ಆರ್ಟಿಇ ಯೋಜನೆ ಪರಿಷ್ಕೃತ ಆದೇಶಕ್ಕೆ ಪೋಷಕರ ಆಕ್ರೋಶ
ಕುಣಿಗಲ್: ಆರ್ಟಿಇ ಯೋಜನೆಯ ಪರಿಷ್ಕೃತ ಆದೇಶದಂತೆ ಸ್ಥಳೀಯರಿಗೆ ಮೊದಲ ಆದ್ಯತೆಯಿಂದಾಗಿ ಗ್ರಾಮಾಂತರಪ್ರದೇಶದ ಪೋಷಕರಿಗೆ, ಮಕ್ಕಳಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಪೋಷಕರು ಕೆಲಕಾಲ ಆರ್.ಟಿ.ಇ ಪ್ರಕ್ರಿಯೆ ತಡೆಹಿಡಿದ ಘಟನೆ ಸರ್ವೋದಯ ಪ್ರೌಢಶಾಲೆಯಲ್ಲಿ ನಡೆಯಿತು.
2014-15ನೇ ಶೈಕ್ಷಣಿಕ ಸಾಲಿಗೆ ಆರ್.ಟಿ.ಇ ಅಡಿಯಲ್ಲಿ ವಿದ್ಯಾರ್ಥಿಗಳ ಆಯ್ಕೆಗೆಮಂಗಳವಾರ ಪಟ್ಟಣದ ಸರ್ವೋದಯ ಶಾಲೆಯಲ್ಲಿ ಇಸಿಒ (ಶಿಕ್ಷಣ ಸಂಯೋಜಕ) ಸತೀಶಕುಮಾರ್, ನೋಡಲ್ ಅಧಿಕಾರಿ ಅಜಿತಕುಮಾರ, ಶಾಲೆಯ ಪ್ರಾಚಾರ್ಯ ಶಿವಪ್ಪ ಸಿದ್ಧತೆ ನಡೆಸಿದ್ದರು. ಶಾಲೆಯಲ್ಲಿ ನಿಯಮಾನುಸಾರ ಲಭ್ಯಇರುವ 14ಸೀಟುಗಳಿಗೆ 144 ಅರ್ಜಿಗಳು ಬಂದಿದ್ದರಿಂದ, ಸರ್ಕಾರ ಆರ್.ಟಿ.ಇ ಅನುಷ್ಠಾನದ ನಿಟ್ಟಿನಲ್ಲಿ ಹೊರಡಿಸಿರುವ ಸುತ್ತೋಲೆಯಂತೆ ಗ್ರಾಮಾಂತರ ಪ್ರದೇಶದಲ್ಲಿ ಶಾಲೆಯ ಹತ್ತಿರದ ಒಂದು ಕಿಮೀ, ನಗರಪ್ರದೇಶದಲ್ಲಿ ಆಯಾ ಸ್ಥಳೀಯ ಪ್ರಾಧಿಕಾರಗಳಾದ ಪುರಸಭೆ, ನಗರಸಭೆ ವಾರ್ಡ್ನ ಶಾಲೆಗೆ ಸಮೀಪದವರಿಗೆ ಮೊದಲ ಪ್ರಾಶಸ್ತ್ಯ ನೀಡಿ ನಂತರ ಬೇರೆ ಪ್ರದೇಶದವರಿಗೆಂದು ತಿಳಿಸಿ ಪ್ರಕ್ರಿಯೆಗೆ ಮುಂದಾದರು.
ಕೆರಳಿಸಿತು: 144 ಅರ್ಜಿಗಳ ಪೈಕಿ ಬಹುತೇಕರು ಗ್ರಾಮಾಂತರ ಪ್ರದೇಶದವರು ಮತ್ತು ಪಟ್ಟಣದ ಬೇರೆ ವಾರ್ಡ್ನವರಾಗಿದ್ದು, ಇದು ಅವರನ್ನು ಕೆರಳಿಸಿತು. ಪೋಷಕರಾದ ಏಜಾಸ್, ಕೃಷ್ಣಪ್ಪ, ಶ್ರೀನಿವಾಸ್, ಮಮತಾ ಇತರರು ಅರ್ಜಿಸಲ್ಲಿಸಲು ಆದಾಯ ಪ್ರಮಾಣ ಮತ್ತು ಜಾತಿ ಪ್ರಮಾಣಪತ್ರ ಸಲ್ಲಿಸಲು ಹಲವು ದಿನಗಳಕಾಲ ಶ್ರಮಪಟ್ಟಿದ್ದೇವೆ. ಆಗ ಈ ನಿಯಮ ಹೇಳಿರಲಿಲ್ಲ. ಈಗ ಆಯ್ಕೆ ಸಂದರ್ಭದಲ್ಲಿ ಈ ರೀತಿ ಹೇಳುವುದು ಸರಿಯಲ್ಲ ಎಂದು ಅಧಿಕಾರಿಗಳೊಂದಿಗೆ ವಾಗ್ವಾದಕ್ಕೆ ಇಳಿದರು. ಈ ನಿಯಮದಿಂದ ಗ್ರಾಮಾಂತರ ಪ್ರದೇಶದ ಜನತೆಗೆ ಬಹಳ ತೊಂದರೆಯಾಗುತ್ತೆ. ಕೆಲವರು ಗ್ರಾಮಾಂತರ ಪ್ರದೇಶದಲ್ಲಿದ್ದರೂ ಅಕ್ರಮವಾಗಿ ಪುರಸಭೆಯಿಂದ ವಾಸಸ್ಥಳ ಪತ್ರ ಪಡೆದು, ಯೋಜನೆಯ ಲಾಭ ಪಡೆಯಲು