ಕವಿಗಳು ಹೊಂದಾಣಿಕೆ ಮಾಡಿಕೊಳ್ಳ ಕೂಡದು
ತುಮಕೂರು: ಹೊಸ ಬರಹಗಾರರನ್ನು ಸೃಷ್ಟಿಸುವ ಅವರಿಗೊಂದು ಸಮರ್ಥ ವೇದಿಕೆಯನ್ನು ಒದಗಿಸುವ ಕೆಲಸವನ್ನು ಒಂದು ಕಾಲಘಟ್ಟದಲ್ಲಿ ಚಿಂತಕ-ಲೇಖಕ ಪಿ.ಲಂಕೇಶ್ ಮಾಡಿದರು. ಅದೇ ಹಾದಿಯಲ್ಲಿ ತುಮಕೂರು ನಗರದಲ್ಲಿ ಸ್ಥಾಪನೆಯಾಗಿರುವ ಸಮರ್ಥ ಸಾಹಿತ್ಯ ಭಂಡಾರ ಸಾಗಿದೆ ಎಂದು ಕವಿ-ವಿಮರ್ಶಕ ಡಾ. ರವಿಕುಮಾರ್ ನೀಹ ಅಭಿಪ್ರಾಯಪಟ್ಟರು.
ನಗರದ ರೆಡ್ ಕ್ರಾಸ್ ಭವನದಲ್ಲಿ ತನ್ನ ಮಳಿಗೆಯ ಮುಂಭಾಗದಲ್ಲಿ ಸಮರ್ಥ ಸಾಹಿತ್ಯ ಭಂಡಾರ ಏರ್ಪಡಿಸಿದ್ದ ರಾಷ್ಟ್ರಕವಿಗಳ ಸ್ಮರಣೆಯ ಕವಿಗೋಷ್ಠಿ ಅಧ್ಯಕ್ಷತೆ ಅವರು ಮಾತನಾಡಿದರು. ಇಂದು ಸಮಾಜ ಹಲವು ತಲ್ಲಣಗಳನ್ನು ಸಂಕಟಗಳನ್ನು ಎದುರಿಸುತ್ತಿದೆ. ಅವುಗಳನ್ನು ಎದುರಿಸುವ ಎದೆಗಾರಿಕೆ ಜನಸಾಮಾನ್ಯರಲ್ಲಿ ಇಲ್ಲವಾಗಿದೆ. ಇಂತಹ ಸಂದರ್ಭದಲ್ಲಿ ನಿಜವಾದ ಕವಿಯಾದವನು ತಲ್ಲಣಗಳಿಗೆ, ಸಂಕಟಗಳಿಗೆ ಧ್ವನಿಯಾಗಬೇಕು. ರೂಪಕಗಳನ್ನು ಬಳಸಿ ಸಮರ್ಥವಾಗಿ ಕಾವ್ಯವನ್ನು ಕಟ್ಟಬೇಕು. ಆರೋಗ್ಯವಂತ ಸಮಾಜವನ್ನು ಕಟ್ಟಲು ಮನಸು ಮನಸುಗಳನ್ನು ಕೂಡಿಸಲು ಶ್ರಮಿಸಬೇಕು. ಹೊಂದಾಣಿಕೆ ಅಥವಾ ಹೋರಾಟ ಇವೆರಡರಲ್ಲಿ ಹೋರಾಟವನ್ನು ಕೈಗೆತ್ತಿಗೊಳ್ಳಬೇಕು. ಹೋರಾಟದ ದಾರಿಯಲ್ಲಿ ಮುನ್ನಡೆಯಬೇಕು ಎಂದು ನೀಹ ಕರೆ ನೀಡಿದರು.
