ಉಜ್ವಲ ಭವಿಷ್ಯತ್ತಿಗೆ ಭಾಗ್ಯಲಕ್ಷ್ಮಿ ಯೋಜನೆ
ತಿಪಟೂರು: ಹೆಣ್ಣು ಮಕ್ಕಳ ಬಗ್ಗೆ ಸಮಾಜದಲ್ಲಿರುವ ತಾತ್ಸರ ಮನೋಭಾವನೆಗಳನ್ನು ತೊಡೆದು ಹಾಕಲು ಹಾಗೂ ವಿದ್ಯಾಭ್ಯಾಸ ಮತ್ತು ಉಜ್ವಲ ಭವಿಷ್ಯತ್ತಿಗೆ ಸಹಾಯವಾಗಲೆಂದು ಭಾಗ್ಯಲಕ್ಷ್ಮಿ ಯೋಜನೆ ಸೇರಿದಂತೆ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.
ಪಟ್ಟಣದ ಸ್ತ್ರೀಶಕ್ತಿ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಭಾಗ್ಯಲಕ್ಷ್ಮಿ ಬಾಂಡ್, ಆದಾಯೋತ್ಪನ್ನ ಚಟುವಟಿಕೆಯಲ್ಲಿ ಸ್ತ್ರೀಶಕ್ತಿ ಗುಂಪುಗಳಿಗೆ ಪ್ರೋತ್ಸಾಹ ಧನ ಹಾಗೂ ಉದ್ಯೋಗಿನಿ ಫಲಾನುಭವಿಗಳಿಗೆ ಸಹಾಯಧನದ ಚೆಕ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸ್ತ್ರೀಶಕ್ತಿ ಯೋಜನೆಯು ರಾಜ್ಯದಲ್ಲಿಯೇ ಯಶಸ್ವಿಯಾಗಿ ಅನುಷ್ಠಾನಗೊಂಡಿದ್ದು, ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಕ್ರಾಂತಿಕಾರಕ ಹೆಜ್ಜೆಯಾಗಿದೆ. ಈ ಸಾಲಿನ ಬಜೆಟ್ನಲ್ಲಿ ಮುಖ್ಯಮಂತ್ರಿಗಳು ಸುತ್ತುನಿಧಿಯನ್ನು ರು. 5ಸಾವಿರದಿಂದ 25 ಸಾವಿರದವರೆಗೆ ನೀಡಲು ಘೋಷಿಸಿದ್ದು, 5ವರ್ಷಗಳವರೆಗೆ ಈ ಸಹಾಯಧನ ನೀಡಲಾಗುವುದು. ಮಹಿಳೆಯರು ಸ್ವಾವಲಂಬಿಗಳಾಗಲು ಉದ್ಯೋಗಿನಿ ಯೋಜನೆ ಉಪಯುಕ್ತವಾಗಿದ್ದು ಸದುಪಯೋಗಪಡಿಸಿಕೊಳ್ಳಬೇಕೆಂದರು.
ಮುಖ್ಯವಾಹಿನಿಗೆ ಬನ್ನಿ: ತಾ.ಪಂ.ಅಧ್ಯಕ್ಷೆ ಶಿವಗಂಗಮ್ಮ ಮಾತನಾಡಿ ಮಹಿಳೆಯರು ಸ್ತ್ರೀಶಕ್ತಿ ಸಂಘಗಳ ಮೂಲಕ ಸಂಘಟಿತರಾಗಿ ಕುಟುಂಬಗಳನ್ನು ನಿರ್ವಹಣೆ ಮಾಡುವ ಜೊತೆಗೆ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಹೆಣ್ಣು ಮಕ್ಕಳಿಗಾಗಿ ಜಾರಿಗೆ ತಂದಿರುವ ಭಾಗ್ಯಲಕ್ಷ್ಮಿ ಯೋಜನೆಯನ್ನು ಅವರ ವಿದ್ಯಾಭ್ಯಾಸಕ್ಕೆ ಬಳಸಿಕೊಳ್ಳುವ ಮೂಲಕ ವಿದ್ಯಾವಂತರನ್ನಾಗಿ ಮಾಡಿ ಸಮಾಜದಲ್ಲಿ ಸಮಾನತೆಯನ್ನು ಪಡೆಯಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ 35 ಫಲಾನುಭವಿಗಳಿಗೆ ಭಾಗ್ಯಲಕ್ಷ್ಮಿ ಬಾಂಡ್, 15ಗುಂಪುಗಳಿಗೆ ಸ್ತ್ರೀಶಕ್ತಿ ಆದಾಯೋತ್ಪನ್ನ ಚಟುವಟಿಕೆಗಳಿಗೆ ರು. 5ಸಾವಿರ ಪ್ರೋತ್ಸಾಹ ಧನ, ಅಧಿಕ ಉಳಿತಾಯ ಮಾಡಿದ ಒಂದು ಸ್ತ್ರೀಶಕ್ತಿ ಗುಂಪಿಗೆ ರು. 20ಸಾವಿರ ಪ್ರೋತ್ಸಾಹ ಧನ ಹಾಗೂ 15 ಫಲಾನುಭವಿಗಳಿಗೆ ಉದ್ಯೋಗಿನಿ ಯೋಜನೆಯ ಸಹಾಯಧನದ ಚೆಕ್ಗಳನ್ನು ವಿತರಿಸಲಾಯಿತು.
ಸಿಡಿಪಿಓ ಓಂಕಾರಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ತಹಸೀಲ್ದಾರ್ ಮಂಜುನಾಥ್, ತಾ.ಪಂ.ಕಾರ್ಯನಿರ್ವಾಹಣಾಧಿಕಾರಿ ದಿಬ್ಬದಮನಿ, ತಾ.ಪಂ. ಸದಸ್ಯರಾದ ಜಯಣ್ಣ, ರಾಮಯ್ಯ, ತಾ.ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ನವೀನ ಮತ್ತಿತರರಿದ್ದರು. ಮೇಲ್ವಿಚಾರಕಿಯರಾದ ಸುವರ್ಣಮ್ಮ ಪ್ರಾರ್ಥಿಸಿ, ಸುಂದರಮ್ಮ ಸ್ವಾಗತಿಸಿ, ಪ್ರೇಮ ನಿರೂಪಿಸಿ, ಲೀಲಾಬಾಯಿ ವಂದಿಸಿದರು.