ಅದ್ಧೂರಿ ಕಂಥಾ ಧಾರಣಾ ಮಹೋತ್ಸವ: ಶ್ರೀಈಶ್ವರಾನಂದ ಸ್ವಾಮೀಜಿ
ಚಿಕ್ಕನಾಯಕನಹಳ್ಳಿ: ಪಟ್ಟಣದ ಕುರುಬ ಜನಾಂಗದ ಆರಾಧ್ಯ ದೈವ ಮೂರು ಮಠಗಳ ದೇವರ ಕಂಥಾಧಾರಣಾ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕನಕ ಗುರುಪೀಠ ಹೊಸದುರ್ಗ ಶಾಖಾಮಠದ ಶ್ರೀಈಶ್ವರಾನಂದ ಸ್ವಾಮೀಜಿ ತಿಳಿಸಿದರು.
ಅವರು ಪಟ್ಟಣದ ಶ್ರೀಗುರುರೇವಣಸಿದ್ದೇಶ್ವರ ಮಠದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಶ್ರೀಗುರುರೇವಣಸಿದ್ಧೇಶ್ವರ, ಶ್ರೀಗುರು ಸಿದ್ಧರಾಮೇಶ್ವರ, ಶ್ರೀಸಿದ್ಧೇಶ್ವರ ಸ್ವಾಮಿ ಸೇರಿದಂತೆ ಮೂರು ಮಠಗಳ ದೇವರುಗಳಿಗೆ ಕಂಥಾ ಧಾರಣೆ ಸೇವೆ ಪ್ರಯುಕ್ತ, ಹೊಸ ಕಂಥಾ ಧಾರಣೆಗಾಗಿ ಕಡೂರು ಸಮೀಪದ ಹಟ್ಟಿಯೊಂದರಲ್ಲಿರುವ ಕುರಿಯಿಂದ ಬಂಡ(ತುಪ್ಪಟ)ವನ್ನು ಮಠದ ಪರಂಪರೆಯಲ್ಲಿ ಹಿಂದಿನಿಂದ ನಡೆಸಿಕೊಂಡು ಬರುತ್ತಿರುವ ಬುಡಕಟ್ಟಿಗೆ ಸೇರಿದ ಮನೆತನದವರು ಹೊಸ ಕಂಥಾ(ಕರಿಕಂಬಳಿ)ನೇಯುತ್ತಾರೆ. ನಂತರ ಮಾರ್ಚ್ 9ರಂದು ರಾತ್ರಿ ಮೂರು ಮಠದ ಉತ್ಸವ ಮೂರ್ತಿಗಳನ್ನು ಹೊತ್ತು ಕಾಲ್ನಡಿಗೆಯಲ್ಲಿ ವಜ್ರದ ಪುಣ್ಯ ಕ್ಷೇತ್ರಕ್ಕೆ ದಯಮಾಡಿಸುತ್ತಾರೆ. ಅಲ್ಲಿನ ಮಜ್ಜನ ಬಾವಿಯಲ್ಲಿ ಗಂಗಾಸ್ನಾನವಾದನಂತರ ಹಳೆಯ ಕಂಥಾಯನ್ನು ಹಾಸಿ ಗದ್ದಿಗೆ ಮಾಡಿ, ಗಣಪತಿ ಪೂಜೆ, ಗಂಗಾಪೂಜೆ, ಪುಣ್ಯಾಹ, ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿ ನಡೆಯುವುದು. ಮಾರ್ಚ್ 10ರಂದು ಬೆಳಿಗ್ಗೆ 6ರಿಂದ 6.30ಕ್ಕೆ ಶುಭ ಕುಂಭಲಗ್ನದಲ್ಲಿ ಮೂರು ದೇವರುಗಳಿಗೆ ಕಂಥಾಧಾರಣೆ ಮಾಡಲಾಗುವುದು. ತದನಂತರ ನಡೆಮುಡಿ ಕಲಶಗಳೊಂದಿಗೆ ತೀರ್ಥರಾಮೇಶ್ವರ ಸ್ವಾಮಿಯ ಸನ್ನಿಧಿಗೆ ದಯಮಾಡಿಸಿ, ವಿಶೇಷ ಪುಜಾದಿಗಳು, ದಾಸೋಹ ಮುಗಿದ ನಂತರ ಪಟ್ಟಣದ ಶ್ರೀರೇವಣ ಸಿದ್ಧೇಶ್ವರ ಮಠಕ್ಕೆ ಎಲ್ಲಾ ದೇವರು ಪುರಪ್ರವೇಶ ಮಾಡಿ ಶ್ರೀರೇವಣಸಿದ್ದೇಶ್ವರ ಮಠದಲ್ಲಿ ಗದ್ದಿಗೆಯಾಗುವವು.ಮಾ.11ರಂದು ಬೆಳಿಗ್ಗೆ 8.30ಕ್ಕೆನಗರದ ರಾಜಬೀದಿಗಳಲ್ಲಿ 3 ದೇವರ ಉತ್ಸವ ಏರ್ಪಡಿಸಲಾಗಿದೆ. ಈ ಉತ್ಸವದ ಸಾನಿಧ್ಯವನ್ನು ಜನಾಂಗದ ಜಗದ್ಗುರುಗಳಾದ ಶ್ರೀನಿರಂಜನಾನಂದ ಪುರಿ ಸ್ವಾಮೀಜಿ, ಶ್ರೀಈಶ್ವಾರನಂದ ಪುರಿ ಸ್ವಾಮೀಜಿ, ಶ್ರೀಸಿದ್ಧರಾಮೇಶ್ವರ ಪುರಿ ಸ್ವಾಮೀಜಿ, ಶ್ರೀಶಿವಾನಂದಪುರಿ ಸ್ವಾಮೀಜಿ ವಹಿಸುವರು.
ಕಂಥಾಧಾರಣಾ ಜಾತ್ರೆ ಪ್ರಯುಕ್ತ 13ರಂದು ರಾತ್ರಿ ಪಟ್ಟಣದ ಹೊಸಬೀದಿಯಲ್ಲಿ ಶ್ರೀಗುರುಶಾಂತವಿಜಯ,ಅಥವಾ ಟಗರುಪವಾಡ ಎಂಬ ಪೌರಾಣಿಕ ನಾಟಕವನ್ನು ಏರ್ಪಡಿಸಲಾಗಿದೆ.