ಪೂರ್ವಾಗ್ರಹ ಪೀಡಿತ ದೃಷ್ಟಿಕೋನ ಸರಿಯಲ್ಲ
ಚಿಕ್ಕನಾಯಕನಹಳ್ಳಿ: ಕೇವಲ ಒಂದು ಘಟನೆಯನ್ನೇ ನೆಪಮಾಡಿಕೊಂಡು ಒಂದು ವರ್ಗದ ಜನ, ಒಬ್ಬ ವ್ಯಕ್ತಿ ಮತ್ತು ಒಂದು ಪಕ್ಷವನ್ನು ಗುರಿಯಾಗಿರಿಸಿಕೊಂಡು ಇಂತಹ ಪಕ್ಷಾತೀತ ವೇದಿಕೆಯಲ್ಲಿ ಟೀಕಿಸುವುದನ್ನು ಕೈಬಿಟ್ಟು ಕನ್ನಡದ ಬಗ್ಗೆ ಮಾತನಾಡುವುದು ಆರೋಗ್ಯಕರ ಎಂದು ಚಲನಚಿತ್ರ ರಂಗದ ಖ್ಯಾತನಿರ್ದೇಶಕ ಬಿ.ಎಸ್.ಲಿಂಗದೇವರು ನುಡಿದರು.
ಅವರು ಇಲ್ಲಿನ ದಿ.ಲಕ್ಷ್ಮಣಯ್ಯ ವೇದಿಕೆಯಲ್ಲಿ 6ನೇ ಚಿಕ್ಕನಾಯಕನಹಳ್ಳಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ನಾನು ಇಲ್ಲಿ ಯಾವ ಪಕ್ಷ ಅಥವಾ ಯಾವ ವ್ಯಕ್ತಿಯ ಪರವಾಗಿ ಮಾತನಾಡುತ್ತಿಲ್ಲ. ಚುನಾವಣೆಗಳಲ್ಲಿ ಬದಲಾವಣೆ ಬಗ್ಗೆ ಮಾತನಾಡುತ್ತೀರಿ. ಅದೇ ಸಂದರ್ಭದಲ್ಲಿ ವಂಶಾಡಳಿತದ ಬಗ್ಗೆ ವಿರೋಧಿಸುವುದಿಲ್ಲ. ಹಲವಾರು ತಲೆಮಾರುಗಳಿಂದ ಒಂದೇ ಕುಟುಂಬ ನಮ್ಮ ದೇಶವನ್ನು ಆಳಿದೆ. ಕಾಯಾಂರ್ಗದಲ್ಲಿನ ಸಿಬ್ಬಂದಿಗೆ ವರ್ಗಾವಣೆ ಮತ್ತು ನಿವೃತ್ತಿ ನಿಯಮವಿರುವಂತೆ ರಾಜಕಾರಿಣಿಗಳಿಗೂ ಅಳವಡಿಸಿ. ಯುಪಿಎಸ್ಸಿ ಪರೀಕ್ಷೆಯಲ್ಲಿ ಮೂರು ಬಾರಿ ವಿಫಲರಾದರೆ ಮತ್ತೆ ಪರೀಕ್ಷೆಗೆ ಕೂರುವಂತಿಲ್ಲ. ಅಮೆರಿಕದಲ್ಲಿ ಎರಡು ಬಾರಿ ಅಧ್ಯಕ್ಷರಾದರೆ ಮತ್ತೆ ಸ್ಪರ್ಧಿಸುವಂತಿಲ್ಲ. ಇಲ್ಲಿ ಕುಟುಂಬದ ಎಲ್ಲರೂ ಸಾಯುವವರೆಗೂ ಸ್ಪರ್ಧಿಸುತ್ತಿರಬಹುದಾದರೆ ಪ್ರಜಾಪ್ರಭುತ್ವಕ್ಕೆಲ್ಲಿದೆ ಬೆಲೆ. ತಲೆತಲಾಂತರವಾಗಿ ಆಡಳಿತ ಮಾಡಲು ಇದೇನು ಅರಸೊತ್ತಿಗೆಯೆ. ಈ ವೇದಿಕೆಗೆ ತನ್ನದೇ ಆದ ಮಹತ್ವವಿದೆ. ಆದ್ದರಿಂದ ಇಲ್ಲಿ ಚರ್ಚಿತವಾಗುವ ವಿಷಯಗಳು ಕನ್ನಡದ ಮತ್ತು ಜನಸಾಮಾನ್ಯರ ಒಳಿತಿಗೆ ಪೂರಕವಾಗಿರಬೇಕೆ ವಿನಃ ಯಾರನ್ನೋ ಮೆಚ್ಚಿಸಲು ಮತ್ತು ತನಗಾಗದವರನ್ನು ನಿಂದಿಸಲು ವೇದಿಕೆ ಬಳಸುವುದನ್ನು ನಾನು ಖಂಡಿಸುತ್ತೇನೆ ಎಂದರು.
