ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಟಾಸ್ಕ್ ವರ್ಕ್ಸ್ ದಿನಗೂಲಿ ನೌಕರರ ಅನಿರ್ದಿಷ್ಟಾವಧಿ ಮುಷ್ಕರ

Rashmi Kasaragodu
Updated On : 25 Feb 2014, 2:24 am

ತುರುವೇಕೆರೆ: ತಾಲೂಕಿನ ಹೇಮಾವತಿ ನಾಲಾ ವ್ಯಾಪ್ತಿಯಲ್ಲಿ ಬರುವ ಕಾವೇರಿ ನಿಗಮದಲ್ಲಿ ಕಳೆದ 1996 ರಿಂದ ದಿನಗೂಲಿ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಟಾಸ್ಕ್ ವರ್ಕ್ಸ್ ದಿನಗೂಲಿ ನೌಕರರನ್ನು ಕಾಯಂಗೊಳಿಸಬೇಕು ಎಂದು ಒತ್ತಾಯಿಸಿ ನೌಕರರ ಸಂಘದ ಅಧ್ಯಕ್ಷಮಂಜುನಾಥ್ ನೇತೃತ್ವದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ತುರುವೇಕೆರೆಯ ಹೇಮಾವತಿ ನಾಲಾ ಸೂಪರಿಂಟೆಂಡಿಂಗ್ ಎಂಜಿನಿಯರ್  ಕಚೇರಿ ಮುಂದೆ ಧರಣಿ ಕುಳಿತಿರುವ ದಿನಗೂಲಿ ನೌಕರರು ಹಲವಾರು ಬೇಡಿಕೆಗಳನ್ನು ಮುಂದೆ ಇಟ್ಟು ಹೋರಾಟಕ್ಕೆ ಇಳಿದಿದ್ದಾರೆ. ಟಾಸ್ಕ್ ವರ್ಕ್ಸ್ ನೌಕರರಿಗೆ ಸೇವಾ ಭದ್ರತೆ ಒದಗಿಸುವುದು. ಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸುವುದು,ನೌಕರರಿಗೆ ನೀಡುತ್ತಿರುವ ಸಂಬಳವನ್ನು ಹೆಚ್ಚಿಸುವುದು, ವರ್ಷಪೂರ್ತಿ ಕೆಲಸ ನೀಡುವುದು, ತಿಂಗಳ ಸಂಬಳ ಹಣವನ್ನು ನೇರವಾಗಿ ನೌಕರರ ಖಾತೆಗೆ ಜಮಾ ಮಾಡಬೇಕು ಎಂದು ಒತ್ತಾಯಿಸಲಾಗಿದೆ.
ಬೀದಿಗೆ ಬೀಳುತ್ತೆ: ನಾಲೆಗೆ ನೀರು ಬಿಟ್ಟಾಗ ಮಾತ್ರ ದಿನಗೂಲಿ ನೌಕರರನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗುತ್ತಿದೆ. ನೀರು ನಿಲ್ಲಿಸಿದ ನಂತರ ಎಲ್ಲರನ್ನೂ ಕೆಲಸದಿಂದ ತೆಗೆದು ಹಾಕಲಾಗುತ್ತಿದೆ. ಇದರಿಂದಾಗಿ ಈ ವೃತ್ತಿಯನ್ನೇ ನಂಬಿಕೊಂಡಿರುವ ನೌಕರರ ಕುಟುಂಬ ಬೀದಿಗೆ ಬೀಳುತ್ತಿದೆ. ಬೇರೆ ಉದ್ಯೋಗ ಬಾರದ ಹಲವಾರು ನೌಕರರು ಉಪವಾಸ ಇರುವ ಪ್ರಕರಣಗಳೂ ಇವೆ ಎಂದು ಸಂಘದ ಅಧ್ಯಕ್ಷ ಮಂಜುನಾಥ್ ಹೇಳಿದ್ದಾರೆ. ದಿನಗೂಲಿ ನೌಕರಿ ಮಾಡುತ್ತಿರುವ ನೌಕರರಿಗೆ ನೀಡಬೇಕಾಗಿರುವ ಸಂಬಳವನ್ನು ಗುತ್ತಿಗೆದಾರರ ಮುಖೇನ ನೀಡುತ್ತಿರುವುದು ಖಂಡನೀಯ. ದಿನಗೂಲಿ ನೌಕರ ಗುತ್ತಿಗೆದಾರರ ತಾಳಕ್ಕೆ ಕುಣಿಯಬೇಕಿದೆ. ಎಷ್ಟೋ ದಿನಗೂಲಿ ನೌಕರರಿಗೆ ನಿರ್ದಿಷ್ಟ ಹಣ ನೀಡದೇ ವಂಚಿಸಲಾಗುತ್ತಿದೆ. ಪ್ರತಿ ತಿಂಗಳೂ ಸಕಾಲದಲ್ಲಿ ನೀಡುವ ಸಂಬಳವನ್ನು ಸಹ ಕೊಡಲಾಗುತ್ತಿಲ್ಲ. ಮೂರ್ನಾಲ್ಕು ತಿಂಗಳಿಗೆ ಒಮ್ಮೆ ಸಂಬಳವನ್ನೂ ಕೊಡುವ ಪರಿಪಾಠವನ್ನು ಗುತ್ತಿಗೆದಾರರು ಬೆಳೆಸಿಕೊಂಡಿದ್ದಾರೆ. ಕೊಡುವ ಹಣದಲ್ಲೂ ಗುತ್ತಿಗೆದಾರ ಸ್ವಲ್ಪ ಹಣ ಹಿಡಿದು ನೀಡುತ್ತಾರೆ. ಪ್ರತಿಭಟಿಸಿದರೆ ಕೆಲಸಕ್ಕೆ ಬೇಡವೆಂದು ಹೇಳಿ ಕಿರುಕುಳ ನೀಡಲಾಗುತ್ತಿದೆ ಎಂದು ಮಂಜುನಾಥ್ ಆಪಾದಿಸಿದ್ದಾರೆ. ಹೇಮಾವತಿ ನಾಲಾ ಹಿರಿಯ ಅಧಿಕಾರಿಗಳು ಟಾಸ್ಕ್ ವರ್ಕ್ಸ್ ದಿನಗೂಲಿ ನೌಕರರ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಮಂಜುನಾಥ್ ಒತ್ತಾಯಿಸಿದ್ದಾರೆ. ಪಟ್ಟಣದ ಗ್ರಾಮ ದೇವತೆ ಉಡುಸಲಮ್ಮ ದೇವಾಲಯದ ಮುಂಭಾಗದಿಂದ ಪ್ರತಿಭಟನಾ ಮೆರವಣಿಗೆ ಹೊರಟು ಹೇಮಾವತಿ ನಾಲಾ ಕಚೇರಿಯನ್ನು ತಲುಪಿತು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement