ವಿಕಾಸಸೌಧದಿಂದ ವಾರ್ಡ್ಗೆ ಆಡಳಿತ
ಕನ್ನಡಪ್ರಭ ವಾರ್ತ್ಣೆ ತುಮಕೂರು ಫೆ.24
ನಗರಾಭಿವೃದ್ಧಿ ಇಲಾಖೆಯ ಆಡಳಿತವನ್ನು ನಗರಸಭೆ, ಪಾಲಿಕೆ, ಪುರಸಭೆ ವಾರ್ಡ್ಗಳಿಗೂ ವಿಸ್ತರಿಸುವ ಆಶಯವನ್ನು ನಗರಾಭಿವೃದ್ಧಿ ಸಚಿವ ವಿನಯ್ಕುಮಾರ್ ಸೊರಕೆ ವ್ಯಕ್ತಪಡಿಸಿದ್ದಾರೆ. ಇಲಾಖೆ ಕೇವಲ ಬೆಂಗಳೂರಿನ ವಿಕಾಸ ಸೌಧಕ್ಕೆ ಸೀಮಿತವಲ್ಲ ಎಂದಿರುವ ಸೊರಕೆ, ನಾಗರಿಕ ಸಮಿತಿಯೊಂದಿಗೆ ವಾರ್ಡ್ವಾರು ಸಭೆಗಳನ್ನು ನಡೆಸಿ, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ.
ಅವರು ತುಮಕೂರಿನ ರಾಜೀವ್ಗಾಂಧಿ ನಗರದಲ್ಲಿ ಎರಡನೇ ಹಂತದ ಒಳಚರಂಡಿ ಕಾಮಗಾರಿಗೆ ಭೂಮಿ ಪೂಜೆ ಮಾಡುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು. ಈ ಹಿಂದೆ ತಾವು ಘೋಷಿಸಿದಂತೆ ಪ್ರತಿ 3 ತಿಂಗಳಿಗೊಮ್ಮೆ ನಗರಸಭೆ, ಪುರಸಭೆ, ಪಾಲಿಕೆ ಕಾರ್ಯವೈಖರಿಯನ್ನು ಪರಾಮರ್ಶೆ ನಡೆಸಲಾಗುವುದು. ಆಡಳಿತ ಎಚ್ಚರಿಕೆ ಸ್ಥಿತಿಯಲ್ಲಿದೆಯೇ, ಇಲ್ಲವೇ ಎಂಬುದನ್ನು ಗಮನಿಸಲಾಗುವುದು ಎಂದು ತಿಳಿಸಿದರು.
ತುಮಕೂರು ನಗರದ 2 ನೇ ಹಂತದ ಒಳಚರಂಡಿ ಕಾಮಗಾರಿಯನ್ನು ಎಲ್ ಅಂಡ್ ಟಿ ಸಂಸ್ಥೆಗೆ ವಹಿಸಲಾಗಿದ್ದು, ಅನಿರೀಕ್ಷಿತವಾಗಿ ಭೇಟಿ ನೀಡಿ ಪರಿಶೀಲಿಸಲಾಗುವುದು. ಪಾರದರ್ಶಕ ಕಾಮಗಾರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದರು. ಯಾವುದೇ ಕಾರಣಕ್ಕೂ ಮೊದಲ ಹಂತದ ಒಳಚರಂಡಿಯಲ್ಲಾದ ಅದ್ವಾನಗಳು ಮರುಕಳಿಸದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಕರೆ ನೀಡಿದ ಸಚಿವರು, ಅಧಿಕಾರಿ ರಾಜೀವ್ ಶುಕ್ಲಾ ಈ ಎಚ್ಚರಿಕೆ ವಹಿಸಿ, ಕಾಮಗಾರಿ ಗುಣಮಟ್ಟ ಕಾಪಾಡುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಸ್ಲಂಗಳನ್ನು ಸೃಷ್ಟಿಸುತ್ತಿದ್ದೇವೆ: ತಾವು ಕಳೆದ ಕೆಲ ದಿನಗಳ ಹಿಂದೆ ತುಮಕೂರು ನಗರಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೆ. ನಗರ ವ್ಯವಸ್ತಿತವಾಗಿ ಬೆಳೆದಿಲ್ಲ. ಸ್ಲಂಗಳು ಅಲ್ಲಲ್ಲಿ ಇವೆ. ಮೂಲಭೂತ ಸೌಲಭ್ಯ ಒದಗಿಸುವಲ್ಲಿ ವಿಫಲವಾಗಿರುವುದು ಕಂಡು ಬಂದಿದೆ. ಪರಿಣಾಮ ಸ್ಲಂಗಳು ಹಾಗೆ ಇವೆ. ಸ್ಲಂಗಳ ಸೃಷ್ಟಿಗೆ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು.
ಎರಡನೇ ಕೈಗಾರಿಕಾ ಕೇಂದ್ರ: ತುಮಕೂರು ಜಿಲ್ಲೆ ಬೆಂಗಳೂರಿನ ನಂತರ ಎರಡನೇ ಕೈಗಾರಿಕಾ ಕೇಂದ್ರವಾಗುವ ಎಲ್ಲ ಅವಕಾಶವಿದೆ. ಈಗಾಗಲೇ 12,500 ಎಕರೆ ಪ್ರದೇಶ ಕೈಗಾರಿಕೆಗೆ ಮೀಸಲಾಗಿದೆ. 1 ಲಕ್ಷ ಕೋಟಿ ರು. ವೆಚ್ಚದಲ್ಲಿ ಯೋಜನೆ ಸಿದ್ದಪಡಿಸಲಾಗಿದ್ದು, ಕೈಗಾರಿಕಾ ವಲಯ ನಿರ್ಮಾಣವಾಗಲಿದೆ. ರಾಜ್ಯ ಸರ್ಕಾರ ಎಲ್ಲ ರೀತಿಯಿಂದಲೂ ಸಹಕರಿಸಲಿದೆ ಎಂದು ತಿಳಿಸಿದರು.
ಬೆಂಗಳೂರು ಒತ್ತಡ ತಗ್ಗಿಸಬೇಕಿದೆ: ಬೆಂಗಳೂರು ನಿರೀಕ್ಷೆಗೂ ಮೀರಿ ಬೆಳೆದಿದ್ದು, ರಾಜಧಾನಿಯ ಒತ್ತಡವನ್ನು ತಗ್ಗಿಸುವ ನಿಟ್ಟಿನಲ್ಲಿ ಬೆಂಗಳೂರಿನ ಸುತ್ತಮುತ್ತ ಇರುವ ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು ಇತರೆ ನಗರಗಳಿಗೆ ಇನ್ನಷ್ಟು ಮೂಲಭೂತ ಸೌಲಭ್ಯ ಕಲ್ಪಿಸಲಾಗುವುದು. ಈ ನಿಟ್ಟಿನಲ್ಲಿ ಬೆಂಗಳೂರು ಸದರ್ನ್ ರೈಲನ್ನು ಮಂಡ್ಯ, ಬಂಗಾರಪೇಟೆ, ತುಮಕೂರು ಕಡೆಗೆ ವಿಸ್ತರಿಸಲಾಗುವುದು. ಇದರಿಂದ ಕನಿಷ್ಟ 25 ಲಕ್ಷ ಜನರಿಗೆ ಬೆಂಗಳೂರಿನಲ್ಲಿ ಉದ್ಯೋಗ, ವ್ಯವಹಾರವನ್ನು ದಿನನಿತ್ಯ ಮುಗಿಸಿ, ತಮ್ಮ ಊರುಗಳಿಗೆ ವಾಪಸ್ ತೆರಳಲು ಅವಕಾಶವಾಗಲಿದೆ. ಇದರಿಂದ ಸಹಜವಾಗೇ ಬೆಂಗಳೂರಿನ ಮೇಲಿನ ಒತ್ತಡ ಕಡಿಮೆಯಾಗಲಿದೆ ಎಂದರು.
ಸಂಸದ ಜಿ.ಎಸ್. ಬಸವರಾಜು, ತುಮಕೂರು ನಗರ ಶಾಸಕ ಡಾ. ರಫೀಕ್ ಅಹಮದ್, ಎಂಎಲ್ಸಿ ಡಾ.ಎಂ.ಆರ್. ಹುಲಿನಾಯ್ಕರ್, ಮೇಯರ್ ಗೀತಾ ರುದ್ರೇಶ್, ಉಪಮೇಯರ್ ಧನಲಕ್ಷ್ಮಿ ರವಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್. ಷಫಿ ಅಹಮದ್, ನಗರಪಾಲಿಕೆ, ಟೂಡಾ ಆಯುಕ್ತರು, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಚಾವ್ಲಾ ಇತರರು ಉಪಸ್ಥಿತರಿದ್ದರು.