ಸಮಸ್ಯೆಗಳ ಬಗ್ಗೆ ಕೊರಗುವುದನ್ನು ಬಿಟ್ಟು ಧೈರ್ಯವಾಗಿ ಎದುರಿಸಿ
ಕೊರಟಗೆರೆ: ಜೀವನದಲ್ಲಿ ಎದುರಾದ ಸಮಸ್ಯೆಗಳ ಬಗ್ಗೆ ಕೊರಗುವುದನ್ನು ಬಿಟ್ಟು ಅದನ್ನು ಧೈರ್ಯದಿಂದ ಎದುರಿಸಿ ಅದನ್ನೇ ಮೆಟ್ಟಿಲಾಗಿ ಮಾಡಿಕೊಂಡು ಅಭಿವೃದ್ಧಿ ಹೊಂದಬೇಕೆಂದು ಸಾಹಿತಿ ಡಾ.ಜಯಪ್ರಕಾಶ್ ನಾಗತಿಹಳ್ಳಿ ತಿಳಿಸಿದರು.
ಅವರು ತಾಲೂಕಿನ ಸಿದ್ದರಬೆಟ್ಟದ ರಂಭಾಪುರಿ ಖಾಸಾ ಶಾಖಾ ಮಠದಲ್ಲಿ ಏರ್ಪಡಿಸಿದ್ದ ಧರ್ಮ ಹಾಗೂ ಜಾಗೃತಿ ಶಿಬಿರದಲ್ಲಿ ಸೋಲುಗಳಿಗೆ ಅಂಜದಿರಿ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.
ಮನುಷ್ಯ ಪ್ರಕೃತಿಯಲ್ಲಿ ಮಳೆಗಾಲ, ಚಳಿಗಾಲ, ಬೇಸಿಗೆ ಕಾಲವನ್ನು ಎದುರಿಸುವುದು ಬುದ್ಧಿವಂತಿಕೆಯಿಂದ ಮಾತ್ರ ಎಂಬ ಅರಿವು ಇರಲಿ, ಮೆದುಳಿಗೆ ಬೇಕಾದನ್ನು ಸಂಗ್ರಹಿಸುವ ಅವಕಾಶ ನೀಡಬೇಕೆ ಹೊರತು ಸ್ಥಗಿತಗೊಳಿಸಬಾರದು ಎಂದರು. ಮನುಷ್ಯ ಜ್ಞಾನಾಭಿವೃದ್ಧಿ, ಜೀವನ ಕೌಶಲ್ಯ, ಸಾಧನೆ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಾಗ ಗೆಲವಿನ ದಾರಿಯನ್ನು ತೋರಿಸುತ್ತದೆ ಸೋತವರನ್ನು ಅನುಕಂಪದಿಂದ ನೋಡಿ ಗೆದ್ದವರನ್ನು ಪ್ರಶಂಸಿಸುವ ಗುಣ ಬೆಳಸಿಕೊಳ್ಳಬೇಕು. ಕನಸುಗಳು ಗೆಲುವಿನ ಹತ್ತಿರ ಕರೆದುಕೊಂಡು ಹೋಗುತ್ತದೆ, ವಿಶಾಲ ಮನೋಭಾವ ಬೆಳಸಿಕೊಳ್ಳಬೇಕು ಎಂದರು. ಸಮಾಜದಲ್ಲಿ ಪ್ರತಿಯೊಬ್ಬರು ತೂಕವಾಗಿ ಮಾತನಾಡಿದರೆ ಅಂತಹ ಮಾತಿಗೆ ಬೆಲೆ ಬರುತ್ತದೆ. ಜೊತೆಯಲ್ಲಿ ನಮಗೂ ಗೌರವ ಬರುತ್ತದೆ. ಸಮಯದ ನಿರ್ವಹಣೆಯಿಂದ ಅರ್ಧ ಕೆಲಸ ಮುಗಿದಂತೆ ಸಂದರ್ಭಕ್ಕೆ ತಕ್ಕನಾಗಿ ವರ್ತಿಸುವುದನ್ನು ಕಲಿಯಬೇಕು. ಆಗುವುದಿಲ್ಲ ಎಂದು ಗೊತ್ತಿದ್ದರೂ ಸುಮ್ಮನಿರಬಾರದು. ದೃಶ್ಯ ಮಾಧ್ಯಮದ ಹಾವಳಿಯಿಂದ ಗಂಡ ಹೆಂಡತಿ, ತಂದೆ ತಾಯಿಯರಿಲ್ಲಿ, ಹಿರಿಯರಲ್ಲಿ ನಂಬಿಕೆ, ಗೌರವ ಮರೆಯಾಗುತ್ತಿದೆ. ನಮ್ಮಲ್ಲಿನ ಕಷ್ಟಗಳನ್ನು ಹೇಳಿಕೊಳ್ಳುವ ಜನ ಸಿಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.