದೇ ತಮ್ಮ ಉದ್ದೇಶ ಎಂದು ಹೇಳಿದ ಅವರು ಕಾಲ್ನಡಿಗೆಯಲ್ಲೇ ರಾಜ್ಯದಾದ್ಯಂತ ಪ್ರವಾಸ ಮಾಡುವುದಾಗಿ ಹೇಳಿದರು. ಮುಂದಿನ ಮಹಾ ಕುಂಭಾಭಿಷೇಕದವರೆಗೂ ಪ್ರವಾಸದಲ್ಲಿರುವುದಾಗಿ ಹೇಳಿದ ಅವರು ಭಕ್ತರು ನೀಡುವ ಆಹಾರವನ್ನು ಸ್ವೀಕರಿಸುವ ಯತಿಗಳು ತಮ್ಮ ದೈನಂದಿನ ಬದುಕನ್ನು ಕಳೆಯಲಿದ್ದಾರೆ ಎಂದರು. ಸಾರ್ವಜನಿಕರು ಗಜರಾಜನಿಗೆ ಪೂಜೆ ಪುನಸ್ಕಾರವನ್ನು ಮಾಡುತ್ತಾರೆ. ಗಜರಾಜನಿಗೆ ರಾಗಿ ಮುದ್ದೆ, ಹಣ್ಣುಗಳು, ಬೆಲ್ಲ, ಕಾಯಿ ಮೊದಲಾದ ಆಹಾರವನ್ನು ನೀಡುವರು. ಹಲವಾರು ಮಂದಿ ಗಜರಾಜನ ಆಶೀರ್ವಾದವನ್ನೂ ಪಡೆಯಲು ಅಪೇಕ್ಷಿಸುತ್ತಾರೆ. ಯಾರಿಗೂ ಬೇಸರ ಮಾಡದೆ ಅವರ ಇಚ್ಛೆಯನ್ನು ನೆರವೇರಿಸುವುದಾಗಿ ಅವರು ಹೇಳಿದರು.
ದಾರಿ ಮಧ್ಯೆ ಸಿಗುವ ದೇವಸ್ಥಾನಗಳೇ ತಮ್ಮ ಆಶ್ರಯ ತಾಣಗಳಾಗಿವೆ. ಪ್ರತಿದಿನ ಕನಿಷ್ಠ ಐದಾರು ಗಂಟೆಗಳ ಪ್ರಯಾಣ ಮಾಡುವುದಾಗಿ ಗುರುನಾಮಾನಂದ ಪುರಿ ಹೇಳಿದರು. ತಮ್ಮೊಂದಿಗೆ ಕೃಷ್ಣಾನಂದ ಮಹಾರಾಜ್ರ ಶಿಷ್ಯರಾದ ಸುದಾಮ್ ನಾಥ್, ಗುರುನಾಥ್, ಅರ್ಜುನ ಪುರಿ, ಅರ್ಜುನ್ ನಾಥ್, ವಿಶ್ವನಾಥ್, ತುಕಾರಾಮ್ ನಾಥ್, ಭೈರವನಾಥ್ ಪಾದಯಾತ್ರೆಯಲ್ಲಿ ಇದ್ದಾರೆ ಎಂದರು. ಗಜರಾಜ ಜಯಲಕ್ಷ್ಮಿಯೊಂದಿಗೆ ರಾಜ್ಯದ ಉದ್ದಗಲಕ್ಕೂ ತೆರಳಿ ಹಿಂದೂ ಧರ್ಮದ ಪ್ರಚಾರ ಮಾಡುವುದಾಗಿ ಅವರು ಹೇಳಿದರು. ಪಟ್ಟಣದ ಸುಬ್ರಹ್ಮಣ್ಯ ಬಡಾವಣೆಗೆ ಗಜರಾಜನ ಆಗಮನವಾಗಿತ್ತು. ಆ ವೇಳೆ ಮನೆಯ ಪ್ರಾಂಗಣದಲ್ಲಿ ಹಾಕಲಾಗಿದ್ದ ಕಬ್ಬನ್ನು ಆನೆಗೆ ನೀಡಿ ಮನೆಯವರು ಧನ್ಯತೆ ಪಡೆದರು.
ಇಂದು ಜಿ.ಎಸ್ ಎಸ್. ನುಡಿನಮನ
ತಿಪಟೂರು: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ರಾಷ್ಟ್ರಕವಿ ಡಾ.ಜಿ.ಎಸ್.ಎಸ್ ನುಡಿನಮನ ಕಾರ್ಯಕ್ರಮವನ್ನು ಮಂಗಳವಾರ ಮಧ್ಯಾಹ್ನ 12ಗಂಟೆಗೆ ಕಾಲೇಜಿನ ಡಾ.ಅಬ್ದುಲ್ ಕಲಾಂ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ.ಜಯದೇವಪ್ಪ ವಹಿಸಲಿದ್ದು, ಕಸಾಪ ತಾ. ಅಧ್ಯಕ್ಷ ಉಜ್ಜಜ್ಜಿ ರಾಜಣ್ಣ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಸಾಹಿತಿ ಪ್ರೊ.ಬಿಳಿಗೆರೆ ಕೃಷ್ಣಮೂರ್ತಿ ಉದ್ಘಾಟನೆ ಮಾಡಲಿದ್ದು, ಸಂಸ್ಕೃತಿ ಚಿಂತಕ ಪ್ರೊ.ಎಸ್.ಬಿ. ಸಿದ್ದರಾಮಯ್ಯ ಡಾ.ಜಿ.ಎಸ್.ಶಿವರುದ್ರಪ್ಪನವರ ಬದುಕು ಮತ್ತು ಬರಹ ಕುರಿತು ಉಪನ್ಯಾಸ ನೀಡಲಿದ್ದಾರೆ.