ಅಂತರಂಗದ ಪಿಸುಮಾತು: ಇದಕ್ಕೂ ಮೊದಲು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿದ ಕವಯತ್ರಿ ಡಾ. ಗೀತಾ ವಸಂತ ಮಾತನಾಡಿ ಕವಿತೆ ಎನ್ನುವುದು ಯಾವತ್ತೂ ಅಂತರಂಗದ ಪಿಸುಮಾತು ಆಗಿರುತ್ತದೆ. ನಾವೇ ಸೃಷ್ಟಿಸಿಕೊಂಡು ಲೋಕದ ಗದ್ದಲಗಳ ನಡುವೆ ಸಂತನಂತೆ ನಿಂತು ನಿಶ್ಯಬ್ಧವಾಗಿ ಬರೆಯಬೇಕು. ಕವಿತೆ ಸಮಾಜವನ್ನು ಶುದ್ಧೀಕರಿಸುವುದರ ಜೊತೆಗೆ ಹುಡುಕಾಟವನ್ನು ಮಾಡುತ್ತದೆ. ನಮ್ಮನ್ನು ನಾವು ಶೋಧಿಸಿಕೊಳ್ಳವಂತೆ ಮಾಡುತ್ತದೆ. ಆದ್ದರಿಂದ ಕವಿಯಾದವನು ಅದಕ್ಕೂ ಮೊದಲು ಕಿವಿಯಾಗಬೇಕು. ಎಲ್ಲವನ್ನು ತಾಳ್ಮೆಯಿಂದ ಕೇಳಿಸಿಕೊಳ್ಳಬೇಕು. ವಿವೇಕದಿಂದ ಬರೆಯಬೇಕು. ಅಂತರಂಗದ ಮೂಲಕ ಬಹಿರಂಗದೆಡೆಗೆ ನಡೆಯಬೇಕು ಎಂದು ಹೇಳಿದರು. ಎರಡು ಗಂಟೆಗಳ ಕಾಲ, ಶಬ್ದಗಳ ನಡುವೆ ನಿಶ್ಯಬ್ಧವಾಗಿ ನಡೆದ ಕವಿಸಮ್ಮೇಳನದಲ್ಲಿ ಮೂವತ್ತಕಿಂತಲೂ ಹೆಚ್ಚು ಕವಿಗಳು ತುಂಬ ಸಡಗರ ಸಂಭ್ರಮದೊಂದಿಗೆ ಕವಿತೆ ವಾಚಿಸಿದರು. ಕೆಲವರು ಸ್ವರಚಿತ ಕವಿತೆಗಳನ್ನು ಓದಿದರು. ಮತ್ತೆ ಕೆಲವರು ಹಾಡಿದರು. ಕೆಲವರು ಬೇರೆ ಕವಿಗಳು ಬರೆದ ಕವನಗಳನ್ನು ವಾಚಿಸಿದರು. ಕವಿಗೋಷ್ಠಿಯ ನಡುವೆ ನ್ಯಾನೋ ಕಥೆಯೊಂದರ ಓದೂ ನಡೆಯಿತು.
ಹಿರಿಯ ಕವಿ ಸಿ.ಎಚ್. ಮರಿದೇವರು ಉಪಸ್ಥಿತರಿದ್ದು ಕವಿತೆ ಓದಿ ಕಾವ್ಯದ ಆಶಯಗಳನ್ನು ಮೆಲುಕು ಹಾಕಿದರು. ಮಾಧ್ಯಮ ಅಕಾಡೆಮಿ ಪುರಸ್ಕೃತರಾದ ಎಚ್.ಎಸ್. ರಾಮಣ್ಣ ಮತ್ತು ಉಗಮ ಶ್ರೀನಿವಾಸ್ ಅವರು ಸಮರ್ಥ ಸಾಹಿತ್ಯ ಭಂಡಾರ ನೀಡಿದ ಗೌರವ ಸಮರ್ಪಣೆ ಸ್ವೀಕರಿಸಿ ಕೃತಜ್ಞತೆಯ ಜವಾಬ್ದಾರಿಯ ಮಾತುಗಳನ್ನಾಡಿದರು. ಹಿರಿಯ ಓದುಗರಾದ ಎಚ್. ಈಶ್ವರಪ್ಪ, ಶ್ರೀಬಸಪ್ಪ, ಎನ್. ಸದಾಶಿವಯ್ಯ, ರಾಜೀವ ಅಮ್ಮನಘಟ್ಟ, ಸಣ್ಣಿರಪ್ಪ, ಜಂಗಮರಹಳ್ಳಿ, ಗುಬ್ಬಚ್ಚಿ ಸತೀಶ್, ಮನೋಜ್ ಮಕರಂದ, ಪ್ರವೇಣಿ, ಶಿವಕುಮಾರ್ ಸಾರ್ಥವಳ್ಳಿ, ಮಡೆನೂರು ಮತ್ತಿತರು ಕವನ ಓದಿದರು.
ಭಂಡಾರದ ಸಂಚಾಲಕರಾದ ಅಶೋಕ್ ಕುಮಾರ್, ಚಂದ್ರಶೇಖರ್ ಕೆ.ಎನ್. ಉಪಸ್ಥಿತರಿದ್ದರು. ಸುರಭಿ ಅವರು ಪ್ರಾರ್ಥಿಸಿದರು. ರಾಣಿ ಚಂದ್ರಶೇಖರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಎಚ್. ಮಲ್ಲಿಕಾರ್ಜುನ್ ವಂದಿಸಿದರು. ಹೇಮಾ ಮಲ್ಲಿಕಾರ್ಜುನ್ ನಿರೂಪಿಸಿದರು.