ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕವಿಗಳು ಸಮಾಜದ ಅಧಿಕೃತ ಶಾಸಕರು

Rashmi Kasaragodu
Updated On : 27 Feb 2014, 1:55 am

ತುಮಕೂರು: ಕವಿಗಳು ಸಮಾಜದ ಅಧಿಕೃತ ಶಾಸಕರು. ಸಮಾಜದ ಓರೆಕೋರೆಗಳನ್ನು ಸೂಕ್ಷ್ಮವಾಗಿ ದಾಖಲಿಸುವ ಮೂಲಕ ಅವರು ಸಮುದಾಯದ ಸ್ವಾಸ್ಥ್ಯ ಕಾಪಾಡಬಲ್ಲವರಾಗಿರುತ್ತಾರೆ ಎಂದು ಕವಿ ಜರಗನಹಳ್ಳಿ ಶಿವಶಂಕರ್ ಅಭಿಪ್ರಾಯಪಟ್ಟರು.
ಅವರು ನಗರದಲ್ಲಿ ಶೈನಾ ಅಧ್ಯಯನ ಸಂಸ್ಥೆ ವತಿಯಿಂದ ನಡೆದ ಕಾವ್ಯಾಧ್ಯಯನ ಶಿಬಿರ ಉದ್ಘಾಟಿಸಿ ಮಾತನಾಡುತ್ತಾ ಕಾವ್ಯ ನಮ್ಮ ದಿನ ನಿತ್ಯದ ಸಂಗತಿಗಳಲ್ಲಿಯೇ ಅಡಗಿದೆ. ಕವಿಯಾದವನು ಹುಡುಕಾಡಬೇಕು. ಹುಡುಕಾಟದ ಪ್ರಕ್ರಿಯೆ ನಿರಂತರವಾದಾಗ ಕಾವ್ಯದ ಹುಟ್ಟುವಿಕೆ ಸಹಜವಾಗಿರುತ್ತದೆ. ಕವಿ ತನ್ನನ್ನು ವಿಮರ್ಶೆಗೊಳಪಡಿಸಿಕೊಳ್ಳಬೇಕು. ಕವಿತೆಗಳ ಸಂಖ್ಯೆಗಿಂತ ನಾನು ಬರೆದದ್ದು ಕವಿತೆಯೇ ಎನ್ನುವ ಅವಲೋಕನ ಮುಖ್ಯವಾಗಬೇಕು ಎಂದರು.
ಕವಿತೆ ದೀಪವೂ ಹೌದು, ಉರಿಯೂ ಹೌದು. ಸತ್ಯವಾದುದನ್ನು ಹೇಳುವ ಕಾವ್ಯ ಜನಮಾನಸದಲ್ಲಿ ನೆಲೆನಿಲ್ಲುತ್ತದೆ ಎಂದು ನುಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆ.ಬಿ. ಸಿದ್ದಯ್ಯ ಕಾವ್ಯಕ್ಕೆ ದೊಡ್ಡ  ಶಕ್ತಿ ಇದೆ. ಲೋಕಾನುಭವವನ್ನು ಒಳಗೊಂಡ ಕಾವ್ಯ ಎಂದೂ ಸಲ್ಲುತ್ತದೆ. ಕವಿಗಳು ಸೂಕ್ಷ್ಮಗ್ರಾಹಿಗಳಾಗಬೇಕು. ಪರಂಪರೆಯ ಅಧ್ಯಯನ ಜೊತೆಗೆ ಸಮಕಾಲೀನ ಕಾವ್ಯದಿಂದಲೂ ಅರಿವನ್ನು ದಕ್ಕಿಸಿಕೊಳ್ಳುವ ಪ್ರಯತ್ನವಾಗಬೇಕು ಎಂದರು.
ವೈಚಾರಿಕತೆಯನ್ನು ಮೈಗೂಡಿಸಿಕೊಂಡ ಕಾವ್ಯ ಚಲನಶೀಲತೆಯನ್ನು ಜನತೆ ಮಾಡುತ್ತದೆ ಎಂದರು.
ಕವಯತ್ರಿ ಬಿ.ಸಿ. ಶೈಲಾ ನಾಗರಾಜ್ ಮಾತನಾಡಿ ಇದು ಜನಮುಖಿ ಸಾಹಿತ್ಯದ ಕಾಲಘಟ್ಟ. ಕವಿತೆ ಬೆಳಕಾಗಬೇಕಾದ ಅನಿವಾರ್ಯತೆ ಇರುವ ಪ್ರಸ್ತುತದಲ್ಲಿ ಕಾವ್ಯಕ್ಕೂ ಹೊಸ ಚಳವಳಿಯ ಆಶಯವಿದೆ. ಈ ನಿಟ್ಟಿನಲ್ಲಿ ಶೈನಾ ಅಧ್ಯಯನ ಸಂಸ್ಥೆ ಜನಮುಖಿ ಸಾಹಿತ್ಯದ ಪ್ರಚಾರಾಂದೋಲನದಲ್ಲಿ ಕ್ರಿಯಾಶೀಲವಾಗಿದೆ. ಉದಯೋನ್ಮುಖರ ಒತ್ತಾಸೆಯಾಗುವುದರ ಜತೆಗೆ ಕಾವ್ಯ ಪ್ರೀತಿಯನ್ನು ಹಂಚುವ ನಿಟ್ಟಿನಲ್ಲಿ ಕಾವ್ಯಾಧ್ಯಯನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ಡಾ. ಎಸ್.ಪಿ. ಪದ್ಮಪ್ರಸಾದ್, ಎನ್. ನಾಗಪ್ಪ, ಸುಶೀಲಾ ಸದಾಶಿವಯ್ಯ ಉಪಸ್ಥಿತರಿದ್ದರು. ಜರಗನಹಳ್ಳಿ ಶಿವಶಂಕರ್ ಹಾಗೂ ಕೆ.ಬಿ. ಸಿದ್ದಯ್ಯ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಸಿ.ಎನ್. ಸುಗುಣಾದೇವಿ, ಸಿ.ಎಲ್. ಸುನಂದಮ್ಮ, ಡಾ. ಕೆ.ಬಿ. ರಂಗಸ್ವಾಮಿ, ಶಿವರುದ್ರಯ್ಯ ಮಾತನಾಡಿದರು. ರಮ್ಯ ಭಾವಗೀತೆ ಹಾಡಿದರು. ದೊಂಬರನಹಳ್ಳಿ ನಾಗರಾಜ್ ಸ್ವಾಗತಿಸಿ ರಂಗಮ್ಮ ಹೊದೇಕಲ್ ನಿರೂಪಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement