ಕೊಳೆಗೇರಿಗಳಿಗೆ ಪಾಲು ಮೀಸಲಿಡಲು ಮನವಿ
ತುಮಕೂರು: ಮಹಾನಗರಪಾಲಿಕೆಯ ಅನುದಾನದಲ್ಲಿ ಕೊಳೆಗೇರಿಗಳಿಗೆ ಪಾಲು ಮೀಸಲಿಡುವಂತೆ ಕೊಳೆಗೇರಿ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು ನಗರಾಭಿವೃದ್ಧಿ ಸಚಿವ ವಿನಯಕುಮಾರ ಸೊರಕೆಗೆ ಮನವಿ ಮಾಡಿದ್ದಾರೆ.
ಈ ಸಂಬಂಧ ತುಮಕೂರಿಗೆ ಆಗಮಿಸಿದ್ದ ಸಚಿವರಿಗೆ ಎ. ನರಸಿಂಹಮೂರ್ತಿ, ಸೈಯದ್ ಅಲ್ತಾಪ್, ಶೆಟ್ಟಾಳಯ್ಯ, ರಾಮಯ್ಯ ಮತ್ತು ವೀರಮ್ಮ ಮುಂತಾದವರು ಮನವಿ ಸಲ್ಲಿಸಿದರು.
ತುಮಕೂರು ನಗರದ ಜನಸಂಖ್ಯೆಯಲ್ಲಿ ಶೇ 40 ರಷ್ಟು ಜನರು ಕೊಳೆಗೇರಿಗಳಲ್ಲಿ ವಾಸಮಾಡುತ್ತಿದ್ದಾರೆ. ಇವರೆಲ್ಲ ಪರಿಶಿಷ್ಟಜಾತಿ, ಪಂಗಡ, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರಿಗೆ ಸೇರಿದವರು ಆಗಿದ್ದಾರೆ. ತುಮಕೂರಿನಲ್ಲಿ 54 ಕೊಳಚೆ ಪ್ರದೇಶಗಳಿವೆ. ಇವುಗಳಲ್ಲಿ 22 ಕೊಳಚೆ ಪ್ರದೇಶಗಳು ಮಾತ್ರ ಘೋಷಣೆಯಾಗಿವೆ.
ಉಳಿದ 32 ಕೊಳಚೆ ಪ್ರದೇಶಗಳು ಅಘೋಷಿತ ಕೊಳಚೆ ಪ್ರದೇಶಗಳಾಗಿವೆ. ಈ ಕೊಳಚೆ ಪ್ರದೇಶಗಳಿಗೆ ಯಾವುದೆ ಮೂಲಭೂತ ಸೌಲಭ್ಯಗಳು ಇಲ್ಲದೆ ಅತಂತ್ರ ಸ್ಥಿಯಲ್ಲಿ ಅಭದ್ರ ಜೀವನ ನಡೆಸುತ್ತಿದ್ದಾರೆ. 2013 ರಲ್ಲಿ ತುಮಕೂರು ನಗರ ಸಭೆಯನ್ನು ನಗರ ಪಾಲಿಕೆಯನ್ನಾಗಿ ಘೊಷಿಸಿರುವ ಕ್ರಮ ಸ್ವಾಗತಾರ್ಹ. 2011 ರ ಜನಗಣತಿಯನ್ವಯ ಪಾಲಿಕೆಯಾಗಿ ಪರಿವರ್ತನೆಯಾಗಿದೆ. ತುಮಕೂರು ನಗರದ ಜನಸಂಖ್ಯೆಯಲ್ಲಿ ಶೇ 40 ರಷ್ಟು ಕೊಳಚೆ ಪ್ರದೇಶಗಳಲ್ಲಿ ವಾಸಮಾಡುತ್ತಿದ್ದಾರೆ ಎಂದರು.
