ಸೂಕ್ತ ಕ್ರಮ: ಸುಜಾತಮ್ಮ ಸ್ಪಷ್ಟನೆ
ಪಾವಗಡ: ನಿರ್ಲಕ್ಷ್ಯ, ಕಳಪೆ ಆಹಾರ ಪದಾರ್ಥಗಳ ಪೂರೈಕೆಗೆ ಸಂಬಂಧಪಟ್ಟಂತೆ ಸಿಡಿಪಿಒ ಉಷಾ ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಿಲ್ಲಾ ಉಪ ನಿರ್ದೇಶಕಿ ಸುಜಾತಮ್ಮ ಸ್ಪಷ್ಟಪಡಿಸಿದರು.
ಕಳಪೆ ಆಹಾರ ಪದಾರ್ಥಗಳ ಪೂರೈಕೆಗೆ ಸಂಬಂಧಪಟ್ಟಂತೆ ಅವರು ಮಂಗಳವಾರ ಪಟ್ಟಣದ ಸಿಡಿಪಿಒ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದರು. ಅಂಗನವಾಡಿ ಕೇಂದ್ರಗಳಿಗೆ ಕಳಪೆ ಆಹಾರ ಪದಾರ್ಥಗಳು ಸರಬರಾಜು ಆಗಿರುವ ಬಗ್ಗೆ ದೃಢಪಟ್ಟಿದ್ದು, ಈ ಬಗ್ಗೆ ಸೂಕ್ತ ಕ್ರಮ ಜರುಗಿಸಿ ವರದಿ ಸಲ್ಲಿಸುವಲ್ಲಿ ಇಲಾಖೆ ಸಿಡಿಪಿಒ ನಿರ್ಲಕ್ಷ್ಯ ವಹಿಸಿರುವುದರ ವಿರುದ್ಧ ಸೂಕ್ತ ಕ್ರಮ ಜರುಗಿಸುವುದಾಗಿ ತಿಳಿಸಿದರು.
ತಾಲೂಕಿನ ಪೊನ್ನಸಮುದ್ರ, ಎತ್ತಿನಹಳ್ಳಿ, ಕೋಟಗುಡ್ಡ, ರಾಚಮಾರನಹಳ್ಳಿ, ಬೂದಿಬೆಟ್ಟ ಅರಕ್ಯಾತನಹಳ್ಳಿ ಹಾಗೂ ಇತರೆ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಲಾಗಿದ್ದು ಕಳಪೆ ಆಹಾರ ಪದಾರ್ಥಗಳ ದೂರುಗಳನ್ನು ಬಿಟ್ಟರೆ ಅಂಗನವಾಡಿ ಕೇಂದ್ರಗಳು ಸುಗಮವಾಗಿ ನಡೆಯುತ್ತಿರುವುದಾಗಿ ಅವರು ತಿಳಿಸಿದರು. ಅಂಗನವಾಡಿ ಭೇಟಿ ನೀಡುವ ಮಾಹಿತಿ ಮೊದಲೇ ನೀಡದೇ ತಾಲೂಕಿನ ಗಡಿ ಭಾಗದ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿ ಎಂದು ಸಂಘಟನೆಗಳ ಪದಾಧಿಕಾರಿಗಳು ಒತ್ತಾಯಿಸಿದರು.