ಮುಂದಾಗುತ್ತಿದ್ದಾರೆ. ಪುರಸಭೆಯವರು ಪೂರ್ವಪರಯೋಚಿಸದೆ ವಾಸಸ್ಥಳ ಪತ್ರ ನೀಡುತ್ತಾ ಗೊಂದಲಕ್ಕೆ ಕಾರಣವಾಗಿದ್ದಾರೆ. ಗ್ರಾಮಾಂತರ ಪ್ರದೇಶದಲ್ಲಿ ಉತ್ತಮ ಶಾಲೆಗಳಿಲ್ಲ, ಪಟ್ಟಣ ಪ್ರದೇಶದ ಶಾಲೆಗಳಿಗೆ ಅರ್ಜಿಹಾಕೋಣ ಎಂದರೆ ಈ ನಿಯಮದಿಂದ ನಾವು ವಂಚಿತರಾಗುತ್ತಿದ್ದು ಕೂಡಲೆ ಅವೈಜ್ಞಾನಿಕ ಪದ್ಧತಿ ಕೈಬಿಟ್ಟು ಎಲ್ಲ ಅರ್ಜಿಗಳನ್ನು ಪರಿಗಣಿಸಿ ಲಾಟರಿ ಮೂಲಕ ಆಯ್ಕೆ ಮಾಡುವಂತೆ ಇಲ್ಲವಾದಲ್ಲಿ ಆಯ್ಕೆ ಪ್ರಕ್ರಿಯೆ ಸ್ಥಗಿತಗೊಳಿಸುವಂತೆ ಆಗ್ರಹಿಸಿದರು. ಕೆಲಕಾಲ ಪ್ರಕ್ರಿಯೆಯನ್ನು ತಡೆ ಹಿಡಿದರು. ಪೋಷಕರನ್ನು ಮನ ಒಲಿಸಲು ಯತ್ನಿಸಿದ ಇಸಿಒ ಸತೀಶಕುಮಾರ್, ಸರ್ಕಾರದ ಸುತ್ತೋಲೆ ಪ್ರಕಾರ ಆಯ್ಕೆ ಮಾಡುತ್ತಿದ್ದು ಸಹಕರಿಸುವಂತೆ ಮನವಿ ಮಾಡಿದರು. ಲೆಕ್ಕಿಸದ ಪೋಷಕರು ಸ್ಥಳಕ್ಕೆ ಬಿಇಒ ಅವರನ್ನು ಕರೆಸುವಂತೆ ಪಟ್ಟುಹಿಡಿದರು.
ಸ್ಥಳಕ್ಕಾಗಮಿಸಿದ ಬಿಇಒ: ಸ್ಥಳಕ್ಕಾಗಮಿಸಿದ ಬಿಇಒ ಸಿದ್ದಯ್ಯ, ಪೋಷಕರ ಮನಒಲಿಸಿ, ಈ ನಿಯಮದಿಂದ ಸಾಕಷ್ಟು ಕಡೆ ಸಮಸ್ಯೆ ಕಾಡುತ್ತಿದ್ದು ಗ್ರಾಮಾಂತರ ಪ್ರದೇಶದ ಜನತೆಗೆ ತೊಂದರೆಯಾಗುತ್ತಿದೆ. ಆದರೆ ತಾಲೂಕಿನ 25 ಖಾಸಗಿ ಶಾಲೆಗಳ ಪೈಕಿ 10ಶಾಲೆಗಳು ನಗರಪ್ರದೇಶದಲ್ಲಿ,15 ಶಾಲೆಗಳು ಗ್ರಾಮಾಂತರ ಪ್ರದೇಶದಲ್ಲಿದ್ದು, 25 ಖಾಸಗಿ ಶಾಲೆಗಳಿಂದ 204 ಸೀಟಿಗೆ 1243 ಅರ್ಜಿಬಂದಿದೆ. ಪೋಷಕರ ಯಾವುದೇ ತಕರಾರು ಇದ್ದರೂ ಅದರ ಬಗ್ಗೆ ಮನವಿ ಸಲ್ಲಿಸಿದಲ್ಲಿ ಮೇಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವುದಾಗಿ, ಈಗ ಅಡಚಣೆ ಮಾಡಿದಲ್ಲಿ 14ಮಂದಿ ಯೋಜನೆಯಿಂದ ವಂಚಿತರಾಗುವ ಸಾಧ್ಯತೆ ಇರುವುದರಿಂದ ಪ್ರಕ್ರಿಯೆಗೆ ಸಹಕರಿಸುವಂತೆ ಮನವಿಮಾಡಿದರು. ಮುಂದಿನ ದಿನಗಳಲ್ಲಿ ಸರ್ಕಾರವೇ ಗ್ರಾಪಂ ವ್ಯಾಪ್ತಿಯಲ್ಲಿ ಎಲ್ಲಾ ಸವಲತ್ತುಗಳುಳ್ಳ ಒಂದೂವರೆ ಕೋಟಿ ರು.ವೆಚ್ಚದಲ್ಲಿ ಮಾದರಿ ಶಾಲೆ ಪ್ರಾರಂಭಿಸಲಿದ್ದು ಎಲ್ಲರಿಗೂ ಅನುಕೂಲವಾಗಲಿದೆ ಎಂದ ಮೇರೆಗೆ,ಪೋಷಕರು ಆಯ್ಕೆ ಪ್ರಕ್ರಿಯೆಗೆ ಸಹಕರಿಸಿದ್ದರಿಂದ 14 ವಿದ್ಯಾರ್ಥಿಗಳನ್ನು ಲಾಟರಿ ಮೂಲಕ ಮಕ್ಕಳಿಂದಲೇ ಆಯ್ಕೆ ಮಾಡಿಸಲಾಯಿತು.