ಸಾಹಿತ್ಯ ಲೋಕದಲ್ಲಿ ವೈಚಾರಿಕ ಜಗತ್ತನ್ನು ಕಟ್ಟಿದ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ
ತಿಪಟೂರು: ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಿಂಚಿತ್ತೂ ಕಡೆಗಣಿಸದೆ ಸಾಹಿತ್ಯ ಲೋಕದಲ್ಲಿ ವೈಚಾರಿಕ ಜಗತ್ತನ್ನು ಕಟ್ಟಿದ ನೇತಾರ ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಎಂದು ಸಂಸ್ಕೃತಿ ಚಿಂತಕ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಪ್ರೊ. ಎಸ್.ಬಿ. ಸಿದ್ದರಾಮಯ್ಯ ತಿಳಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನುಡಿ ಮಂಟಪ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕಾಲೇಜಿನ ಡಾ. ಅಬ್ದುಲ್ ಕಲಾಂ ಸಭಾಂಗಣದಲ್ಲಿ ಆಯೋಜಿಸಿದ್ದ ರಾಷ್ಟ್ರಕವಿ ಡಾ. ಜಿ.ಎಸ್.ಎಸ್ ನುಡಿನಮನ ಕಾರ್ಯಕ್ರಮದಲ್ಲಿ ಜಿ.ಎಸ್.ಎಸ್. ಅವರ ಬದುಕು ಮತ್ತು ಬರಹದ ಬಗ್ಗೆ ಉಪನ್ಯಾಸ ನೀಡಿದ ಅವರು ಸಾಹಿತ್ಯ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡುವ ಮೂಲಕ ಕನ್ನಡ ನಾಡಿನ ಸಂಸ್ಕೃತಿಯನ್ನು ಕಟ್ಟಿದ ಪ್ರಮುಖರಲ್ಲಿ ಜಿ.ಎಸ್.ಎಸ್. ಒಬ್ಬರು. ಅವರನ್ನು ಕೇವಲ ಕವಿಯಾಗಿ ನೋಡುವಂತದಲ್ಲ, ಈ ನಾಡು, ನುಡಿ, ಸಂಸ್ಕೃತಿಗೆ ಹಾಗೂ ಸಾಹಿತ್ಯ ಲೋಕಕ್ಕೆ ಬಹಳ ಮುಖ್ಯವಾದ ಕೊಡುಗೆ ನೀಡಿದ್ದು, ಕೇಂದ್ರದ ನಿರ್ದೇಶಕರಾಗಿ ಮಾಡಿದಂತಹ ಕಾರ್ಯಬಾಹುಗಳೆಲ್ಲವೂ ಅವರ ಸಾಮರ್ಥ್ಯವನ್ನು ತಿಳಿಸುತ್ತವೆ. ಕುವೆಂಪು ಅವರ ಆಶಯಗಳನ್ನು ಬೆಳೆಸುವ ಮೂಲಕ ಅವರು ದೀಪದ ಕವಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು ಎಂದರು.
ಕೊಡುಗೆ ನೀಡಿ: ಸಾಹಿತಿ ಪ್ರೊ. ಬಿಳಿಗೆರೆ ಕೃಷ್ಣಮೂರ್ತಿ ಮಾತನಾಡಿ ಎರಡು ತಲೆಮಾರುಗಳ ವೈಚಾರಿಕತೆಯನ್ನು ಸಂವೇದಿಸಿದ ಕವಿಗಳಲ್ಲಿ ಜಿ.ಎಸ್.ಎಸ್ ಒಬ್ಬರಾಗಿದ್ದರು. ದಲಿತ, ಹಿಂದುಳಿದ ವರ್ಗಗಳನ್ನು ಆಧಾರವಾಗಿಟ್ಟುಕೊಂಡು ಹಲವು ಕೃತಿಗಳನ್ನು ರಚಿಸಿ, ಅವರಲ್ಲಿದ್ದಂತಹ ತಾರತಮ್ಯಗಳನ್ನು ಹೋಗಲಾಡಿಸಲು ಶ್ರಮಿಸಿದ್ದಾರೆ ಎಂದರಲ್ಲದೆ ವಿದ್ಯಾರ್ಥಿಗಳು ಇಂತಹ ಆದರ್ಶ ಕವಿಗಳ ಕೃತಿಗಳನ್ನು ಹೆಚ್ಚೆಚ್ಚು ಓದುವ ಮೂಲಕ ಸಾಹಿತ್ಯ ಲೋಕಕ್ಕೆ ತಮ್ಮದೇ ಕೊಡುಗೆ ನೀಡಬೇಕೆಂದರು.
ಕಸಾಪ ತಾ. ಅಧ್ಯಕ್ಷ ಉಜ್ಜಜ್ಜಿ ರಾಜಣ್ಣ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಉರಗ ಪ್ರೇಮಿ ಬಿ.ಜಿ.ರವಿಕುಮಾರ್, ಕಸಾಪ ಕಾರ್ಯದರ್ಶಿ ದಿವಾಕರ್, ಸದಸ್ಯರಾದ ಪರಶುರಾಮನಾಯಕ್, ಟಿ.ಶಾರದಮ್ಮ, ಜಯರಾಮ್, ಸೋಮಶೇಖರ್, ಸಿಡಿಸಿ ಸಮಿತಿ ಸದಸ್ಯ ರೇಣುಕಪ್ರಸಾದ್, ಭೂಮಿ ರಂಗಶಾಲೆ ನಿರ್ದೇಶಕ ಸತೀಶ್, ಚಂದ್ರಶೇಖರ್, ಉಪನ್ಯಾಸಕರಾದ ಡಾ.ವೆಂಕಟೇಶ್, ಯೋಗೀಶ್, ನವೀನ್, ಹರೀಶ್, ಉಮಾ ಮತ್ತಿತರರಿದ್ದರು.
ಶ್ವೇತಾ ಪ್ರಾರ್ಥಿಸಿ, ಪ್ರೊ.ಯಶೋಧಾ ಸ್ವಾಗತಿಸಿ, ಕಸಾಪ ಕಸಬಾ ಹೋಬಳಿ ಅಧ್ಯಕ್ಷ ಮಾಕಳ್ಳಿ ಶಿವಕುಮಾರ್ ನಿರೂಪಿಸಿ, ಬೈರೇಶ್ ವಂದಿಸಿದರು.