ಸ್ವಾಗತ: ತುಮಕೂರು ಮಹಾನಗರ ಪಾಲಿಕೆಗೆ ನಗರೋತ್ಥಾನ ಯೋಜನೆಯಾಡಿ 100 ಕೋಟಿ ರು.ಗಳನ್ನು ನೀಡುತ್ತಿರುವುದು ತುಮಕೂರು ಸ್ಲಂ ಸಮಿತಿಯು ಸ್ವಾಗತಿಸುತ್ತದೆ. ಈ 100 ಕೋಟಿ ಅನುದಾನದಲ್ಲಿ ನಗರದ ಜನಂಖ್ಯೆಯಲ್ಲಿ ಶೇ 40 ರಷ್ಟುಯಿರುವ ಕೊಳಗೇರಿ ನಿವಾಸಿಗಳ ಭೂಮಿ, ವಸತಿ ಮತ್ತು ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ಚರಂಡಿ, ಶೌಚಾಲಯ, ವಿದ್ಯುತ್, ಆರೋಗ್ಯ ಮುಂತಾದ ಸೌಲಭ್ಯಗಳನ್ನು ಒದಗಿಸಲು 30 ಕೋಟಿ ರು.ಗಳನ್ನು ಮೀಸಲಿಸಬೇಕೆಂದು ಮನವಿ ಮಾಡಿದ್ದಾರೆ. ರಾಜೀವ್ ಆವಾಸ್ ಯೋಜನೆಯಲ್ಲಿ ಆಯ್ಕೆಯಾಗುವ ಫಲಾನುಭಾವಿಗಳ, ಫಲಾನುಭವಿಗಳ ವಂತಿಕೆ ಶುಲ್ಕವನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದವಾರಿಗೆ ಶೇ 22.75, ಹಿಂದುಳಿದ, ಅಲ್ಪಸಂಖ್ಯಾತರಿಗೆ ಶೇ 7.25 ರ ಪಾಲಿಕೆಯ ಅನುದಾನದಲ್ಲಿ ನೀಡಬೇಕೆಂದು ಕೋರಿದ್ದಾರೆ.
10ಕೋಟಿ ನೀಡಿ: ಕೊಳೆಗೇರಿ ಜನರಿಗೆ ಪುನರ್ ವಸತಿ ಕಲ್ಪಸಲು ನಗರ ಪರಿಮಿತಿಯಲ್ಲಿ 30 ಎಕರೆ ಭೂಮಿ ಖರೀದಿಸಿ ಮೀಸಲಿಡಲು 10 ಕೋಟಿ ರು.ಗಳನ್ನು ನೀಡಬೇಕು.
ತುಮಕೂರು ನಗರದಲ್ಲಿನ ಬೆಳಗುಂಭ ರಸ್ತೆ, ರಂಗಮಂದಿರ, ಹಿಂಭಾಗ ಸ್ಲಂ, ಶಾಂತಿ ಹೋಟೆಲ್ ಹಿಂಭಾಗ ಸ್ಲಂ ವಿನಾಯಕ ನಗರ ಸ್ಲಂ, ಬಂಡೆಪಾಳ್ಯ ಸ್ಲಂಗಳನ್ನು ಶೀಘ್ರವಾಗಿ ಘೋಷಿಸಿಸಲು ನಗರಪಾಲಿಕೆ, ಕೊಳೆಗೇರಿ ಅಭಿವೃದ್ಧಿ ಮಂಡಳಿಗೆ ಆದೇಶ ನೀಡಬೇಕು ಮತ್ತು ರಾಜೀವ್ ಆವಾಸ್ ಯೋಜನೆಯಾಡಿಯಲ್ಲಿ ಮಂಜೂರು ಆಗಿರುವ 1200 ಮನೆಗಳಲ್ಲಿ ಮೊದಲ ಆದ್ಯತೆಯಲ್ಲಿ ಮನೆ ನಿರ್ಮಿಸಿ ಕೊಡಲು ಚಾಲನೆ ನೀಡಬೇಕು. ಮಾರಿಯಮ್ಮ ನಗರ ಗುಂಡ್ಲಮ್ಮನ ಕೆರೆ ಕೋಡಿ ಸ್ಲಂ, ಸಂಪದಾನೆ ಮಠ, ಹೆಳ್ಳಾರಬಂಡೆ, ಭಾರತಿ ನಗರ ಸ್ಲಂಗಳನ್ನು ಘೊಷಣೆ ಮಾಡಲು ನಗರಾಭಿವೃದ್ಧಿ ಕೋಶ ಮತ್ತು ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಆದೇಶಿಸಬೇಕು ಮತ್ತು ಇರುವ ಜಾಗದಲ್ಲಿ ರಾಜೀವ್ ಆವಾಸ್ ಯೋಜನೆಯಾಡಿಯಲ್ಲಿ ಮನೆ ಕಟ್ಟಿಕೊಳ್ಳಲು ಅವಕಾಶ ಮಾಡಿಕೊಡಲು ಸಂಬಂಧಿಸದವರಿಗೆ ಆದೇಶ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಮನವಿ ಸ್ವೀಕರಿಸಿ ಮಾತನಾಡಿದ ಸಚಿವರು ಮಾರ್ಚ್ 3 ರಂದು ಬೆಂಗಳೂರಿನ ಸಚಿವಾಲಯದಲ್ಲಿ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಮತು ಇಲಾಖೆಯ ಮುಖ್ಯಸ್ಥರೊಂದಿಗೆ ಹಾಗೂ ಸ್ಲಂಜನಾಂದೋಲನಾ-ಕರ್ನಾಟಕದ ಪದಾಧಿಕಾರಿಗಳೊಂದಿಗೆ ಸಭೆ ಮಾಡಲಾಗುವುದೆಂದು ತಿಳಿಸಿದರು.