ಖಾತ್ರಿ ಅವ್ಯವಹಾರ ಖಂಡಿಸಿ ರೈತರ ಪ್ರತಿಭಟನೆ
ಶಿರಾ: ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೂಲಿ ಕಾರ್ಮಿಕರಿಗೆ ಕೆಲಸ ಹಾಗೂ ಮಾಡಿದ ಕೆಲಸಕ್ಕೆ ಸರಿಯಾದ ಕೂಲಿ ಕೊಡದೆ ಜಿಲ್ಲಾಡಳಿತ ಕೃಷಿಕರಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿ ತಾಲೂಕಿನ ರೈತರು ಇಲ್ಲಿನ ತಾಲೂಕು ಪಂಚಾಯ್ತಿ ಕಚೇರಿ ಎದುರು ಪ್ರತಿಭಟನೆ
ನಡೆಸಿದರು.
ಪ್ರತಿಭಟನೆ ನೇತೃತ್ವ ವಹಿಸಿರುವ ತಾಲೂಕು ರೈತ ಮುಖಂಡ ಬಿ.ಆರ್.ಜನಾರ್ದನ್ ಮಾತನಾಡಿ, ನರೇಗಾ ವಿಷಯದಲ್ಲಿ ಕೂಲಿ ಕಾರ್ಮಿಕರಿಗೆ ಕೂಲಿ ಕೊಡುತ್ತಿಲ್ಲ. ಮತ್ತು ಕೆಲಸ ಕೊಡದೆ ಅಮಾಯಕ ಕೂಲಿ ಕಾರ್ಮಿಕರಿಗೆ ಅಧಿಕಾರಿಗಳು ಅನ್ಯಾಯ ಮಾಡುತ್ತ ಅಳತೆ ಪುಸ್ತಕ ಬರೆಯಲು ಅನುಮತಿ ನೀಡದೆ ಹಾಗೂ ಕೂಲಿ ಕಾರ್ಮಿಕರು ಮಾಡಿರುವ ಕೂಲಿಯ ಎನ್.ಎಂ.ಆರ್. ಅನ್ನು ಹಾಜರಾತಿ ಹಾಕದೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಗ್ರಾಪಂ ಬೀಗ ಎಚ್ಚರಿಕೆ: ಪ್ರತಿಭಟನಾ ಸ್ಥಳಕ್ಕೆ ಜಿಪಂ ಸಿಇಒ ಭೇಟಿ ನೀಡಿ ಸಮಸ್ಯೆ ಪರಿಶೀಲಿಸದಿದ್ದರೆ ತಾಲೂಕಿನ 36 ಗ್ರಾಪಂ ಗಳಿಗೂ ಬೀಗ ಹಾಕಿ ಮುಷ್ಕರವನ್ನು ಮುಂದುವರೆಸಿ ಸಿಇಒ ಅವರ ವಿರುದ್ಧ ಉಗ್ರ ಹೋರಾಟ ಮಾಡುತ್ತೇವೆ ಎಂದರು.
ಅಧಿಕಾರ ದುರ್ಬಳಕೆ ಮಾಡಿಕೊಂಡಿರುವ ಸಿಇಒ ಅವರ ವಿರುದ್ಧ ನಾವು ಪ್ರತಿಭಟನೆ ಮಾಡುತ್ತಿದ್ದು, ಹಾಜರಾತಿ ಹಾಕಿದ ಪಿಡಿಒ ಗಳನ್ನು ಮತ್ತು ಅಳತೆ ಪುಸ್ತಕ ಬರೆದ ಜೆಇ ಗಳನ್ನು ಅಮಾನತ್ತು ಮಾಡಿ ಅಮಾಯಕ ಅಧಿಕಾರಿಗಳನ್ನು ಬಲಿಪಶು ಮಾಡಿರುವ ಸಿಇಒ ಅವರ ವಿರುದ್ಧ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದರು.
ಮಹೇಶ್‌ಕುಮಾರ್, ಲಕ್ಷ್ಮೀಸಾಗರ ಗ್ರಾಪಂ ಅಧ್ಯಕ್ಷ ಮಂಜುನಾಥ್, ಭೂವನಹಳ್ಳಿ ಗ್ರಾಪಂ ಅಧ್ಯಕ್ಷ ಹನುಮಂತರಾಯ, ಕೊಟ್ಟ ಗ್ರಾಪಂ ಅಧ್ಯಕ್ಷ ನಾಗರತ್ನ ಶಂಕರಪ್ಪ, ಗೋಪಾಲದೇವರಹಳ್ಳಿ ಗ್ರಾಪಂ ಅಧ್ಯಕ್ಷೆ ಜಯಮ್ಮ, ತಿಮ್ಮೇಗೌಡ, ಲಿಂಗಣ್ಣ, ಚಿಕ್ಕವೀರೇಗೌಡ ಸೇರಿದಂತೆ ಹಲವರು ಪ್ರತಿಭಟನೆ ನೇತೃತ್ವವಹಿಸಿದ್ದರು.