ಇಂದಿನಿಂದ ಅಂಬಿಕಾದೇವಿ ಶಿವರಾತ್ರಿ ಮಹೋತ್ಸವ
ತಿಪಟೂರು: ತಾಲೂಕಿನ ನೊಣವಿನಕೆರೆ ಹೋಬಳಿ ಮಾಚಘಟ್ಟದ ಶ್ರೀ ಅಂಬಿಕಾದೇವಿ ಮತ್ತು ಶ್ರೀ ಚೌಡೇಶ್ವರಿದೇವಿಯವರ 14ನೇ ವರ್ಷದ ಶಿವರಾತ್ರಿ ಜಾತ್ರಾ ಮಹೋತ್ಸವ ಹಾಗೂ ಆನೆ ಅಂಬಾರಿ ಉತ್ಸವವು ಗುರುವಾರದಿಂದ ಮಾ.1ರವರೆಗೆ ವಿಜೃಂಭಣೆಯಿಂದ ನಡೆಯಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಜಿ.ಎಂ. ಪ್ರಕಾಶ್ ತಿಳಿಸಿದ್ದಾರೆ.
ಗುರುವಾರ ಗಣಪತಿ ಪೂಜೆ, ಧ್ವಜಾರೋಹಣ, ಶ್ರೀ ಅಮ್ಮನವರಿಗೆ ಸಹಸ್ರ ನಾಮಾರ್ಚನೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗವಿರುತ್ತದೆ.
ಫೆ.28ರಂದು ಬೆಳಿಗ್ಗೆ 9ಗಂಟೆಗೆ ಉಚಿತ ನೇತ್ರ ತಪಾಸಣೆ ಮತ್ತು ಆಪರೇಷನ್ ಶಿಬಿರ ಆಯೋಜಿಸಲಾಗಿದ್ದು, ಗ್ರಾಮಾಂತರ ಮಟ್ಟದಲ್ಲಿ ನೃತ್ಯ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಗುವುದು. ಅಂದೇ ಮಧ್ಯಾಹ್ನ 3ಗಂಟೆಗೆ ಧಾರ್ಮಿಕ ಸಭೆ ನಡೆಯಲಿದ್ದು, ಸಾನಿಧ್ಯವನ್ನು ತಮ್ಮಡಿಹಳ್ಳಿಯ ಅಭಿನವ ಮಲ್ಲಿಕಾರ್ಜುನದೇಶಿಕೇಂದ್ರ ಸ್ವಾಮೀಜಿ ವಹಿಸಲಿದ್ದು, ಶಾಸಕ ಕೆ.ಷಡಕ್ಷರಿ, ಮಾಜಿ ಶಾಸಕ ನಾಗೇಶ್, ಬಿಜೆಪಿ ಮುಖಂಡ ಲೋಕೇಶ್ವರ ಮತ್ತಿತರರು ಭಾಗವಹಿಸಲಿದ್ದಾರೆ. ಜೊತೆಗೆ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಸಂಜೆ. 6.30ಕ್ಕೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀ ಅಮ್ಮನವರ ಆನೆ ಅಂಬಾರಿ ಉತ್ಸವವು ವಿವಿಧ ಜಾನಪದ ಕಲಾತಂಡಗಳೊಂದಿಗೆ ಅದ್ಧೂರಿಯಾಗಿ ನಡೆಯಲಿದ್ದು. ಶ್ರೀ ದೇವಿ ಮಹಾತ್ಮೆ ಪಾರಾಯಣ ಎಂಬ ಯಕ್ಷಗಾನ ನಡೆಯಲಿದೆ.