ರೈತಪರ, ಜನಪರ ಬಜೆಟ್
ತಿಪಟೂರು: ತುಮಕೂರಿಗೆ ಮೆಡಿಕಲ್ ಕಾಲೇಜು ಮಂಜೂರಾತಿ ಸೇರಿದಂತೆ ಜಿಲ್ಲೆಗೆ ಹಲವು ಜನಪರ ಕಾರ್ಯಕ್ರಮಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಬಜೆಟ್ನಲ್ಲಿ ಪ್ರಕಟಿಸಿದ್ದಾರೆಂದು ತಾಲೂಕು ಕಾಂಗ್ರೆಸ್ ವಕ್ತಾರ ಕೆ.ಎಸ್. ಸದಾಶಿವಯ್ಯ ಸಂತಸ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರ ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿರುವ ಅವರು ತೆಂಗಿನ ನಾರಿನ ಟೆಕ್ನಾಲಜಿ ಪಾರ್ಕ್ ವಿಜ್ಞಾನ ಗುಡ್ಡಕ್ಕಾಗಿ 2ಕೋಟಿ ರು.ಗಳನ್ನು ಮೀಸಲಿರಿಸಲಾಗಿದ್ದು, ಸಮಾಜ ಕಲ್ಯಾಣ ಇಲಾಖೆ ಮೂಲಕ ತುಮಕೂರು ಜಿಲ್ಲೆಯಲ್ಲಿ ತಾಂಡ ಅಭಿವೃದ್ಧಿ ನಿಗಮದ ಪ್ರಾದೇಶಿಕ ಕಚೇರಿ ಮತ್ತು ಸಮುದಾಯ ಭವನ ಸಂಕೀರ್ಣಕ್ಕೆ ಹಾಗೂ ಎತ್ತಿನ ಹೊಳೆ, ಜಿ.ಎಸ್. ಪರಮಶಿವಯ್ಯನವರ ವರದಿಗೆ ಒತ್ತು ಕೊಡಲಾಗಿದೆ.
ಕೃಷಿ ಬೆಲೆ ಆಯೋಗ ರಚನೆ, ಒಣಭೂಮಿ ಅಭಿವೃದ್ಧಿಗೆ ಒತ್ತು, ಕೃಷಿ ವಿಶ್ವವಿದ್ಯಾಲಯಗಳ ಡಿಪ್ಲೊಮಾ ಮತ್ತು ಪದವಿ ಪ್ರವೇಶದಲ್ಲಿ ರೈತರ ಮಕ್ಕಳಿಗೆ 40ರಷ್ಟು ಸೀಟು ಮೀಸಲಿಟ್ಟಿರುವುದು ಗ್ರಾಮೀಣ ರೈತರ ಬದುಕು ಸುಧಾರಿಸುವುದರಲ್ಲಿ ಅನುಮಾನವಿಲ್ಲ. ತೋಟಗಾರಿಕೆ, ಮೀನುಗಾರಿಕೆ, ಪಶುಸಂಗೋಪನೆ, ಕುರಿ-ಮೇಕೆ ಸಾಕಾಣಿಕೆ, ರೇಷ್ಮೆಗೆ ಪ್ರೋತ್ಸಾಹ ಇವುಗಳ ತಕ್ಷಣ ಪ್ರತಿಫಲ ದೊರಕಿಸುವಂತಹ ನಿರ್ಧಾರವಾಗಿದೆ ಎಂದರು.