ಹೊಗಳು ಭಟರು: ಇತ್ತೀಚೆಗೆ ಜನರ ಮಧ್ಯೆ ಹೆಚ್ಚು ಚಿರ್ಚಿತವಾಗುತ್ತಿರುವ ವಿಷಯಕ್ಕೆ ಬಂದರೆ ಸಾಹಿತಿಗಳು ಬರಹಗಾರರು ತಮ್ಮ ಅನುಕೂಲಕ್ಕಾಗಿ ಮತ್ತು ಲಾಭಕ್ಕಾಗಿ, ರಾಜಕಾರಣಿಗಳ, ಆಡಳಿತ ಪಕ್ಷದ ಹೊಗಳು ಭಟರಾಗುತ್ತಿದ್ದಾರೆಂಬುದು ಸಾಮಾನ್ಯ ಸಂಗತಿಯಾಗಿದೆ. ಈಗ ತಾನೇ ಮಾತನಾಡಿದ ಜಿ.ಕೆ. ಗೋವಿಂರಾವ್ ಅವರು ನರಮೇಧದ ಬಗ್ಗೆ ಮಾತನಾಡುತ್ತಾ, ಒಬ್ಬ ವ್ಯಕ್ತಿ ಮತ್ತು ಒಂದು ಪಕ್ಷವನ್ನು ಗುರಿಯಾಗಿರಿಸಿಕೊಂಡು ಮಾತನಾಡಿದ್ದನ್ನು ನಾನು ಒಪ್ಪುವುದಿಲ್ಲ. ನರಮೇಧವನ್ನು ಖಂಡಿಸುವುದಾದರೆ, ಗುಜರಾತ್ ಒಂದೇ ಏಕೆ,ದಿಲ್ಲಿಯಲ್ಲಿನ ಸಿಖ್ಖರ ಹತ್ಯೆ, ಅಯೋಧ್ಯೆ ಕರಸೇವಕರ ಕಗ್ಗೊಲೆ, ಅಷ್ಟೇ ಏಕೆ ಪ್ರತಿನಿತ್ಯ ಭಯೋತ್ಪಾದಕರಿಂದ ನಡೆಯುತ್ತಿರುವ ಅಮಾಯಕರ ಹತ್ಯೆಯನ್ನು ನಾವು ಖಂಡಿಸಬೇಕಾಗುತ್ತದೆ. ನಿರಂತರವಾಗಿ ರಾಜಕೀಯ ಪ್ರೇರಿತ ನಿರ್ಧಾರಗಳನ್ನೇ ಇಟ್ಟುಕೊಂಡು ಯಾವುದೇ ಒಂದು ನೀರಾವರಿ ಯೋಜನೆಗಳನ್ನು ರೂಪಿಸದೇ ರೈತರ ದಿನನಿತ್ಯದ ಬದುಕನ್ನೇ ಕಿತ್ತುಕೊಂಡಿದಾರೆ. ಇದು ನರಮೇಧಕ್ಕಿಂತ ಹೆಚ್ಚು ಎಂದೆನಿಸುತ್ತದೆ. ಇಲ್ಲಿಯ ಸಮಸ್ಯೆಗಳಿಗೆ ಒತ್ತುಕೊಡುವುದು ಹೆಚ್ಚು ಸೂಕ್ತ, ಆದ್ದರಿಂದ ಎಲ್ಲೋ ದಶಕಗಳ ಹಿಂದೆ ನಡೆದ ಘಟನೆಗಳನ್ನು ಪ್ರಸ್ತಾಪಿಸುವುದನ್ನು ಬಿಡಿ ನಮ್ಮ ಮುಂದಿರುವ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಿ ಎಂದರು.
ಒಪ್ಪುವುದಿಲ್ಲ: ಮಠಮಾನ್ಯಗಳು ಕೆಟ್ಟಿವೆ ಎಂದು ಜಿಕೆಜಿಯವರು ಹೇಳಿದ ಮಾತನ್ನು ನಾನು ಒಪ್ಪುವುದಿಲ್ಲ, ಎಲ್ಲಾ ಮಠಗಳು ಕೆಟ್ಟಿಲ್ಲ, ನಮ್ಮ ರಾಜ್ಯದಲ್ಲಿ ಇಂದು ಮಠಗಳು ಶೈಕ್ಷಣಿಕ ಸಂಸ್ಥೆಗಳ ತೆರೆದು ಈ ಮೂಲಕ ಶೇ.90ರಷ್ಟು ಸಮಾಜ ಸೇವೆಯಲ್ಲಿ ತೊಡಗಿಕೊಂಡಿವೆ.
ತುಮಕೂರಿನ ಸಿದ್ಧಗಂಗಾ ಮಠ ಪ್ರತಿನಿತ್ಯ 12 ಸಾವಿರ ವಿದ್ಯಾರ್ಥಿಗಳಿಗೆ ಊಟ ವಸತಿ ನೀಡಿ ಶಿಕ್ಷಣ ಸೇವೆಯಲ್ಲಿ ತೊಡಗಿದೆ. ಇಲ್ಲಿ ಯಾವುದೇ ಒಂದು ಜಾತಿ ಮತ್ತು ಧರ್ಮಕ್ಕೆ ಮೀಸಲಿಡದೆ ಸುಮಾರು 90 ವರ್ಷಗಳಿಂದ ಶಿಕ್ಷಣ ನೀಡುತ್ತಾ ಸಮಾಜ ಕಟ್ಟುವ ಕೆಲಸವನ್ನು ಮಠಗಳು ಮಾಡಿವೆ. ಸಾವಿರಾರು ಮಠಗಳಿರುವ ಕರ್ನಾಟಕ ಪರಂಪರೆಯಲ್ಲಿ ಯಾವುದೋ ಒಂದು ಮಠ ಮಾಡಿದ ತಪ್ಪಿಗೆ ಸಾರಾಸಗಟಾಗಿ ಮಠಗಳನ್ನು ದೂಷಿಸುವುದನ್ನು ಬಿಡಿ ಎಂದರು.