ಭಾರತ್ ಸ್ಕೌಟ್ಸ್, ಗೈಡ್ಸ್ ತರಬೇತಿ ಶಿಬಿರ
ತುರುವೇಕೆರೆ: ತಾಲೂಕಿನ ಬಾಣಸಂದ್ರದ ವಿಎಸ್ಎಸ್ ಜೆಸಿ ಶಾಲೆಯಲ್ಲಿ ತಾಲೂಕು ಮಟ್ಟದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಒಂದು ದಿನದ ತರಬೇತಿ ಶಿಬಿರ ನಡೆಯಿತು.
ಮಾನವೀಯ ಮೌಲ್ಯಗಳನ್ನು ಸ್ಕೌಟ್ಸ್ನಿಂದ ಕಲಿಯಬಹುದಾಗಿದೆ ಹಾಗೂ ಅತಿ ಶಿಸ್ತುಬದ್ಧ ಜೀವನ ನಡೆಸಲು ಸ್ಕೌಟ್ಸ್ ಸಹಕಾರಿಯಾಗಿದೆ ಎಂದು ತರಬೇತಿಯ ಉದ್ಘಾಟನೆ ಮಾಡಿದ ವಿಷಯ ಪರಿವೀಕ್ಷಕ ಭೈರಯ್ಯ ತಿಳಿಸಿದರು. ಸ್ಕೌಟ್ನಲ್ಲಿ ಸೇವೆ ಸಲ್ಲಿಸಿದಲ್ಲಿ ಉನ್ನತ ವ್ಯಾಸಾಂಗಕ್ಕೆ ಪ್ರಾಶಸ್ತ್ಯ ಇದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ರಂಗಪ್ಪ ಹೇಳಿದರು. ಸ್ಕೌಟ್ಸ್ ಮತ್ತು ಗೈಡ್ಸ್ನ ಅಧ್ಯಕ್ಷರಾದ ವಕೀಲ ಪಿ.ಎಚ್. ಧನಪಾಲ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಂಘಟನಾ ಆಯುಕ್ತರಾದ ಕರಿಸಿದ್ದಬಸಪ್ಪ ಮಾತನಾಡಿ ಸ್ಕೌಟ್ಸ್ ಮತ್ತು ಗೈಡ್ಸ್ ನಿಂದ ದೊರೆಯುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಸಮಾರಂಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಗಂಗಾಧರ್, ಚೇರ್ಮನ್ ಹಾಲಾನಾಯ್ಕ್, ಸಂಚಾಲಕ ಬಸವರಾಜು, ತಿಪಟೂರಿನ ನಂಜುಂಡಸ್ವಾಮಿ,
ಬಾಣಸಂದ್ರ ಸಿಆರ್ಪಿ ರಾಜು ಉಪಸ್ಥಿತರಿದ್ದರು. ಸಿದ್ದಪ್ಪ ಸ್ವಾಗತಿಸಿದರು. ಬಸವರಾಜು ವಂದಿಸಿದರು.