ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕೊಳೆಗೇರಿ ವಸತಿ ಸಮುಚ್ಚಯಕ್ಕೆ ಕಡೆಗೂ ಚಾಲನೆ

Rashmi Kasaragodu
Updated On : 1 Mar 2014, 12:54 pm

ಕ.ಪ್ರ. ವಾರ್ತೆ    ತುಮಕೂರು    ಫೆ.28
ತುಮಕೂರು ನಗರ ಕೊಳೆಗೇರಿ ನಿವಾಸಿಗಳ ವಸತಿ ಸಮುಚ್ಚಯಕ್ಕೆ ಕಡೆಗೂ ಚಾಲನೆ ದೊರೆತಿದೆ. ಕೊಳಗೇರಿ ನಿವಾಸಿಗಳ ಬಹುವರ್ಷಗಳ ಬೇಡಿಕೆಗೆ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ಶುಕ್ರವಾರ ತುಮಕೂರು ಸಮೀಪದ ದಿಬ್ಬೂರಿನಲ್ಲಿ ಶಂಕುಸ್ಥಾಪನೆ ನೆರವೇರಿಸುವ ಮೂಲಕ ಚಾಲನೆ ನೀಡಿದ್ದಾರೆ.
ರಾಜೀವ್ ಅವಾಸ್ ಯೋಜನೆಯಡಿಯಲ್ಲಿ ದಿಬ್ಬೂರಿನ ಸರ್ವೆ ನಂಬರ್ 4 ರಲ್ಲಿ ವಸತಿಗಾಗಿ ಮೀಸಲಿಟ್ಟ 10-31 ಎಕರೆ ಪ್ರದೇಶದಲ್ಲಿ ರು. 70 ಕೋಟಿ ವೆಚ್ಚದಲ್ಲಿ, ತುಮಕೂರು ನಗರದ 70 ಕೊಳಗೇರಿಗಳ ನಿವಾಸಿಗಳಿಗೆ 1200 ಮನೆಗಳನ್ನು ನಿರ್ಮಿಸಿಕೊಡುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಕೊಳಗೇರಿ ಮುಕ್ತ ಭಾರತ ನಿರ್ಮಾಣದ ದೃಷ್ಟಿಯಿಂದ 2009 ರಲ್ಲಿ ಕೇಂದ್ರ ಸರ್ಕಾರ ರೂಪಿಸಿದ ರಾಜೀವ್ ಆವಾಸ್ ಯೋಜನೆಯಡಿಯಲ್ಲಿ ಈ ವಸತಿ ಸಮುಚ್ಚಯ ನಿರ್ಮಿಸಲು ನಿರ್ಧರಿಸಲಾಯಿತು ಎಂದು ತಿಳಿಸಿದರು. ತುಮಕೂರು ನಗರದಲ್ಲಿ ಎಳಾರಬಂಡೆ, ಬೆಳಗುಂಬರಸ್ತೆ ಪಕ್ಕ, ಶಾಂತಿ ಹೋಟೆಲ್ ಹಿಂಭಾಗ, ಗುಬ್ಬಿ ವೀರಣ್ಣ ರಂಗಮಂದಿರದ ಹಿಂಭಾಗ, ಅಮಾನಿಕೆರೆ ಏರಿ ಮೇಲೆ, ಮಂಡಿಪೇಟೆ ದೊಡ್ಡಚರಂಡಿ ಮೇಲೆ, ಮರಳೂರು ಕಾಲೋನಿಯ ಹೈಟೆನ್‌ಷನ್ ಲೈನ್ ಕೆಳಗೆ ವಾಸಿಸುತ್ತಿರುವ ಕೊಳಗೇರಿಗಳ 1200 ನಿವಾಸಿಗಳಿಗೆ ಈ ವಸತಿ ಸಮುಚ್ಚಯದಲ್ಲಿ ವಸತಿ ಕಲ್ಪಿಸಲಾಗುವುದು ಎಂದು ತಿಳಿಸಿದರು.
15 ತಿಂಗಳಲ್ಲಿ ಪೂರ್ಣಗೊಳಿಸಲು ಸೂಚನೆ: ಈ ವಸತಿ ಸಮುಚ್ಚಯ ನಿರ್ಮಾಣ ಕಾಮಗಾರಿಯನ್ನು 15 ತಿಂಗಳಲ್ಲಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದ ಸಚಿವರು ಉತ್ತಮ ಮರಳು ಮತ್ತು ಸಿಮೆಂಟ್ ಬಳಸುವಂತೆಯೂ ಸೂಚನೆ ನೀಡಿದ ಸಚಿವರು, ಕಟ್ಟಡ ನಿರ್ಮಾಣದಲ್ಲಿ ಹೊಸ ತಂತ್ರಜ್‌ಞಾನವನ್ನು ರೂಡಿಸಿಕೊಳ್ಳುವ ಅಗತ್ಯವಿದೆ ಎಂದರು.
ನಗರಪಾಲಿಕೆಯಲ್ಲಿ ಪರಿಶಿಷ್ಟ ಜಾತಿಯ ಅಭಿವೃಧ್ದಿಗಾಗಿ ಮೀಸಲಿಟ್ಟಿರುವ ಹಣವನ್ನು ಇಲ್ಲಿ ತೊಡಗಿಸುವ ಮೂಲಕ ಫಲಾನುಭವಿ ಭರಿಸಬೇಕಿರುವ ಪಾಲನ್ನು ತುಂಬುವ ಕೆಲಸ ಆಗಬೇಕು ಎಂಧು ವಿಧಾನಪರಿಷತ್ ಸದಸ್ಯ ಡಾ.ಎಂ.ಆರ್. ಹುಲಿನಾಯ್ಕರ್ ಹೇಳಿದರು. ಕೊಳಚೆ ಪ್ರದೇಶದ ಜನರಿಗೆ ವಸತಿ ಸೌಲಭ್ಯ ಕಲ್ಪಿಸಿಕೊಡುವ ಜೊತೆಗೆ ಅವರ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವ ಕೆಲಸವೂ ಆಗಬೇಕಿದೆ ಎಂದರು.
ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದ ಶಾಸಕ ಡಾ.ರಫೀಕ್ ಅಹಮದ್ ಅವರು ತುಮಕೂರು ನಗರದಲ್ಲಿ ಒಟ್ಟು 37 ಕೊಳಚೆ ಪ್ರದೇಶಗಳಿದ್ದು ಈ ಪೈಕಿ 22 ಘೋಷಿತ ಕೊಳಚೆ ಪ್ರದೇಶಗಳಾದರೆ 15 ಗುರುತಿಸಲಾಗಿರುವ ಕೊಳಚೆ ಪ್ರದೇಶಗಳು ಎಂದು ತಿಳಿಸಿದರು.
ಕಳೆದ 20 ವರ್ಷಗಳಲ್ಲಿ ತುಮಕೂರಿನ ಜನಪ್ರತಿನಿಧಿಗಳಾಗಿದ್ದವರು ಒಂದೇ ಒಂದು ನಿವೇಶನವನ್ನೂ ನೀಡಿಲ್ಲ, ಈ ಪ್ರದೇಶದಲ್ಲಿ ವಸತಿ ಸಮುಚ್ಚಯ ನಿರ್ಮಿಸುವ ಮನಸ್ಸು ಮಾಡಲಿಲ್ಲ ಎಂದು ಆರೋಪಿಸಿದರು.
ಮೇಯರ್ ಗೀತಾ ರುದ್ರೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್. ಷಫಿ ಅಹಮದ್, ಜಿಲ್ಲಾಧಿಕಾರಿ ಸತ್ಯಮೂರ್ತಿ, ಜಿಪಂ ಸಿಇಒ ಗೋವಿಂದರಾಜು,  ಪಾಲಿಕೆ ಆಯುಕ್ತ ಆಶಾದ್ ಆರ್ ಷರೀಫ್, ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಲಿ ತಾಂತ್ರಿಕ ನಿರ್ದೇಶಕ ಸಣ್ಣಚಿತ್ತಯ್ಯ ಭಾಗವಹಿಸಿದ್ದರು.




