ಅಹೋ ರಾತ್ರಿ ಧರಣಿ ಮುಕ್ತಾಯ
ತುರುವೇಕೆರೆ: ಕಳೆದ ಎರಡು ದಿನಗಳಿಂದ ಹೇಮಾವತಿ ನಾಲಾ ಕಚೇರಿ ಮುಂಭಾಗ ಟಾಸ್ಕ್ ವರ್ಕ್ಸ್ ದಿನಗೂಲಿ ನೌಕರರು ನಡೆಸುತ್ತಿದ್ದ ಅಹೋರಾತ್ರಿ ಧರಣಿ ಸತ್ಯಾಗ್ರಹ, ಅಧಿಕಾರಿಗಳು ನೀಡಿದ ಭರವಸೆಯ ಮೇರೆಗೆ ಮುಕ್ತಾಯ ಕಂಡಿದೆ.
ದಿನಗೂಲಿ ನೌಕರರು ತಮ್ಮನ್ನು ಕಾಯಂಗೊಳಿಸಬೇಕು ಹಾಗೂ ವರ್ಷ ಪೂರ್ತಿ ಕೆಲಸಕ್ಕೆ ತೆಗೆದುಕೊಳ್ಳಬೇಕು ಎಂಬ ಒತ್ತಾಯ ಸರ್ಕಾರದಿಂದ ಮಾತ್ರ ಬಗೆಹರಿಸಲು ಸಾಧ್ಯ. ಆದರೆ ಸ್ಥಳೀಯವಾಗಿ ಬಗೆಹರಿಸಬಹುದಾದ ಸಮಸ್ಯೆಗಳನ್ನು ಮುಂಬರುವ ಖಚಿತಪಡಿಸಿದ ದಿನಾಂಕದಂದು ಸಂಬಂಧಿಸಿದ ಅಧಿಕಾರಿಗಳು ಹಾಗೂ ಎಂಜಿನಿಯರ್ರ ಸಮ್ಮುಖ ಬಗೆಹರಿಸುವ ಭರವಸೆಯನ್ನು ಹೇಮಾವತಿ ನಾಲಾ ಸೂಪರಿಂಟೆಂಡೆಂಟ್ ಎಂಜಿನಿಯರ್ ರಾಜೇಗೌಡ ಮುಷ್ಕರ ನಿರತರಿಗೆ ನೀಡಿದರು.
ಹಲವಾರು ದಿನಗೂಲಿ ನೌಕರರಿಗೆ ದಿನಗೂಲಿ ನೀಡದಿರುವ ಬಗ್ಗೆ ಚರ್ಚಿಸಿ ಸಂಬಂಧಪಟ್ಟ ಎಂಜಿನಿಯರ್ ಅವರನ್ನು ಸ್ಥಳಕ್ಕೆ ಕರೆಸಿ ದಿನಗೂಲಿ ನೌಕರರಿಗೆ ಸೂಕ್ತ ನ್ಯಾಯ ದೊರಕಿಸಿಕೊಡುವ ಭರವಸೆ ನೀಡಿದರು. ಸ್ಥಳಕ್ಕೆ ತಹಸೀಲ್ದಾರ್ ನಂಜಪ್ಪ ಆಗಮಿಸಿದ್ದರು. ಮುಂಬರುವ ನಿಗದಿತ ದಿನದಂದು ತಾವೂ ಸಭೆಗೆ ಆಗಮಿಸಿ ದಿನಗೂಲಿ ನೌಕರರ ಸಮಸ್ಯೆಯನ್ನು ಪರಿಹರಿಸುವುದಾಗಿ ಹೇಳಿದರು.
ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವ ಮೂಲಕ ಸುಸಂಸ್ಕೃತರನ್ನಾಗಿಸಿ: ಸ್ವಾಮೀಜಿ
ಗುಬ್ಬಿ: ಮಾನವೀಯ ಮೌಲ್ಯಗಳು ಕುಸಿಯುತ್ತಿರುವ ಇಂದಿನ ದಿನಗಳಲ್ಲಿ ಜೈನ ಸಮುದಾಯ ಬಂಧುಗಳು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವ ಮೂಲಕ ಅವರನ್ನು ಸುಸಂಸ್ಕೃತರನ್ನಾಗಿ ಮಾಡುವತ್ತ ಚಿಂತನೆ ಮಾಡಬೇಕೆಂದು ಶ್ರೀಕ್ಷೇತ್ರ ಕಂಬದಹಳ್ಳಿಯ ಭಾನುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯಮಹಾಸ್ವಾಮೀಜಿ ಕರೆ ನೀಡಿದರು.
ತಾಲೂಕಿನ ಅದಲಗೆರೆ ಗ್ರಾಮದ ಗೃಹ ಚೈತ್ಯಾಲಯದಲ್ಲಿ 1008 ಶ್ರೀ ಶಾಂತಿನಾಥ ತೀರ್ಥಂಕರರ ಮೂರನೆಯ ವಾರ್ಷಿಕ ಪೂಜಾ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಆದುನೀಕತೆಯತ್ತ ಸಾಗುತ್ತಿರುವ ಪ್ರಸ್ತುತ ದಿನಗಳಲ್ಲಿ ನಮ್ಮ ಸಾಂಸ್ಕೃತಿಕ ಮೌಲ್ಯಗಳು ಮರೆಯಾಗುತ್ತಿರುವ ಸಂದರ್ಭದಲ್ಲಿ ಪ್ರತಿಯೊಬ್ಬರೂ ನಮ್ಮ ಧರ್ಮ ಮತ್ತು ಧಾರ್ಮಿಕ ಪರಂಪರೆಗಳನ್ನು ಉಳಿಸಿ ಬೆಳೆಸುವತ್ತ ಮುಂದಾಗಬೇಕೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಜೈನ ಸಮುದಾಯದ ಹಿರಿಯರು ಹಾಗೂ ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಸಹಕರಿಸಿದವರನ್ನು ಸನ್ಮಾನಿಸಲಾಯಿತು.