ಕಾಲುಬಾಯಿ ಜ್ವರದಿಂದ ಸತ್ತ ರಾಸಿಗೆ ಪರಿಹಾರ
ಚಿಕ್ಕನಾಯಕನಹಳ್ಳಿ: ಕಾಲು ಬಾಯಿ ಜ್ವರಕ್ಕೆ ಸಕಾಲದಲ್ಲಿ ಚಿಕಿತ್ಸೆ ದೊರೆಯದಿದ್ದರೆ ರಾಸುಗಳು ಮರಣ ಹೊಂದುವ ಸಾಧ್ಯತೆಯಿರುವುದರಿಂದ ರೈತರು ಸಕಾಲದಲ್ಲಿ ಚಿಕಿತ್ಸೆ ಮಾಡಿಸಬೇಕೆಂದು ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಎಂ.ಪಿ. ಶಶಿಕುಮಾರ್ ನುಡಿದರು.
ಅವರು ಇಲಾಖೆಯ ಕಚೇರಿಯಲ್ಲಿ ಕಾಲುಬಾಯಿ ಜ್ವರದಿಂದ ಸತ್ತ ರಾಸುಗಳಿಗೆ ಪರಿಹಾರ ಧನದ ಚೆಕ್ ವಿತರಿಸಿ ಮಾತನಾಡುತ್ತಿದ್ದರು. ಶೆಟ್ಟೀಕೆರೆ ಹೋಬಳಿ ಗೋಪಾಲನಹಳ್ಳಿಯ ಪಾರ್ವತಮ್ಮ ಎಂಬುವರ 10ತಿಂಗಳ ಹೆಣ್ಣುಕರು ಕಾಲುಬಾಯಿ ಜ್ವರದಿಂದ ಇತ್ತೀಚೆಗೆ ಸತ್ತಿದ್ದು, ಸದರಿ ಮಾಲೀಕರಿಗೆ ಸರ್ಕಾರದಿಂದ ಮಂಜೂರಾಗಿ ಬಂದ ಪರಿಹಾರ ಚೆಕ್ ವಿತರಿಸಿದರು. ಕಳೆದ ಹಲವಾರು ವರ್ಷಗಳಿಂದ ಮಳೆ ಪ್ರಮಾಣ ಕಡಿಮೆಯಾಗಿದ್ದು, ಹೈನುಗಾರಿಕೆಯಿಂದ ರೈತರು ಇಂದು ಸಮಾಧಾನಕರ ಜೀವನ ನಡೆಸುತ್ತಿದ್ದು, ಈ ರೀತಿ ಆಕಸ್ಮಿಕ ರೋಗಗಳಿಗೆ ತುತ್ತಾಗಿ ರಾಸುಗಳು ಸತ್ತರೆ ರೈತರು ಜೀವನ ನಿರ್ವಹಣೆಗೆ ಬಹಳ ತೊಂದರೆಯಾಗುವುದನ್ನು ತಪ್ಪಿಸಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ರೈತ ಮಹಿಳೆ ಗೋಪಾಲನಹಳ್ಳಿ ಪಾರ್ವತಮ್ಮ,ಇಲಾಖೆಯ ಡಾ. ಕಾಂತರಾಜು, ಸಿಬ್ಬಂದಿ ಭಾರತಿ ಮುಂತಾದವರಿದ್ದರು.