ಎತ್ತಿನಹೊಳೆ ವಿರೋಧಿ ಧರಣಿ ಐದನೇ ದಿನಕ್ಕೆ
ಕ.ಪ್ರ.ವಾರ್ತೆ ತುಮಕೂರು ಫೆ.28
ಜಿ.ಎಸ್. ಪರಮಶಿವಯ್ಯ ವರದಿ ಜಾರಿಗೊಳಿಸಬೇಕೆಂದು ಒತ್ತಾಯಿಸಿ ಕನ್ನಡಸೇನೆ ವತಿಯಿಂದ ತುಮಕೂರಿನ ಟೌನ್‌ಹಾಲ್‌ನಲ್ಲಿ ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹ 5ನೇ ದಿನಕ್ಕೆ ಕಾಲಿಟ್ಟಿದ್ದು, ಶಿವಗಂಗೆಯ ಲಕ್ಷ್ಮೀಪೀಠದ ಜ್ಞಾನಾನಂದಪುರಿ ಸ್ವಾಮಿಗಳು, ಅಂಗವಿಕಲರ ಒಕ್ಕೂಟದ ಅಧ್ಯಕ್ಷರು ಪದಾಧಿಕಾರಿಗಳು ಧರಣಿಯಲ್ಲಿ ಪಾಲ್ಗೊಂಡಿದ್ದರು.
3 ಜಿಲ್ಲೆಗಳಿಗೆ ಮಾತ್ರ ನೀರು: ಈ ವೇಳೆ ಮಾತನಾಡಿದ ಜ್ಞಾನಾನಂದಪುರಿ ಶ್ರೀಗಳು, ಜಿ.ಎಸ್. ಪರಮಶಿವಯ್ಯನವರ ವರದಿಯಿಂದ 9 ಜಿಲ್ಲೆಗಳಿಗೆ ನೀರು ದೊರಕಿದರೆ ಎತ್ತಿನಹೊಳೆಯಿಂದ ಕೇವಲ 3 ಜಿಲ್ಲೆಗಳಿಗೆ ಮಾತ್ರ ನೀರು ದೊರಕಲಿದೆ. ಜತೆಗೆ ಎತ್ತಿನಹೊಳೆ ಯೋಜನೆಯ ನೀಲನಕ್ಷೆಯಿಲ್ಲ. ಜತೆಗೆ ಪೈಪ್‌ಲೈವ್ ಮೂಲಕ ಹಾದು ಹೋಗಲಿರುವ ಈ ಎತ್ತಿನಹೊಳೆ ಯೋಜನೆಯಿಂದ ಅಂತರ್ಜಲ ವೃದ್ಧಿಯಾಗುವುದಿಲ್ಲ. ಹೀಗಾಗಿ ಸರ್ಕಾರ ಕೂಡಲೇ ಎತ್ತಿನಹೊಳೆ ಯೋಜನೆಯನ್ನು ಸ್ಥಗಿತಗೊಳಿಸಬೇಕೆಂದು ಶ್ರೀಗಳು ಆಗ್ರಹಿಸಿದರು.
ರೈತ ಸಂಘದ ಗರುಡಯ್ಯ ಮಾತನಾಡಿ, ಎತ್ತಿನಹೊಳೆ ಯೋಜನೆ ಚುನಾವಣೆಗಾಗಿ ಪ್ರಕಟಿಸಿರುವ ಯೋಜನೆಯಾಗಿದೆ. ರೈತರಿಗೆ ಅನುಕೂಲವಲ್ಲದ ಯೋಜನೆ ಇದಾಗಿದೆ. ಆದ್ದರಿಂದ ರೈತರು ಸಂಪೂರ್ಣವಾಗಿ ವಿರೋಧಿಸುತ್ತೇವೆ. ಪರಮಶಿವಯ್ಯ ವರದಿಯನ್ನು ಬೆಂಬಲಿಸುತ್ತೇನೆ ಎಂದು ತಿಳಿಸಿದರು.
ಸ್ವಾತಂತ್ರ್ಯ ಹೋರಾಟಗಾರರಾದ ಟಿ.ಆರ್. ರೇವಣ್ಣ, ಬಸವಸೇನೆಯ ಜಿಲ್ಲಾಧ್ಯಕ್ಷ ಪಿ. ಗಂಗರಾಜು, ಕನ್ನಡ ಸೇನೆ ಜಿಲ್ಲಾಧ್ಯಕ್ಷ ದನಿಯಾಕುಮಾರ್, ಆರ್. ಎನ್. ವೆಂಕಟಾಚಲ, ವಿಠಲ್, ಸತೀಶ್, ಕೆ.ಆರ್. ದಯಾಶಂಕರ್, ಜಿ.ಎಸ್. ನಂದೀನಾಥ್, ನಗರಸಭಾ ಮಾಜಿ ಉಪಾಧ್ಯಕ್ಷ ಶ್ರೀನಿವಾಸಪ್ರಸಾದ್, ಟಿ.ಎನ್. ಮಂಜುಳಾ, ಡಾ.ಎಲ್ಲಪ್ಪ, ಟಿ.ವಿ. ವೆಂಕಟೇಶ್ ಉಪಸ್ಥಿತರಿದ್ದರು.