ಫಲಾನುಭವಿಯೂ ಭರಿಸಬೇಕು
ವಸತಿ ಸಮುಚ್ಚಯ ನಿರ್ಮಾಣಕ್ಕೆ ರು. 7 ಕೋಟಿ ವೆಚ್ಚವಾಗಲಿದೆ. ಇದರಲ್ಲಿ ಕೇಂದ್ರ ಸರ್ಕಾರ ಶೇ. 50 ರಷ್ಟು ಅಂದರೆ, ರಾಜ್ಯ ಸರ್ಕಾರ ಶೇ. 40, ಫಲಾನುಭವಿಗಳು ಶೇ. 10 ರಷ್ಟು ಹಣವನ್ನು ಭರಿಸಬೇಕಾಗುತ್ತದೆ. ಈ ಸಮುಚ್ಚಯದಲ್ಲಿ ನಿರ್ಮಾಣವಾಗಿರುವ ಪ್ರತಿ ಮನೆಗೆ 4 ಲಕ್ಷ ರು. ವೆಚ್ಚವಾಗಲಿದ್ದು, ಇದರಲ್ಲಿ ಪ್ರತಿ ಫಲಾನುಭವಿ 41 ಸಾವಿರ ರು.ಗಳನ್ನು ಭರಿಸಬೇಕಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement